Viral Video: ರಸ್ತೆಗಿಳಿದ ಭಾರತೀಯನ ಚಿನ್ನದ ಕಾರಿನ ವಿಡಿಯೋ ವೈರಲ್; ಕನ್​ಫ್ಯೂಸ್ ಆದ ಆನಂದ್ ಮಹೀಂದ್ರಾ

Anand Mahindra | ಇದು ಚಿನ್ನದ ಕಾರಲ್ಲ. ಗೋಲ್ಡ್ ಮತ್ತು ಫ್ಯಾನ್ಸಿ ಬಣ್ಣದ ಕಾರಿನ ಕ್ರೇಜ್ ಸಾಕಷ್ಟು ಜನರಿಗಿದೆ. ಅದೇ ರೀತಿ ಇದೂ ಕೂಡ ಫ್ಯಾನ್ಸಿ ಬಣ್ಣದ ಕಾರಷ್ಟೇ ಎಂದು ಕೆಲವರು ಆನಂದ್ ಮಹೀಂದ್ರಾ ಅವರ ಟ್ವೀಟ್​ಗೆ ರೀಟ್ವೀಟ್ ಮಾಡಿದ್ದಾರೆ.

Viral Video: ರಸ್ತೆಗಿಳಿದ ಭಾರತೀಯನ ಚಿನ್ನದ ಕಾರಿನ ವಿಡಿಯೋ ವೈರಲ್; ಕನ್​ಫ್ಯೂಸ್ ಆದ ಆನಂದ್ ಮಹೀಂದ್ರಾ
ಚಿನ್ನದ ಫೆರಾರಿ ಕಾರು
Sushma Chakre

|

Jul 21, 2021 | 2:09 PM

ಕೈಯಲ್ಲಿ ಹಣವಿದ್ದಾಗ ಅದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಳಸುತ್ತಾರೆ. ಕೆಲವರಿಗೆ ಹಣವನ್ನು ದುಡಿಯುವುದು ಹೇಗೆಂಬ ಚಿಂತೆಯಾದರೆ ಇನ್ನು ಕೆಲವರಿಗೆ ಹಣ ಖರ್ಚು ಮಾಡುವುದು ಹೇಗೆಂಬ ಯೋಚನೆ. ಸಾಮಾಜಿಕ ಜಾಲತಾಣಗಳಲ್ಲಿ ಚಿನ್ನದ ಕಾರೊಂದರ ವಿಡಿಯೋ ಭಾರೀ ವೈರಲ್ ಆಗಿದೆ. ಚಿನ್ನದ ಫೆರಾರಿಯೊಂದು (Gold Ferrari Car) ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋವನ್ನು ಈಗಾಗಲೇ 2.10 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಉದ್ಯಮಿ ಆನಂದ್ ಮಹೀಂದ್ರಾ (Anand Mahindra), ನಿಮ್ಮ ಬಳಿ ಇರುವ ಹಣವನ್ನು ಯಾವ ರೀತಿ ಹಾಳು ಮಾಡಬಾರದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಆ ಕಾರಿನ ಮಾಲೀಕರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ಆಗಾಗ ಇಂತಹ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅನೇಕ ಸ್ಫೂರ್ತಿದಾಯಕ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಅವರು ತಮ್ಮ ಗಮನಕ್ಕೆ ಬಂದ ಕಷ್ಟದಲ್ಲಿರುವ ಅನೇಕರಿಗೆ ಸಹಾಯಹಸ್ತವನ್ನೂ ಚಾಚಿದ್ದಾರೆ. ಈ ಬಂಗಾರದ ಫೆರಾರಿ ಕಾರಿನ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ನೀವು ಶ್ರೀಮಂತರಾದ ಮಾತ್ರಕ್ಕೆ ನಿಮ್ಮ ಬಳಿ ಇರುವ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಬಾರದು. ಹಣವನ್ನು ಯಾವ ರೀತಿ ಬಳಸಬಾರದು ಎಂಬುದಕ್ಕೆ ಈ ವಿಡಿಯೋ ಒಂದು ಪಾಠವಾಗಿದೆ. ಆದರೂ ಇದನ್ನು ಅರ್ಥ ಮಾಡಿಕೊಳ್ಳದ ಜನರು ಯಾಕೆ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಶೇರ್ ಮಾಡಿಕೊಂಡು ಅಚ್ಚರಿ ಪಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಯಾರಿಗೂ ಮಾದರಿಯಾಗಬಾರದು ಎಂಬ ನೀತಿಪಾಠವನ್ನು ಆನಂದ್ ಮಹೀಂದ್ರಾ ಹೇಳಿದ್ದಾರೆ.

ಶುದ್ಧ ಚಿನ್ನದಿಂದ ಮಾಡಿರುವ ಫೆರಾರಿ ಕಾರಿನ ವಿಡಿಯೋ ಇದಾಗಿದೆ ಎನ್ನಲಾಗಿದೆ. ಆದರೂ ಇದು ನಿಜವಾಗಿಯೂ ಚಿನ್ನದ ಫೆರಾರಿಯಾ ಅಥವಾ ಚಿನ್ನದ ಬಣ್ಣದ ಕಾರಾ? ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡಿದೆ. 54 ಸೆಕೆಂಡಿನ ಈ ವಿಡಿಯೋ ಕ್ಲಿಪ್‌ನಲ್ಲಿ ಇಬ್ಬರು ಖುಷಿಯಿಂದ ಚಿನ್ನದ ಫೆರಾರಿ ಕಾರಿನಲ್ಲಿ ತೆರಳುವ ವಿಡಿಯೋವಿದೆ. ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರ ಕಾರಿನ ವಿಡಿಯೋವಿದು. ಕಾರಿನ ಮೇಲ್ಭಾಗವನ್ನು ಬಟನ್‌ ಮೂಲಕ ತೆರೆದು ಈ ಕಾರನ್ನು ಸ್ಟಾರ್ಟ್​ ಮಾಡಲಾಗುತ್ತದೆ. ರಸ್ತೆಯಲ್ಲಿ ವೇಗವಾಗಿ ಹೋಗುವ ಈ ಕಾರಿನ ವಿಡಿಯೋವನ್ನು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 8 ಸಾವಿರ ಜನರು ಈ ವಿಡಿಯೋಗೆ ಲೈಕ್ ಒತ್ತಿದ್ದಾರೆ.

ಹಲವು ನೆಟ್ಟಿಗರು ಆನಂದ್ ಮಹೀಂದ್ರಾ ಅವರ ಅಭಿಪ್ರಾಯಕ್ಕೆ ಮೆಚ್ಚುಗೆ ಸಲ್ಲಿಸಿದ್ದಾರೆ. ಈ ರೀತಿ ತಮ್ಮ ಬಳಿ ಹಣವಿದೆ ಎಂದು ತೋರಿಸಿಕೊಳ್ಳಲು ಚಿನ್ನದ ಕಾರಿನಲ್ಲಿ ಓಡಾಡಿ ಏನು ಸಾಧಿಸಿದಂತಾಗುತ್ತದೆ? ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿದರೆ ಒಂದಷ್ಟು ಜನರಿಗೆ ಜೀವನ ಕಟ್ಟಿಕೊಟ್ಟಂತಾಗುತ್ತದೆ ಎಂದು ಕೆಲವರು ರೀಟ್ವೀಟ್ ಮಾಡಿದ್ದಾರೆ.

ಚಿನ್ನದ ಲೇಪನವಿರುವ ಕಾರನ್ನು ಹೊಂದಿದವರು ಇವರೇ ಮೊದಲನೇನಲ್ಲ. ಭಾರತೀಯರಲ್ಲಿ ಅನೇಕರು ಇಂತಹ ಕಾರನ್ನು ಹೊಂದಿದ್ದಾರೆ. ಆದರೆ, ಆ ಕಾರನ್ನು ರಸ್ತೆಗೆ ಇಳಿಸಿದರೆ ಸ್ಕ್ರಾಚ್ ಆಗಬಹುದು ಎಂಬ ಆತಂಕ ಇರುವುದರಿಂದ ಆ ಕಾರನ್ನು ತಮ್ಮ ಮನೆಯ ಗ್ಯಾರೇಜ್ ಅಥವಾ ಪಾರ್ಕಿಂಗ್ ಏರಿಯಾದಲ್ಲೇ ಇರಿಸುತ್ತಾರೆ. ಚಿನ್ನದ ಮೇಲೆ ಭಾರತೀಯರಿಗೆ ಒಂಥರಾ ಮೋಹ. ಅದೇ ಕಾರಣಕ್ಕೆ ಚಿನ್ನದ ಖುರ್ಚಿ, ಚಿನ್ನದ ತಟ್ಟೆ, ಚಿನ್ನದ ಕಮೋಡ್ ಕೂಡ ಬಳಸುವವರಿದ್ದಾರೆ ಎಂದು ಇನ್ನು ಕೆಲವರು ಟ್ವೀಟ್ ಮಾಡಿದ್ದಾರೆ.

ಇದು ಚಿನ್ನದ ಕಾರಲ್ಲ. ಗೋಲ್ಡ್ ಮತ್ತು ಫ್ಯಾನ್ಸಿ ಬಣ್ಣದ ಕಾರಿನ ಕ್ರೇಜ್ ಸಾಕಷ್ಟು ಜನರಿಗಿದೆ. ಅದೇ ರೀತಿ ಇದೂ ಕೂಡ ಫ್ಯಾನ್ಸಿ ಬಣ್ಣದ ಕಾರಷ್ಟೇ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. ಒಟ್ಟಾರೆ, ಈ ಕಾರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವುದಂತೂ ಸತ್ಯ.

ಇದನ್ನೂ ಓದಿ: Viral Video: ಮದುವೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ವಧು; ಕಂಗಾಲಾಗಿ ಮಂಟಪದಿಂದ ಓಡಿಹೋದ ವರ!

(Anand Mahindra shares viral video of Indian man flaunting his Gold Ferrari Car What is the Fact)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada