
ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 21: ಜಾಗತಿಕ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಆಪಲ್ (Apple) ಕಳೆದ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಉದ್ಯೋಗ ಕಡಿತ (Layoffs) ನಡೆಸಿದೆ ಎಂದು ವರದಿಯಾಗಿದೆ. ‘ಬ್ಲೂಮ್‌ಬರ್ಗ್’ ವರದಿಯ ಪ್ರಕಾರ, ಈ ಬಾರಿ ಆಪಲ್ ಸಂಸ್ಥೆಯು ತನ್ನ ‘ಫಿಟ್ನೆಸ್ ಪ್ಲಸ್’ (Fitness+) ವಿಭಾಗದ ಕೆಲ ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ.
ಯಾವ ವಿಭಾಗಕ್ಕೆ ಬಿಸಿ?: ಫಿಟ್‌ನೆಸ್ ಪ್ಲಸ್ ಸೇವೆಯ ಆಡಿಯೋ ತಂಡದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಈ ನಿರ್ಧಾರ ಆಘಾತ ತಂದಿದೆ. ವಿಶೇಷವಾಗಿ ‘ಟೈಮ್ ಟು ವಾಕ್’ (Time to Walk) ಮತ್ತು ‘ಟೈಮ್ ಟು ರನ್’ (Time to Run) ಆಡಿಯೋ ಫೀಚರ್‌ಗಳ ಸೃಷ್ಟಿಯಲ್ಲಿ ಭಾಗಿಯಾಗಿದ್ದ ತಂಡದ ಸಣ್ಣ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಇಬ್ಬರಲ್ಲಿ ಬಹುಮತಕ್ಕೆ ಇಬ್ಬರದ್ದೂ ಮತ ಬೇಕಲ್ಲವಾ? ಚಂದ್ರಶೇಖರನ್ ಮರುನೇಮಕ ನಿರ್ಧಾರ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್
ಕಳೆದ ತಿಂಗಳ ಉದ್ಯೋಗ ಕಡಿತ: ಆಗಸ್ಟ್‌ನಲ್ಲಿ (ಕಳೆದ ತಿಂಗಳು) ಆಪಲ್ ಸಂಸ್ಥೆಯು ತನ್ನ ಸಿರಿ (Siri), ವಿಷನ್ ಪ್ರೋ (Vision Pro) ಹಾಗೂ ಸಾಫ್ಟ್‌ವೇರ್ ಎಂಜಿನಿಯರಿಂಗ್ ವಿಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ತೆಗೆದುಹಾಕಿತ್ತು.
ಫಿಟ್‌ನೆಸ್ ಪ್ಲಸ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸದಿದ್ದರೂ, ನಿರಂತರ ಹೊಸ ಆಡಿಯೋ ಕಂಟೆಂಟ್ ತಯಾರಿಕೆಗೆ ತಗುಲುವ ವೆಚ್ಚವನ್ನು ತಗ್ಗಿಸಲು ಮತ್ತು ‘ಆಪಲ್ ಹೆಲ್ತ್’ (Apple Health) ಆಪ್ ಜೊತೆಗೆ ಇದನ್ನು ಸಂಯೋಜಿಸುವ ಆಂತರಿಕ ಮರುಸಂಘಟನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಪ್ರಮುಖ ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ, ಆಪಲ್ ಇತರ ದ್ವಿತೀಯ ಹಂತದ ಸೇವೆಗಳಲ್ಲಿ ತನ್ನ ವೆಚ್ಚವನ್ನು ಕಡಿತಗೊಳಿಸುತ್ತಿದೆ.
ಇದನ್ನೂ ಓದಿ: ‘ಮೋದಿ ಸರ್ಕಾರ ಅದ್ಭುತ ಕೆಲಸ ಮಾಡಿದೆ’: ಭಾರತದಲ್ಲಿ ಬದಲಾದ ವಾತಾವರಣದ ಕುರಿತು ಬ್ಲ್ಯಾಕ್‌ಸ್ಟೋನ್ ಅಧ್ಯಕ್ಷ ಜಾನ್ ಗ್ರೇ ಪ್ರಶಂಸೆ
ಜಾಗತಿಕ ಟೆಕ್ ಕ್ಷೇತ್ರದಲ್ಲಿ ಕಂಪನಿಗಳು ಮನಬಂದಂತೆ ಲೇ ಆಫ್ ಮಾಡುತ್ತಿವೆ. ಮೈಕ್ರೋಸಾಫ್ಟ್, ಅಮೇಜಾನ್, ಮೆಟಾ, ಎಕ್ಸ್, ಗೂಗಲ್ ಮೊದಲಾದ ಸಂಸ್ಥೆಗಳು ಕಳೆದ ಐದಾರು ವರ್ಷದಲ್ಲಿ ಮಾಡಿರುವ ಲೇ ಆಫ್ ನೋಡಿದರೆ ಸಂಖ್ಯೆ ಲಕ್ಷ ದಾಟುತ್ತದೆ. ಆಪಲ್ ಕಂಪನಿ ಕೆಲವೇ ನೂರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ ಎನ್ನುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ