Amazon: ಅಮೆಜಾನ್ನಿಂದ ಶೀಘ್ರದಲ್ಲೇ ಬಿಟ್ಕಾಯಿನ್, ಈಥರ್ನಂಥ ಕ್ರಿಪ್ಟೋಕರೆನ್ಸಿ ಪಾವತಿ ಸ್ವೀಕರಿಸುವ ಸಾಧ್ಯತೆ
ಇ-ಕಾಮರ್ಸ್ ದೈತ್ಯ ಕಂಪೆನಿಯಾದ ಅಮೆಜಾನ್ನಿಂದ ಖರೀದಿ ಮಾಡುವ ವೇಳೆ ಗ್ರಾಹಕರು ಕ್ರಿಪ್ಟೋಕರೆನ್ಸಿ ನೀಡಬಹುದು ಎಂಬ ಸನ್ನಿವೇಶ ನಿರ್ಮಾಣ ಆಗಬಹುದು. ಅಂತದ್ದೊಂದು ಸೂಚನೆ ಈಗ ಸಿಕ್ಕಿದೆ.
ಗ್ರಾಹಕರು ಖರೀದಿ ಮಾಡಿದ ವಸ್ತುಗಳಿಗೆ ಬದಲಿಯಾಗಿ ಬಿಟ್ಕಾಯಿನ್ (Bitcoin) ಮತ್ತು ಇತರ ಕ್ರಿಪ್ಟೋಕರೆನ್ಸಿಗಳಲ್ಲಿ (Cryptocurrency) ಪಾವತಿ ಮಾಡುವುದಕ್ಕೆ ಅಮೆಜಾನ್ನಿಂದ (Amazon) ಶೀಘ್ರದಲ್ಲೇ ಅವಕಾಶ ಮಾಡಿಕೊಡಬಹುದು. ಅಮೆಜಾನ್ನ ಜಾಬ್ ಓಪನಿಂಗ್ಸ್ ಗಮನಿಸುವುದಾದರೆ, ಈಚೆಗೆ ಅದರ ಪಾವತಿ ತಂಡಕ್ಕೆ ಡಿಜಿಟಲ್ ಕರೆನ್ಸಿ ಮತ್ತು ಬ್ಲಾಕ್ಚೈನ್ ಪ್ರಾಡಕ್ಟ್ ಮುಖ್ಯಸ್ಥರಿಗಾಗಿ ಹುಡುಕಾಟ ನಡೆಸುತ್ತಿದೆ. ಅಮೆಜಾನ್ನ ಎಲ್ಲ ವಿಭಾಗಗಳ ಜತೆಗೂ ಮುಖ್ಯಸ್ಥರಾದವರು ಕೆಲಸ ಮಾಡಬೇಕಾಗುತ್ತದೆ. ಅದರಲ್ಲಿ ಅಮೆಜಾನ್ ವೆಬ್ ಸರ್ವೀಸಸ್ನಿಂದ ಗ್ರಾಹಕರಿಗೆ ಅತ್ಯುತ್ತಮ ಅನುಭವ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಾಂತ್ರಿಕ ಸ್ಟ್ರಾಟೆಜಿ ಅಭಿವೃದ್ಧಿ ಪಡಿಸುವ ತನಕ ಎಲ್ಲವೂ ಒಳಗೊಂಡಿರಲಿದೆ. ಅಮೆಜಾನ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಕ್ರಿಪ್ಟೋಕರೆನ್ಸಿ ಪಾವತಿ ಆಯ್ಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಕ್ಕೆ ನಿರ್ಧರಿಸಿದೆ ಎಂಬುದರ ಸೂಚನೆ ಇದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಕ್ರಿಪ್ಟೋಕರೆನ್ಸಿಯಲ್ಲಿ ಆಗುತ್ತಿರುವ ಆವಿಷ್ಕಾರಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ ಮತ್ತು ಇದು ಅಮೆಜಾನ್ನಲ್ಲಿ ಹೇಗೆ ಕಾಣಲಿದೆ ಎಂಬುದನ್ನು ಎದುರು ನೋಡುತ್ತಿದ್ದೇವೆ. ಭವಿಷ್ಯವು ಹೊಸ ತಂತ್ರಜ್ಞಾನದ ಮೇಲೆ ನಿಂತಿರುತ್ತದೆ. ಆಧುನಿಕ, ವೇಗ ಹಾಗೂ ಖರ್ಚಿಲ್ಲದ ಪಾವತಿ ಮೇಲೆ ನಿಂತಿರುತ್ತದೆ. ಆ ಭವಿಷ್ಯವನ್ನು ಸದ್ಯದಲ್ಲೇ ಅಮೆಜಾನ್ ಗ್ರಾಹಕರಿಗೆ ತರಲಿದ್ದೇವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಅಮೆಜಾನ್ ಹಂಚಿಕೊಂಡಿದೆ. ಅಂದಹಾಗೆ ವಿಶ್ವದ ಅತಿ ದೊಡ್ಡ ಆನ್ಲೈನ್ ರೀಟೇಲರ್ ಆದ ಅಮೆಜಾನ್ನಿಂದ ಸದ್ಯಕ್ಕೆ ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸುತ್ತಿಲ್ಲ.
ಕಳೆದ ವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮಾತನಾಡಿ, ಸದ್ಯದಲ್ಲೇ ತಮ್ಮ ಎಲೆಕ್ಟ್ರಿಕ್ ಕಾರು ಕಂಪೆನಿಯ ಗ್ರಾಹಕರಿಂದ ಬಿಟ್ಕಾಯಿನ್ ಪಾವತಿಯನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ. ಇನ್ನೊಂದು ವಿಚಾರ ಗೊತ್ತಾ? ಮೇ ತಿಂಗಳ ಆರಂಭದಲ್ಲಿ ಆಪಲ್ ಕಂಪೆನಿ ಕೂಡ ಪರ್ಯಾಯ ಪಾವತಿ ವ್ಯವಸ್ಥೆಗಳಾದ ಬೈ ನೌ ಪೇ ಲೇಟರ (ಬಿಎನ್ಪಿಎಲ್), ಫಾಸ್ಟ್ ಪೇಮೆಂಟ್ಸ್, ಕ್ರಿಪ್ಟೋಕರೆನ್ಸಿ ಮುಂತಾದವುಗಳಿಗಾಗಿ ಬಿಜಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ಗಾಗಿ ಹುಡುಕಾಟ ನಡೆಸಿತ್ತು. ಈ ಮಧ್ಯೆ ಟ್ವಿಟ್ಟರ್ನ ಸಿಇಒ ಜಾಕ್ ಡೋರ್ಸೆ ಕೂ, ಆನಲ್ಲೈನ್ ಪ್ರಪಂಚಕ್ಕೆ ಹಾಗತಿಕ ಕರೆನ್ಸಿಯ ಅಗತ್ಯ ಇದೆ ಎಂದು ಹೇಳಿದ್ದಾರೆ.
(Amazon May Accept Cryptocurrency For Payment By Customers Know The Reason Why)