ಬೆಂಗಳೂರು: ಐಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಕ ಆ್ಯಪಲ್ ಸಂಸ್ಥೆಯಿಂದ (Apple) ಭಾರತದಲ್ಲಿ ಒಳ್ಳೆಯ ಉದ್ಯೋಗಸೃಷ್ಟಿಯಾಗುತ್ತಿದೆ. ಕಳೆದ 19 ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಭಾರತದ ವಿವಿಧೆಡೆ 1 ಲಕ್ಷದಷ್ಟು ಹೊಸ ನೇರ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ಫೋನ್ ಪಿಎಲ್ಐ ಸ್ಕೀಮ್ (Smartphone PLI Scheme) ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗಿದೆ.
ಆ್ಯಪಲ್ ಸಂಸ್ಥೆ ತನ್ನ ಉತ್ಪನ್ನಗಳನ್ನು ತಯಾರಿಸಲು ಇತರ ಕಂಪನಿಗಳಿಗೆ ಗುತ್ತಿಗೆ ಕೊಡುತ್ತದೆ. ವಿಸ್ಟ್ರಾನ್, ಫಾಕ್ಸ್ಕಾನ್, ಪೆಗಾಟ್ರಾನ್ ಎಂಬ 3 ಕಂಪನಿಗಳು ಆ್ಯಪಲ್ ಉತ್ಪನ್ನಗಳನ್ನು ತಯಾರಿಸಲು ಇರುವ ವೆಂಡರ್ಗಳಾಗಿವೆ. ವಿಸ್ಟ್ರಾನ್ ಕಂಪನಿ ಕೋಲಾರದಲ್ಲಿ ಘಟಕ ಹೊಂದಿದೆ. ಈ ಮೂರು ಕಂಪನಿಗಳು 60 ಸಾವಿರಕ್ಕಿಂತ ಹೆಚ್ಚು ಹೊಸ ನೇರ ಉದ್ಯೋಗಸೃಷ್ಟಿಗೆ ಕಾರಣವಾಗಿವೆ. ಅದರಲ್ಲಿ ಹೆಚ್ಚಿನ ಭಾಗ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆ ಆರಂಭವಾದ 2021 ಆಗಸ್ಟ್ ನಂತರ ಸೃಷ್ಟಿಯಾಗಿವೆ.
ಇದರ ಜೊತೆಗೆ ಆ್ಯಪಲ್ನ ಕಾಂಪೊನೆಂಟ್, ಚಾರ್ಜರ್ ಇತ್ಯಾದಿ ಸರಬರಾಜುದಾರರಿರುವ ವ್ಯವಸ್ಥೆಯಿಂದ 40 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. ಟಾಟಾ ಎಲೆಕ್ಟ್ರಾನಿಕ್ಸ್, ಸಾಲ್ಕಾಂಪ್, ಅವರಿ, ಫಾಕ್ಸ್ಲಿಂಕ್, ಸನ್ವೋಡಾ, ಜಬಿಲ್ ಮೊದಲಾದ ಕಂಪನಿಗಳು ಆ್ಯಪಲ್ನ ಇಕೋಸಿಸ್ಟಂನ ಭಾಗಗಳಾಗಿವೆ.
ಭಾರತದಲ್ಲಿ ಐಫೋನ್ಗಳನ್ನು ತಯಾರಿಸುವ ಮೂರು ವೆಂಡರ್ಗಳ ಪೈಕಿ ಫಾಕ್ಸ್ಕಾನ್ ಹೋನ್ ಹಾಯ್ ಎಂಬ ಸಂಸ್ಥೆ 35 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದೆ. ಇದು ತಮಿಳುನಾಡಿನಲ್ಲಿ ಘಟಕ ಹೊಂದಿದೆ. ಇದೇ ತಮಿಳುನಾಡಿನಲ್ಲಿರುವ ಪೆಗಾಟ್ರಾನ್ ಕಂಪನಿ 14 ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಕರ್ನಾಟಕದಲ್ಲಿರುವ ವಿಸ್ಟ್ರಾನ್ ಕಂಪನಿ 12,800 ಮಂದಿಗೆ ಉದ್ಯೋಗ ಕೊಟ್ಟಿದೆ.
ಇದನ್ನೂ ಓದಿ: ಹಿಂದೂಸ್ತಾನ್ 228-201 LWಗೆ ಡಿಜಿಸಿಎ ಸಮ್ಮತಿ; HALನಿಂದ ತಯಾರಾಗಲಿವೆ ಕಮರ್ಷಿಯಲ್ ವಿಮಾನಗಳು
ಆ್ಯಪಲ್ ಸರಬರಾಜುದಾರರ ಪೈಕಿ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಸಾಲ್ಕಾಂಪ್ ಕಂಪನಿಗಳು ಅತಿಹೆಚ್ಚು ಉದ್ಯೋಗ ನೀಡಿದೆ.
2020, ಅಕ್ಟೋಬರ್ 6ರಂದು ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಸ್ಮಾರ್ಟ್ಫೋನ್ ಪಿಎಲ್ಐ ಸ್ಕೀಮ್ ಅಡಿಯಲ್ಲಿ ಮುಂದಿನ 5 ವರ್ಷದಲ್ಲಿ 2 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಇನ್ನೆರಡು ವರ್ಷದಲ್ಲಿ ಇನ್ನೂ 1 ಲಕ್ಷ ಉದ್ಯೋಗ ಸೃಷ್ಟಿಯಾದರೆ ಸರ್ಕಾರ ಇರಿಸಿದ ಗುರಿ ಈಡೇರಿದಂತಾಗುತ್ತದೆ.
ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಒಂದು ನೇರ ಉದ್ಯೋಗ ಇದ್ದರೆ ಮೂರು ಪಟ್ಟು ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಆ ಲೆಕ್ಕಾಚಾರದಲ್ಲಿ ಕಳೆದ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ ಮತ್ತು 3 ಲಕ್ಷ ಪರೋಕ್ಷ ಉದ್ಯೋಗಸೃಷ್ಟಿಗೆ ಆ್ಯಪಲ್ ಕಾರಣವಾಗಿದೆ.