ನವದೆಹಲಿ: ಅಮೆಜಾನ್ (Amazon) ಕಂಪನಿಯು ಭಾರತದಲ್ಲಿ ಇತರ ಎಲ್ಲ ಟೆಕ್ ಕಂಪನಿಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಿದೆ (layoffs) ಎಂದು ವರದಿಯಾಗಿದೆ. ಪರಿಣಾಮವಾಗಿ ನೂರಾರು ಸಂಖ್ಯೆಯ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳಬೇಕಾಗಬಹುದು. ಕಂಪನಿಯು ಭಾರತದಲ್ಲಿ ಇ-ಕಾಮರ್ಸ್, ವೆಬ್ ಸರ್ವೀಸ್ ಹಾಗೂ ವಿಡಿಯೊ ಸ್ಟ್ರೀಮಿಂಗ್ ಸೇರಿದಂತೆ ಅನೇಕ ಉದ್ಯಮಗಳನ್ನು ನಡೆಸುತ್ತಿದೆ. ಫೇಸ್ಬುಕ್, ಟ್ವಿಟರ್ ಹಾಗೂ ಇತರ ಕಂಪನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಜಾಗತಿಕವಾಗಿ 10,000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸುವುದಾಗಿ ಅಮೆಜಾನ್ ಈಗಾಗಲೇ ಘೋಷಿಸಿದೆ.
ಉದ್ಯೋಗ ಕಡಿತ ಮತ್ತು ಹಿಂಬಡ್ತಿ ಪ್ರಕ್ರಿಯೆ ಇಲ್ಲಿ (ಭಾರತದಲ್ಲಿ) ನಡೆಯಲಿದೆ. ಈ ವಿಚಾರವಾಗಿ ಸಮಾಲೋಚನೆ ನಡೆಯುತ್ತಿದೆ ಎಂದು ಕಂಪನಿಯ ಆಂತರಿಕ ಬೆಳವಣಿಗೆಗಳ ಬಗ್ಗೆ ಮಾಹಿತಿಯುಳ್ಳ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉದ್ಯೋಗ ಕಡಿತವು ಮೆಟಾ ಒಡೆತನದ ಫೇಸ್ಬುಕ್ ಹಾಗೂ ಇತರ ಕಂಪನಿಗಳಿಗಿಂತ ಹೆಚ್ಚೇ ಇರಲಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿಯೂ ಇದೆ ಅಮೆಜಾನ್ ಕಚೇರಿ
ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಅಮೆಜಾನ್ ಕಂಪನಿಯ ಕಚೇರಿಗಳಿವೆ. ಭಾರತದಲ್ಲಿ ನೇರ ಹಾಗೂ ಪರೋಕ್ಷವಾಗಿ ಅಮೆಜಾನ್ ಸುಮಾರು 11 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಆಗಲಿದೆ. ಆದಷ್ಟು ಶೀಘ್ರದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಂಪನಿ ಉದ್ದೇಶಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Amazon: 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಅಮೆಜಾನ್ ಸಂಸ್ಥೆ ಚಿಂತನೆ
ಅಮೆಜಾನ್ ಕಂಪನಿಯು ಸುಮಾರು 10 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಚಿಂತನೆ ನಡೆಸಿದೆ. ಕಳೆದ ಕೆಲವು ತಿಂಗಳುಗಳಿಂದ ಲಾಭ ಕಡಿಮೆ ಆಗಿರುವುದರಿಂದ ಅಮೆಜಾನ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮತ್ತು ವೆಚ್ಚವನ್ನು ಕಡಿತಗೊಳಿಸಲು ಅಗತ್ಯವಾದ ಕ್ರಮಗಳನ್ನು ಜಾರಿಗೆ ತರಲು ಚಿಂತಿಸಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಮಂಗಳವಾರ ವರದಿ ಮಾಡಿತ್ತು.
ಟ್ವಿಟರ್, ಮೆಟಾ ಆಯ್ತು ಈಗ ಅಮೆಜಾನ್ ಸರದಿ
ಇತ್ತೀಚೆಗಷ್ಟೇ ಟ್ವಿಟರ್ ಭಾರತದಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿನ ಎಲ್ಲಾ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬೆನ್ನಲ್ಲೇ ಕಂಪನಿಯ ಸುಮಾರು 3,500 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕೂಡ ಇತ್ತೀಚೆಗೆ ಜಾಗತಿಕವಾಗಿ 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇಷ್ಟೇ ಅಲ್ಲದೆ, ಮೈಕ್ರೋಸಾಫ್ಟ್ ಸೇರಿದಂತೆ ಅಮೆರಿಕದ ಅನೇಕ ಟೆಕ್ ಕಂಪನಿಗಳೂ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ