Airtel Tariff Hike: ಏರಲಿವೆ ಏರ್ಟೆಲ್ ರೀಚಾರ್ಜ್ ಪ್ಯಾಕ್​ಗಳ ಬೆಲೆ

Sunil Bharti Mittal Speaks: ಜನವರಿ ತಿಂಗಳಲ್ಲಿ ಆರಂಭಿಕ ರೀಚಾರ್ಜ್ ಪ್ಲಾನ್​ಗಳ ದರವನ್ನು ಶೇ. 57ರಷ್ಟು ಏರಿಕೆ ಮಾಡಿದ್ದ ಏರ್​ಟೆಲ್ ಸಂಸ್ಥೆ ಇದೀಗ ಎಲ್ಲಾ ರೀತಿಯ ರೀಚಾರ್ಜ್ ಪ್ಲಾನ್​ಗಳ ದರ ಏರಿಕೆಯ ಸುಳಿವನ್ನು ನೀಡಿದೆ.

Airtel Tariff Hike: ಏರಲಿವೆ ಏರ್ಟೆಲ್ ರೀಚಾರ್ಜ್ ಪ್ಯಾಕ್​ಗಳ ಬೆಲೆ
ಏರ್​ಟೆಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 01, 2023 | 12:56 PM

ನವದೆಹಲಿ: ಏರ್​ಟೆಲ್ ಟೆಲಿಕಾಂ ಕಂಪನಿಯ ಡಾಟಾ, ಮೊಬೈಲ್ ಕರೆ ದರಗಳು (Airtel Recharge Plans) ಈ ವರ್ಷ ಏರಿಕೆ ಕಾಣುವ ನಿರೀಕ್ಷೆ ಇದೆ. ಏರ್​ಟೆಲ್​ನ ಛೇರ್ಮನ್ ಸುನೀಲ್ ಭಾರ್ತಿ ಮಿಟ್ಟಲ್ ಅವರು ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಮೊನ್ನೆ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್​ನಲ್ಲಿ (Mobile World Congress) ಮಾತನಾಡುತ್ತಾ ಈ ಬಗ್ಗೆ ಸುಳಿವು ನೀಡಿದ್ದಾರೆ. ಟೆಲಿಕಾಂ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುತ್ತಿಲ್ಲದಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಏರ್​ಟೆಲ್ ಮುಖ್ಯಸ್ಥರು ಹೇಳಿದ್ದಾರೆ.

ಅವರ ಮಾತಿನ ಪ್ರಕಾರ ಏರ್​ಟೆಲ್​ನ ಎಲ್ಲಾ ರೀಚಾರ್ಜ್ ಪ್ಲಾನ್​​ಗಳೂ ಬೆಲೆ ಏರಿಕೆ ಕಾಣಬಹುದು. ಭಾರೀ ಮಟ್ಟದಲ್ಲಲ್ಲವಾದರೂ ಸ್ವಲ್ಪ ಸ್ವಲ್ಪವಾಗಿ ಏರ್​ಟೆಲ್ ದರಗಳ ಏರಿಕೆಯಾಗುವ ಸಾಧ್ಯತೆ ಇದೆ.

ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಕಾಲಿಡುವ ಮುಂಚೆ ಭಾರತದಲ್ಲಿ ಟೆಲಿಕಾಂ ದರಗಳು ಹೆಚ್ಚಿನ ಮಟ್ಟದಲ್ಲಿದ್ದವು. ಜಿಯೋ ಕಡಿಮೆ ಬೆಲೆಗೆ ಡಾಟಾ ಪ್ಲಾನ್​ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಅಲೆಯನ್ನೇ ಎಬ್ಬಿಸಿತ್ತು. ಏರ್​ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳೂ ಅನಿವಾರ್ಯವಾಗಿ ಬೆಲೆ ಇಳಿಕೆ ಮಾಡಿದ್ದವು. ಆಗಲೇ ಏರ್​ಟೆಲ್ ಮತ್ತು ವೊಡಾಫೋನ್ ಕಂಪನಿಗಳು ನಷ್ಟದ ಹಾದಿ ತುಳಿಯತೊಡಗಿದ್ದವು. ವೊಡಾಫೋನ್ ಐಡಿಯಾ ಕಂಪನಿಯಂತೂ ಮುಚ್ಚುವ ಮಟ್ಟಕ್ಕೆ ಇಳಿದುಹೋಗಿದ್ದು ಹೌದು. ಇದೀಗ 5ಜಿ ಬಂದ ಬಳಿಕ ಜಿಯೋ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳೂ ಬೆಲೆ ಏರಿಕೆಯ ಸುಳಿವನ್ನು ನೀಡಿವೆ.

ಏರ್​ಟೆಲ್ ಕಂಪನಿ ಜನವರಿ ತಿಂಗಳಲ್ಲಿ 28 ದಿನಗಳ ವ್ಯಾಲಿಡಿಟಿ ಇರುವ ಆರಂಭಿಕ ರೀಚಾರ್ಜ್ ಪ್ಲಾನ್ ಅನ್ನು ಶೇ. 57ರಷ್ಟು ಏರಿಕೆ ಮಾಡಿತ್ತು. ಇದೀಗ ಎಲ್ಲಾ ಸ್ತರದ ರೀಚಾರ್ಜ್ ಪ್ಲಾನ್​ಗಳಲ್ಲೂ ಅಷ್ಟೇ ಮಟ್ಟದಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ.

ಭಾರತದಲ್ಲಿ ಜನರು ಯಾವ್ಯಾವುದಕ್ಕೂ ವೆಚ್ಚ ಮಾಡುತ್ತಾರೆ. ಆದರೆ, ಟೆಲಿಕಾಂ ಬೆಲೆ ಮಾತ್ರ ಏರಿಕೆ ಕಾಣದೇ ಉಳಿದುಬಿಟ್ಟಿವೆ. ಜನರು ಬೇರೆ ವಸ್ತುಗಳಿಗೆ ಮಾಡುತ್ತಿರುವ ವೆಚ್ಚಕ್ಕೆ ಹೋಲಿಸಿದರೆ ಟೆಲಿಕಾಂ ದರಗಳ ಏರಿಕೆ ಕಡಿಮೆಯೇ ಎಂದು ಏರ್​ಟೆಲ್ ಬೆಲೆ ಏರಿಕೆಯ ನಿರ್ಧಾರಕ್ಕೆ ಸುನೀಲ್ ಭಾರ್ತಿ ಮಿಟ್ಟಲ್ ಕಾರಣ ಬಿಚ್ಚಿಟ್ಟಿದ್ದಾರೆ.

ಸಂಬಳಗಳು ಹೆಚ್ಚಾಗಿವೆ. ಬಾಡಿಗೆಗಳು ಹೆಚ್ಚಾಗಿವೆ. ಯಾರೂ ಕೂಡ ಬೇಸರಗೊಂಡಿಲ್ಲ. ಜನರು ಹೆಚ್ಚೂಕಡಿಮೆ ಏನನ್ನೂ ತೆರದೆಯೇ 30 ಜಿಬಿ ಬಳಸುತ್ತಿದ್ದಾರೆ. ವೊಡಾಫೋನ್​ನಂತಹ ಇನ್ನೊಂದು ನಿದರ್ಶನ ಕಾಣುವುದು ಬೇಡ ಎಂದು ವರ್ಲ್ಡ್ ಮೊಬೈಲ್ ಕಾಂಗ್ರೆಸ್ ಸಭೆಯಲ್ಲಿ ಸುನೀಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.

ಇದನ್ನೂ ಓದಿLPG Price History: ಎಲ್​ಪಿಜಿ ಸಿಲಿಂಡರ್ ಬೆಲೆ ಇತಿಹಾಸ; 2014ರಿಂದೀಚೆಗಿನ ಕಥೆ

ದೇಶದಲ್ಲಿ ಒಂದು ಒಳ್ಳೆಯ ಮತ್ತು ಸುದೃಢ ಟೆಲಿಕಾಂ ಕಂಪನಿಯ ಅಗತ್ಯವಿದೆ. ಡಿಜಿಟಲ್ ಮತ್ತು ಆರ್ಥಿಕ ಪ್ರಗತಿ ಸಂಪೂರ್ಣ ಸಾಕಾರವಾಗಬೇಕೆನ್ನುವುದು ಭಾರತದ ಕನಸು. ಸರ್ಕಾರಕ್ಕೂ ಇದರ ಅರಿವಿದೆ. ಟೆಲಿಕಾಂ ಪ್ರಾಧಿಕಾರಕ್ಕೂ ಅರವಿದೆ. ಜನರಿಗೂ ಅರಿವಿದೆ ಎಂದು ಏರ್​ಟೆಲ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಆದಾಯ ಹೆಚ್ಚಿಸಿಕೊಳ್ಳುವತ್ತ ಏರ್​ಟೆಲ್

ಜನವರಿ ತಿಂಗಳಲ್ಲಿ ಏರ್​ಟೆಲ್ ಕಂಪನಿ ತನ್ನ ರೂ 99ರ ಕನಿಷ್ಠ ರೀಚಾರ್ಜ್ ಪ್ಲಾನ್ ಅನ್ನು ನಿಲ್ಲಿಸಿತ್ತು. ಈ ಪ್ಲಾನ್​ನಲ್ಲಿ 200 ಎಂಬಿ ಡಾಟಾ ಹಾಗೂ ಸೆಕೆಂಡ್​ಗೆ 2.5 ಪೈಸೆ ಕಾಲ್ ದರ ಒಳಗೊಳ್ಳಲಾಗಿತ್ತು. ಅದರ ಬದಲು ಕನಿಷ್ಠ ರೀಚಾರ್ಜ್ ಪ್ಲಾನ್ ಅನ್ನು 157 ರೂಗೆ ಏರಿಕೆ ಮಾಡಿತ್ತು.

ಏರ್​ಟೆಲ್ ಸಂಸ್ಥೆ ತನ್ನ ಗ್ರಾಹಕರಿಂದ ಕಿರು ಅವಧಿಯ ಎಆರ್​ಪಿಯು ಗುರಿಯಾಗಿ ಸರಾಸರಿ 200 ರೂ ಎಂದು ಇಟ್ಟುಕೊಂಡಿದೆ. ಮುಂದೆ ಇದು ಹಂತ ಹಂತವಾಗಿ 300 ರೂಗೆ ಏರಿಕೆ ಆಗಬಹುದು. ಇಲ್ಲಿ ಎಆರ್​ಪಿಯು ಎಂದರೆ ಪ್ರತೀ ಗ್ರಾಹಕರಿಂದ ಬರುವ ಸರಾಸರಿ ಆದಾಯ.

ಮೂರು ಶಕ್ತಿಯುತ ಟೆಲಿಕಾಂ ಕಂಪನಿಗಳ ಅಗತ್ಯತೆ:

ದಿವಾಳಿಯಾಗುವ ಹಂತದಲ್ಲಿದ್ದ ವೊಡಾಫೋನ್ ಐಡಿಯಾ ಕಂಪನಿಗೆ ಸರ್ಕಾರ ಉತ್ತೇಜನ ನೀಡುತ್ತಿರುವ ಕ್ರಮವನ್ನು ಏರ್​ಟೆಲ್ ಮುಖ್ಯಸ್ಥರು ಸ್ವಾಗತಿಸಿದ್ದಾರೆ.

ಭಾರತದಂತಹ ದೊಡ್ಡ ಗಾತ್ರದ ದೇಶಕ್ಕೆ ಮೂರು ಟೆಲಿಕಾಂ ಆಪರೇಟರ್​ಗಳು ಬೇಕು ಎಂದು ನಾವು ಯಾವಾಗಲೂ ಹೇಳುತ್ತಾ ಬಂದಿದ್ದೆವು. ಈಗ ಮೂರನೇ ಟೆಲಿಕಾಂ ಆಪರೇಟರ್ ಆಗಿ ಬಿಎಸ್ಸೆನ್ನೆಲ್ ಬರಬಹುದು. ಅಥವಾ ವೊಡಾಫೋನ್ ಕೂಡ ಈ ಸ್ಥಾನದಲ್ಲಿ ಮುಂದುವರಿಯಬಹುದು. ಸರ್ಕಾರ ತನ್ನ ಕೈಲಾಗಿದ್ದನ್ನು ಮಾಡಿದೆ. ಇದರ ಅನುಕೂಲತೆಯನ್ನು ಪಡೆಯುವುದು ವೊಡಾಫೋನ್ ಕೈಯಲ್ಲೇ ಇದೆ ಎಂದೂ ಸುನೀಲ್ ಭಾರ್ತಿ ಮಿಟ್ಟಲ್ ತಿಳಿಸಿದ್ದಾರೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Wed, 1 March 23