ಮುಂಬೈ ತಾಜ್ ಹೋಟೆಲ್ನಲ್ಲಿ ಒಂದು ರಾತ್ರಿ ತಂಗಲು 6 ರೂಪಾಯಿ; ಆನಂದ್ ಮಹೀಂದ್ರಾ ಟ್ವೀಟ್ ನೋಡಿದರಾ?
ಮುಂಬೈ ತಾಜ್ ಹೋಟೆಲ್ನ ಉದ್ಘಾಟನಾ ದಿನದ ಫೋಟೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ಏನು ಈ ಟ್ವೀಟ್ ವಿಶೇಷ ಎಂಬ ಮಾಹಿತಿ ಇಲ್ಲಿದೆ.
“ನಮ್ಮ ಕಾಲದಲ್ಲಿ ಇಷ್ಟೆಲ್ಲ ರೇಟ್ ಇರಲಿಲ್ಲ ಬಿಡು,” ಅನ್ನೋ ಮಾತನ್ನ ನೀವೆಷ್ಟು ಬಾರಿ ಕೇಳಿಸಿಕೊಂಡಿದ್ದೀರೋ ಏನೋ? ಇದೂ ಒಂದು ಸಲ ಕೇಳಿಸಿಕೊಂಡು ಬಿಡಿ. ಹಾಗಂತ ಇಲ್ಲಿಗೆ ಕೊನೆ ಅಂತೇನೂ ಅಲ್ಲ. ಮಹೀಂದ್ರಾ ಅಂಡ್ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ “ಆ ದಿನಗಳು” ನೆನಪಿಸಿಕೊಂಡಿದ್ದಾರೆ. ಇವತ್ತಿನ ದಿನಮಾನಕ್ಕೆ ಹೋಲಿಸಿದಲ್ಲಿ ಭಾರತೀಯ ಕರೆನ್ಸಿ ಮೌಲ್ಯ ಓಹ್ ಅದ್ಭುತವಾಗಿತ್ತು ಎಂಬಂಥ ದಿನಗಳವು. ಅದೆಷ್ಟು ಸಸ್ತಾ ಇತ್ತು ಅಂದರೆ, ಮುಂಬೈನಲ್ಲಿನ ಜಗದ್ವಿಖ್ಯಾತ ತಾಜ್ ಹೋಟೆಲ್ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಬೇಕು ಅಂದರೆ ಕೇವಲ 6 ರೂಪಾಯಿ ಮಾತ್ರು ಆಗಿತ್ತು. ಹಾಂ, ಇದ್ಯಾವ ಓಬೀರಾಯನ ಕಾಲದ ಕಥೆಯೋ ಅಂದುಕೊಳ್ಳಬೇಡಿ. ಆನಂದ್ ಮಹೀಂದ್ರಾ ಜಸ್ಟ್ 117 ವರ್ಷದ ಹಿಂದೆ ಹೋಗಿದ್ದಾರಷ್ಟೇ. ಈಗ ಬಿಡಿ, ತಾಜ್ ಹೋಟೆಲ್ನಲ್ಲಿ ಉಳಿದುಕೊಳ್ಳುವುದಕ್ಕೆ ಸಾವಿರಾರು ರೂಪಾಯಿ ಆಗುತ್ತದೆ.
ತಮ್ಮ ಟ್ವೀಟ್ನಲ್ಲಿ ಆನಂದ್ ಮಹೀಂದ್ರಾ, “ಹಣದುಬ್ಬರವನ್ನು ಮೀರಿಸುವ ದಾರಿ ಇಲ್ಲಿದೆ. ಒಂದು ಟೈಮ್ ಮಶೀನ್ ಪಡೆಯಿರಿ ಮತ್ತು ಹಿಂದೆ…ಬಹಳ ಹಿಂದೆ ಹೋಗಿ. ತಾಜ್, ಮುಂಬೈನಲ್ಲಿ ಒಂದು ರಾತ್ರಿಗೆ 6 ರೂಪಾಯಿ ಇತ್ತು. ಈಗೇನಿದ್ದರೂ ಅಂಥ ದಿನಗಳಿದ್ದವು…” ಆನಂದ್ ಮಹೀಂದ್ರಾ ಅವರು ತಾಜ್ ಹೋಟೆಲ್ ಉದ್ಘಾಟನೆ ಆದ ಡಿಸೆಂಬರ್ 1, 1903ರ ಚಿತ್ರ ಹಂಚಿಕೊಂಡಿದ್ದಾರೆ. ತಾಜ್ ಹೋಟೆಲ್ಗೆ ತಾಜ್ಮಹಲ್ ಪ್ಯಾಲೆಸ್ ಹೋಟೆಲ್ ಎಂದು ಹೆಸರಿಡಲಾಗಿತ್ತು ಹಾಗೂ ಅದು ಎಲ್ಲ ಹೊಚ್ಚ ಹೊಸ ಸೌಕರ್ಯಗಳೊಂದಿಗೆ ಮಧ್ಯಮ ದರದೊಂದಿಗೆ ಬಂದಿತ್ತು. ತಾಜ್ ಹೋಟೆಲ್ ಸ್ಥಾಪನೆ ಮತ್ತು ಶುರು ಮಾಡಿದ್ದು ಟಾಟಾ ಸಮೂಹದ ಸ್ಥಾಪಕರಾದ ಜಮ್ಷೆಟ್ಜೀ ನುಸೆರ್ವಂಜಿ ಟಾಟಾ.
So here’s a way to beat inflation. Get into a time machine and go back…way back. ₹6 per night for the Taj, Mumbai? Now those were the days… pic.twitter.com/7WYHqKodGx
— anand mahindra (@anandmahindra) August 6, 2021
ಈಚೆಗೆ ಆನಂದ್ ಮಹೀಂದ್ರಾ ಅವರು ಫಿಯೆಟ್ 1100 ಕಾರಿನ ಹಳೆ ಜಾಹೀರಾತೊಂದರ ಚಿತ್ರ ಹಂಚಿಕೊಂಡಿದ್ದರು. ಅದರ ಬೆಲೆ ರೂ. 9750 (ಎಕ್ಸ್- ಫ್ಯಾಕ್ಟರಿ ಎಲ್ಲ ತೆರಿಗೆಗಳನ್ನು ಹೊರತುಪಡಿಸಿ). ಕಾರು 1950ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಓಡಾಡಿತ್ತು. ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೂ 1950ರ ದಶಕದಲ್ಲಿ 9750 ರೂಪಾಯಿ ಎಂಬುದು ತಮಾಷೆಯಲ್ಲ. ಆಗ ಫಿಯೆಟ್ 1100 ಜನಪ್ರಿಯವಾಗಿತ್ತು. ಆ ಕಾರಿನ ಪ್ರವೇಶದೊಂದಿಗೆ ಭಾರತದಲ್ಲಿ ನಿಧಾನವಾಗಿ ಫಿಯೆಟ್ ಮತ್ತಷ್ಟು ಹೆಸರು ಮಾಡಿತು. ಅದು ಯಾವ ಪರಿ ಅಂದರೆ, ಕಾರು ಅಂದರೆ ಫಿಯೆಟ್ ಎನ್ನುವಂತಾಯಿತು. ಆ ಕಾರು 1089cc, 4 ಸಿಲಿಂಡರ್ ಎಂಜಿನ್ ಜತೆಗೆ 36bhp ಉತ್ಪಾದಿಸುವ ಸಾಮರ್ಥ್ಯ ಇತ್ತು. ಈ ವಾಹನವನ್ನು ಆಧುನಿಕ ಕಾರುಗಳಿಗೆ ಹೋಲಿಸುವುದು ತಪ್ಪಾಗುತ್ತದೆ.
Ah the good old days… pic.twitter.com/SNH3Cwirki
— anand mahindra (@anandmahindra) July 14, 2021
ಇದನ್ನೂ ಓದಿ: Viral Video: ರಸ್ತೆಗಿಳಿದ ಭಾರತೀಯನ ಚಿನ್ನದ ಕಾರಿನ ವಿಡಿಯೋ ವೈರಲ್; ಕನ್ಫ್ಯೂಸ್ ಆದ ಆನಂದ್ ಮಹೀಂದ್ರಾ
ಇದನ್ನೂ ಓದಿ: ಆಸ್ಟ್ರೇಲಿಯಾಗೆ ಸೋಲುಣಿಸಿದ ಟೀಂ ಇಂಡಿಯಾದ 6 ಯುವ ಆಟಗಾರರಿಗೆ ಎಸ್ಯುವಿ ಗಿಫ್ಟ್ ಮಾಡಿದ ಆನಂದ್ ಮಹೀಂದ್ರಾ
(Anand Mahindra Remembers Inauguration Day Of Hotel Taj Room Per Night Price At Rs 6)
Published On - 6:13 pm, Sat, 7 August 21