Amazon Layoffs: ಅತಿದೊಡ್ಡ ವಜಾ ಪ್ರಕ್ರಿಯೆ ಆರಂಭಿಸಿದ ಅಮೆಜಾನ್; ಕೆಲಸ ಕಳೆದುಕೊಳ್ಳಲಿದ್ದಾರೆ 18,000 ಮಂದಿ
ಆನ್ಲೈನ್ ಮಾರಾಟದಲ್ಲಿ ಕುಸಿತ ಮತ್ತು ಸಂಭಾವ್ಯ ಆರ್ಥಿಕ ಹಿಂಜರಿತದಿಂದ ಗ್ರಾಹಕರ ವ್ಯಯಿಸುವ ಸಾಮರ್ಥ್ಯದಲ್ಲಿ ಕುಸಿತವಾಗಬಹುದು ಎಂಬ ಭೀತಿಯಿಂದ ಅಮೆಜಾನ್ ಈ ನಿರ್ಧಾರಕ್ಕೆ ಮುಂದಾಗಿದೆ.
ನವದೆಹಲಿ: ಅಮೆಜಾನ್ (Amazon.com) ತನ್ನ ಇತಿಹಾಸದಲ್ಲಿಯೇ ಅತಿದೊಡ್ಡ ವಜಾ (Layoffs) ಪ್ರಕ್ರಿಯೆಯನ್ನು ಆರಂಭಿಸಿದ್ದು, 18,000 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆನ್ಲೈನ್ ಮಾರಾಟದಲ್ಲಿ ಕುಸಿತ ಮತ್ತು ಸಂಭಾವ್ಯ ಆರ್ಥಿಕ ಹಿಂಜರಿತದಿಂದ ಗ್ರಾಹಕರ ವ್ಯಯಿಸುವ ಸಾಮರ್ಥ್ಯದಲ್ಲಿ ಕುಸಿತವಾಗಬಹುದು ಎಂಬ ಭೀತಿಯಿಂದ ಅಮೆಜಾನ್ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ‘ಬ್ಲೂಮ್ಬರ್ಗ್’ ವರದಿ ತಿಳಿಸಿದೆ. ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಕಳೆದ ವರ್ಷವೇ ಅಮೆಜಾನ್ ಆರಂಭಿಸಿತ್ತು. ಆರಂಭದಲ್ಲಿ ಸಾಧನಗಳು ಮತ್ತು ಸೇವಾ ಘಟಕಗಳಿಂದ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಅಲೆಕ್ಸಾ ಡಿಜಿಟಲ್ ಅಸಿಸ್ಟೆಂಟ್ ಮತ್ತು ಎಕೋ ಸ್ಮಾರ್ಟ್ ಸ್ಪೀಕರ್ಸ್ ಅಭಿವೃದ್ಧಿಪಡಿಸಿದ್ದ ತಂಡದ ಸಿಬ್ಬಂದಿಯೂ ವಜಾಗೊಂಡವರಲ್ಲಿದ್ದರು. ಇತ್ತೀಚಿನ ಉದ್ಯೋಗ ಕಡಿತ ಬುಧವಾರವೇ ಆರಂಭಗೊಂಡಿದ್ದು, ಚಿಲ್ಲರೆ ವಿಭಾಗ ಮತ್ತು ಮಾನವ ಸಂಪನ್ಮೂಲ ವಿಭಾಗದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಅಮೆಜಾನ್ನ ಗೋದಾಮು ಮತ್ತು ವಿತರಣಾ ವಿಭಾಗದಲ್ಲಿ ಕಂಪನಿಯ ಒಟ್ಟು 3,50,000 ಸಿಬ್ಬಂದಿ ಪೈಕಿ ಶೇ 6ರಷ್ಟು ಮಂದಿ ಇದ್ದಾರೆ. ಈ ಪೈಕಿ ಈವರೆಗೆ ಶೇ 1ರಷ್ಟು ಉದ್ಯೋಗ ಕಡಿತ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಹಿಂದೆಯೂ ಅಮೆಜಾನ್ ಕಠಿಣ ಆರ್ಥಿಕ ಪರಿಸ್ಥಿತಿಗಳನ್ನು ಎದುರಿಸಿದೆ. ಈ ಬಾರಿಯೂ ನಾವು ಪರಿಸ್ಥಿತಿಯನ್ನು ಸುಗಮವಾಗಿ ನಿಭಾಯಿಸುತ್ತೇವೆ. ಈಗ ಕೈಗೊಳ್ಳುವ ನಿರ್ಧಾರಗಳು ದೀರ್ಘಾವಧಿಗೆ ಪ್ರಯೋಜನ ಮತ್ತು ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಸಿಇಒ ಆಂಡಿ ಜಾಸ್ಸಿ ಈ ತಿಂಗಳ ಆರಂಭದಲ್ಲಿ ಹೇಳಿದ್ದರು. ಅಮೆಜಾನ್ ಉದ್ಯೋಗ ಕಡಿತ ಆರಂಭಿಸುತ್ತಿರುವ ವರದಿಗಳ ಬೆನ್ನಲ್ಲೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ವಹಿವಾಟು ಶೇ 2.1ರಷ್ಟು ಕುಸಿದು 96.05 ಡಾಲರ್ನಂತೆ ವಹಿವಾಟು ನಡೆಸಿದೆ.
ಇದನ್ನೂ ಓದಿ: Microsoft: 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಘೋಷಿಸಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ
18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಆಂಡಿ ಜಾಸ್ಸಿ ಜನವರಿ 5ರಂದು ಮಾಹಿತಿ ನೀಡಿದ್ದರು. ಇದು ಕಂಪನಿಯ ವಾರ್ಷಿಕ ಯೋಜನೆಯ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದರು.
ಈ ಎಲ್ಲ ಬೆಳವಣಿಗೆಗಳ ಮಧ್ಯೆಯೂ ಬುಧವಾರ ಪ್ರಕಟಗೊಂಡ ‘ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500’ ಪಟ್ಟಿಯಲ್ಲಿ, ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ವಿಶ್ವದ ಮುಂಚೂಣಿ ಬ್ರ್ಯಾಂಡ್ಗಳ ಪೈಕಿ ಅಮೆಜಾನ್ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ವರ್ಷವೂ ಅಮೆಜಾನ್ ಮೊದಲ ಸ್ಥಾನದಲ್ಲಿತ್ತು. ‘ಬ್ರ್ಯಾಂಡ್ ಮೌಲ್ಯ ಕುಸಿಯುತ್ತಿರುವುದರ ಮಧ್ಯೆಯೂ ಅಮೆಜಾನ್ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಕಂಪನಿಯ ಬ್ರ್ಯಾಂಡ್ ಮೌಲ್ಯ ಒಂದು ವರ್ಷದಲ್ಲಿ ಶೇ 15ರಷ್ಟು ಕುಸಿತವಾಗಿದೆ’ ಎಂದು ಬ್ರ್ಯಾಂಡ್ ಫೈನಾನ್ಸ್ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ