ನವದೆಹಲಿ, ಏಪ್ರಿಲ್ 21: ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ (Pakistan’s Ballistic missile programme) ಬೇಕಾದ ಪ್ರಮುಖ ವಸ್ತುಗಳ ಪೂರೈಕೆ ಮಾಡುತ್ತಿದ್ದವೆನ್ನಲಾದ ಚೀನಾ ಮತ್ತು ಬೆಲಾರಸ್ ಕಂಪನಿಗಳಿಗೆ ಅಮೆರಿಕ ನಿಷೇಧ ಹೇರಿದೆ. ಇದರಲ್ಲಿ ಚೀನಾದ ಮೂರು ಕಂಪನಿಗಳು ಒಳಗೊಂಡಿವೆ. ಲಾಂಗ್ಡೆ ಟೆಕ್ನಾಲಜಿ ಡೆವಲಪ್ಮೆಂಟ್, ಟಿಯಾಂಜಿನ್ ಕ್ರಿಯೇಟಿವ್ ಸೋರ್ಸ್ ಇಂಟರ್ನ್ಯಾಷನಲ್ ಟ್ರೇಡ್ ಮತ್ತು ಗ್ರೆನ್ಪೆಕ್ಟ್ ಕೋ ಇವು ನಿಷೇಧಿತವಾಗಿರುವ ಮೂರು ಚೀನೀ ಕಂಪನಿಗಳಾಗಿವೆ. ಇನ್ನು, ಬೆಲಾರಸ್ ದೇಶದ ಮಿನ್ಸ್ಕ್ ವ್ಹೀಲ್ ಟ್ರಾಕ್ಟರ್ ಪ್ಲಾಂಟ್ ಕಂಪನಿಯೂ ಅಮೆರಿಕದಿಂದ ನಿಷೇಧಿತವಾಗಿದೆ.
ಭಾರೀ ಹಾನಿ ಮಾಡುವ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬೇಕಾದ ವಸ್ತುಗಳನ್ನು ಪೂರೈಸಬಾರದು ಎನ್ನುವ ನೀತಿಯನ್ನು ಅಮೆರಿಕ ಅನುಸರಿಸುತ್ತದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕ್ಷಿಪಣಿ ತಯಾರಿಕೆಯ ಯೋಜನೆಗೆ ನೆರವಾದ ಈ ನಾಲ್ಕು ಕಂಪನಿಗಳು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿವೆ.
ಪಾಕಿಸ್ತಾನಕ್ಕೆ ಚೀನಾ ಅನೇಕ ರೀತಿಯಲ್ಲಿ ಬೆಂಬಲ ನೀಡುತ್ತದೆ. ಪಾಕಿಸ್ತಾನದ ಮಿಲಿಟರಿ ಉನ್ನತೀಕರಣ ಯೋಜನೆಯಲ್ಲಿ ಚೀನಾ ಪಾತ್ರ ಮಹತ್ವದ್ದು. ಬಹಳಷ್ಟು ಶಸ್ತ್ರಾಸ್ತ್ರಗಳನ್ನು ಚೀನಾ ಸರಬರಾಜು ಮಾಡುತ್ತದೆ.
ಇದನ್ನೂ ಓದಿ: ಚುನಾವಣೆಯ ವರ್ಷವೂ ಭಾರತದ ಹಣಕಾಸು ಶಿಸ್ತು ಮೆಚ್ಚಿಕೊಂಡ ಐಎಂಎಫ್
ಬೆಲಾರಸ್ ದೇಶದ ಮಿಂಸ್ಕ್ ವ್ಹೀಲ್ ಟ್ರಾಕ್ಟರ್ ಪ್ಲಾಂಟ್ನಿಂದ ಪಾಕಿಸ್ತಾನಕ್ಕೆ ಸ್ಪೆಷಲ್ ವೆಹಿಕಲ್ ಚಾಸಿ ಪೂರೈಕೆ ಆಗುತ್ತಿತ್ತು. ಈ ಚಾಸಿಗಳು ದೂರ ಶ್ರೇಣಿಯ ಬ್ಯಾಲಿಸ್ಟಿಕ್ ಮಿಸೈಲ್ ಯೋಜನೆಯಲ್ಲಿ ಬಳಕೆ ಆಗುತ್ತದೆ.
ಚೀನಾದ ಕ್ಸಿಯಾನ್ ಲಾಂಗ್ಡೆ ಟೆಕ್ನಾಲಜಿ ಡೆವಲಪ್ಮೆಂಟ್ ಕಂಪನಿ ಫಿಲಾಮೆಂಟ್ ವೈಂಡಿಂಗ್ ಮೆಷೀನ್ ಮೊದಲಾದ ಉಪಕರಣಗಳನ್ನು ಪಾಕಿಸ್ತಾನಕ್ಕೆ ಪೂರೈಸಿದೆ. ಈ ವೈಂಡಿಂಗ್ ಯಂತ್ರಗಳು ರಾಕೆಟ್ ಮೋಟಾರ್ ಕೇಸ್ಗಳನ್ನು ತಯಾರಿಸಲು ಬಳಕೆ ಆಗುತ್ತದೆ.
ಇದನ್ನೂ ಓದಿ: ಇಸ್ರೇಲ್ ಯುದ್ಧಭೀತಿ: ಅದಾನಿ ಪೋರ್ಟ್ಸ್ ಕಂಪನಿಯತ್ತ ಷೇರುದಾರರ ಚಿತ್ತ ಯಾಕೆ? ಇಲ್ಲಿದೆ ಅದಾನಿ ಇಸ್ರೇಲ್ ನಂಟು
ಟಿಯಾಂಜಿನ್ ಕ್ರಿಯೇಟಿವ್ ಸೋರ್ಸ್ ಇಂಟರ್ನ್ಯಾಷನಲ್ ಟ್ರೇಡ್ ಕೋ ಲಿ ಸಂಸ್ಥೆಯು ಸ್ಟಿರ್ ವೆಲ್ಡಿಂಗ್ ಸಲಕರಣೆ ಸೇರಿದಂತೆ ಕ್ಷಿಪಣಿ ಸಂಬಂಧಿತ ಉಪಕರಣಗಳನ್ನು ಪಾಕಿಸ್ತಾನಕ್ಕೆ ಪೂರೈಸುತ್ತಿದೆ ಎನ್ನುವುದು ಅಮೆರಿಕದ ಆರೋಪ. ಈ ಸ್ಟಿರ್ ವೆಲ್ಡಿಂಗ್ ಉಪಕರಣವು ಸ್ಪೇಸ್ ಲಾಂಚ್ ವಾಹನಗಳಲ್ಲಿ ಬಳಸಲಾಗುವ ಪ್ರೊಪೆಲೆಂಟ್ ಟ್ಯಾಂಕ್ಗಳನ್ನು ತಯಾರಿಸಲು ಬಳಕೆ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ