ATM Withdrawal: ಹೊಸ ವರ್ಷಕ್ಕೆ ಬ್ಯಾಂಕ್ ಗ್ರಾಹಕರಿಗೆ ಶುಲ್ಕ ಏರಿಕೆ ಹೊರೆ; ಎಟಿಎಂ ವಿಥ್ಡ್ರಾ ಆಗಲಿದೆ ದುಬಾರಿ
2022ರ ಜನವರಿಯಿಂದ ಅನ್ವಯ ಆಗುವಂತೆ ಎಟಿಎಂಗಳಿಂದ ನಗದು ವ್ಯವಹಾರಗಳು ದುಬಾರಿ ಆಗಲಿವೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
2022ರ ಜನವರಿಯಿಂದ, ಅಂದರೆ ಮುಂದಿನ ತಿಂಗಳಿನಿಂದ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವ ಬ್ಯಾಂಕ್ ಗ್ರಾಹಕರು ಆಯಾ ಬ್ಯಾಂಕ್‌ಗಳ ಎಟಿಎಂಗಳಿಂದ ಹಣ ಹಿಂಪಡೆಯುವ ಮಿತಿ ಮುಗಿದ ನಂತರ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ನಗದು ಹಿಂಪಡೆಯಲು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಈ ಹಿಂದೆ ಅಧಿಸೂಚನೆಯಲ್ಲಿ, ನಗದು ಹಿಂಪಡೆಯುವಿಕೆ ಮಿತಿಯನ್ನು ಮೀರಿದ ನಂತರ ಎಟಿಎಂ ವಹಿವಾಟುಗಳಿಗಾಗಿ ಗ್ರಾಹಕರು ಜನವರಿ 2022ರಿಂದ ಇನ್ನೂ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಿತ್ತು. ಈ ಬದಲಾವಣೆಯನ್ನು ಗ್ರಾಹಕರಿಗೆ ನೆನಪಿಸಲು ಬ್ಯಾಂಕ್‌ಗಳು ಈಗಾಗಲೇ ಸೂಚನೆ ನೀಡುತ್ತಿವೆ. ಉಚಿತ ಮಾಸಿಕ ಮಿತಿಗಳನ್ನು ಮೀರಿ ನಗದು ಮತ್ತು ಎಟಿಎಂ ಶುಲ್ಕವನ್ನು ಹೆಚ್ಚಿಸಲು ಆರ್‌ಬಿಐನಿಂದ ಬ್ಯಾಂಕ್‌ಗಳಿಗೆ ಅವಕಾಶ ನೀಡಿದ್ದರಿಂದ ಎಟಿಎಂ ವಹಿವಾಟುಗಳು ದುಬಾರಿ ಆಗಲಿವೆ.
ಬದಲಾವಣೆಯನ್ನು ಜಾರಿಗೊಳಿಸಿದ ನಂತರ, ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಮಿತಿಯನ್ನು ಮೀರಿದ ನಂತರ ಹಣವನ್ನು ಹಿಂಪಡೆಯಲು ಪ್ರತಿ ವಹಿವಾಟಿಗೆ ರೂ. 21 ಪಾವತಿ ಮಾಡಬೇಕಾಗುತ್ತದೆ. ಸದ್ಯಕ್ಕೆ, ಅದೇ ಪರಿಸ್ಥಿತಿ ಬಂದರೆ ಬ್ಯಾಂಕ್ ಗ್ರಾಹಕರು ಪ್ರತಿ ವಹಿವಾಟಿಗೆ 20 ರೂಪಾಯಿ ನೀಡಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎಲ್ಲ ಬ್ಯಾಂಕ್ ಗ್ರಾಹಕರಿಗೆ ಈ ದರಗಳನ್ನು ವಿಧಿಸುವ ಮೊದಲಿಗೆ ತಮ್ಮ ಖಾತೆ ಇರುವ ಸ್ವಂತ ಬ್ಯಾಂಕ್‌ಗಳಲ್ಲಿ ಐದು ಉಚಿತ ಎಟಿಎಂ ವಹಿವಾಟುಗಳನ್ನು ಮಾಡಲು ಅನುಮತಿಸುತ್ತದೆ.
ಕೇಂದ್ರ ಬ್ಯಾಂಕ್ ಪ್ರಕಾರ, ಹೊಸ ನಿಯಮವು ಜನವರಿ 1, 2022ರಿಂದ ಜಾರಿಗೆ ಬರಲಿದೆ. ಆದರೂ ಡೆಬಿಟ್ ಕಾರ್ಡ್‌ಗಳನ್ನು ಹೊಂದಿರುವ ಎಲ್ಲ ಬ್ಯಾಂಕ್ ಗ್ರಾಹಕರು ತಿಂಗಳಿಗೆ ತಮ್ಮ ಖಾತೆ ಇರುವ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳಿಗೆ (ನಗದು ಅಥವಾ ನಗದುರಹಿತ ವಹಿವಾಟುಗಳು) ಪಡೆಯುತ್ತಾರೆ. ಹೆಚ್ಚುವರಿಯಾಗಿ, ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳಿಂದ ಮೂರು ಉಚಿತ ವಹಿವಾಟುಗಳಿಗೆ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ವಹಿವಾಟುಗಳಿಗೆ ಅರ್ಹರಾಗಿರುತ್ತಾರೆ. ಆರ್‌ಬಿಐ ಈ ವರ್ಷದ ಜೂನ್‌ನಲ್ಲಿ ಬದಲಾವಣೆಗಳ ಕುರಿತು ಸೂಚನೆ ನೀಡಿತ್ತು.
ಎಟಿಎಂ ವಹಿವಾಟಿನ ಬಗ್ಗೆ ಆರ್‌ಬಿಐ ನಿಖರವಾಗಿ ಏನು ಹೇಳಿದೆ? “ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿರುತ್ತಾರೆ. ಇತರ ಬ್ಯಾಂಕ್ ಎಟಿಎಂಗಳಿಂದ ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿರುತ್ತಾರೆ. ಮೆಟ್ರೋ ಕೇಂದ್ರಗಳಲ್ಲಿ ಮೂರು ವಹಿವಾಟುಗಳು ಮತ್ತು ಮೆಟ್ರೋ ಅಲ್ಲದ ಕೇಂದ್ರಗಳಲ್ಲಿ ಐದು ವಹಿವಾಟುಗಳು. ಉಚಿತ ವಹಿವಾಟುಗಳ ಹೊರತಾಗಿ, ಆಗಸ್ಟ್ 14, 2014ರ ಸುತ್ತೋಲೆ DPSS.CO.PD.No.316/02.10.002/2014-2015 ರಲ್ಲಿ ಸೂಚಿಸಿದಂತೆ, ಗ್ರಾಹಕ ಶುಲ್ಕಗಳ ಮೇಲಿನ ಮಿತಿ ಪ್ರತಿ ವಹಿವಾಟಿಗೆ ರೂ. 20 ಆಗಿತ್ತು. ಬ್ಯಾಂಕ್‌ಗಳಿಗೆ ವೆಚ್ಚವನ್ನು ಸರಿದೂಗಿಸಲು ಹೆಚ್ಚಿನ ವಿನಿಮಯ ಶುಲ್ಕ ಮತ್ತು ವೆಚ್ಚದಲ್ಲಿ ಸಾಮಾನ್ಯ ಹೆಚ್ಚಳವನ್ನು ನೀಡಿ, ಪ್ರತಿ ವಹಿವಾಟಿಗೆ ಗ್ರಾಹಕ ಶುಲ್ಕವನ್ನು 21 ರೂಪಾಯಿಗೆ ಹೆಚ್ಚಿಸಲು ಅನುಮತಿಸಲಾಗಿದೆ. ಈ ಹೆಚ್ಚಳವು ಜನವರಿ 1, 2022ರಿಂದ ಜಾರಿಗೆ ಬರಲಿದೆ,” ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜೂನ್ 10, 2021ರ ಅಧಿಸೂಚನೆಯಲ್ಲಿ ತಿಳಿಸಿದೆ.
“ನಗದು ಮರುಬಳಕೆ ಮಾಡುವ ಯಂತ್ರಗಳಲ್ಲಿ (ನಗದು ಠೇವಣಿ ವಹಿವಾಟುಗಳನ್ನು ಹೊರತುಪಡಿಸಿ) ಮಾಡಿದ ವಹಿವಾಟುಗಳಿಗೆ ಈ ಸೂಚನೆಗಳು ಅನ್ವಯವಾಗುತ್ತವೆ,” ಈ ಮೊತ್ತದ ಮೇಲೆ ಹೆಚ್ಚುವರಿ ತೆರಿಗೆಗಳನ್ನು ಪಾವತಿಸಲಾಗುವುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಹೊಸ ನಿಯಮದ ಬಗ್ಗೆ ಬ್ಯಾಂಕ್‌ಗಳು ಗ್ರಾಹಕರಿಗೆ ಸೂಚನೆ ನೀಡುತ್ತವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್‌ಗಳು ಹೊಸ ಅಧಿಸೂಚನೆಯೊಂದಿಗೆ ತಮ್ಮ ವೆಬ್‌ಸೈಟ್ ಅನ್ನು ನವೀಕರಿಸಿವೆ. “ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಲ್ಲಿನ ವಹಿವಾಟುಗಳಿಗೆ, ಹಣ ಹಿಂಪಡೆಯುವ ವಹಿವಾಟುಗಳನ್ನು ಮಾತ್ರ ಶುಲ್ಕ ವಿಧಿಸಲು ಪರಿಗಣಿಸಲಾಗುತ್ತದೆ. ಹಣಕಾಸೇತರ ವಹಿವಾಟುಗಳು (ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್ ಮತ್ತು ಪಿನ್ ಬದಲಾವಣೆ) ಉಚಿತವಾಗಿರುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ನದು ಅಲ್ಲದ ಎಟಿಎಂಗಳಲ್ಲಿನ ವಹಿವಾಟುಗಳಿಗಾಗಿ, ಶುಲ್ಕ ವಿಧಿಸಲು ಪರಿಗಣಿಸಲಾದ ವಹಿವಾಟುಗಳು ಹಣಕಾಸು (ನಗದು ಹಿಂತೆಗೆದುಕೊಳ್ಳುವಿಕೆ) ಮತ್ತು ಹಣಕಾಸೇರ ವಹಿವಾಟುಗಳನ್ನು (ಬ್ಯಾಲೆನ್ಸ್ ವಿಚಾರಣೆ, ಮಿನಿ ಸ್ಟೇಟ್‌ಮೆಂಟ್ ಮತ್ತು ಪಿನ್ ಬದಲಾವಣೆ) ಒಳಗೊಂಡಿರುತ್ತದೆ,” ಎಂದು ತಿಳಿಸಲಾಗಿದೆ.
ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, “1ನೇ ಜನವರಿ 2022 ರಿಂದ, ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್ ಎಟಿಎಂಗಳಲ್ಲಿ ಉಚಿತ ಮಿತಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟು ಶುಲ್ಕ ರೂ. 21 + ಜಿಎಸ್ಟಿ ಆಗಿರುತ್ತದೆ.” ಇದಕ್ಕೂ ಮೊದಲು, ಏಳು ವರ್ಷಗಳ ಅಂತರದ ನಂತರ ಆರ್‌ಬಿಐ ಕೊನೆಯದಾಗಿ 2021ರ ಆಗಸ್ಟ್ನಲ್ಲಿ ವಹಿವಾಟಿನ ಮಿತಿಯನ್ನು ಹೆಚ್ಚಿಸಿತ್ತು. ಎಟಿಎಂ ವಹಿವಾಟುಗಳಿಗೆ ಇಂಟರ್‌ಚೇಂಜ್ ಶುಲ್ಕ ರಚನೆಯಲ್ಲಿ ಕೊನೆಯ ಬದಲಾವಣೆಯನ್ನು ಆಗಸ್ಟ್ 2012ರಲ್ಲಿ ಮಾಡಲಾಗಿದೆ. ಆದರೆ ಗ್ರಾಹಕರು ಪಾವತಿಸಬೇಕಾದ ಶುಲ್ಕವನ್ನು ಕೊನೆಯದಾಗಿ 2014ರ ಆಗಸ್ಟ್ನಲ್ಲಿ ಪರಿಷ್ಕರಿಸಲಾಯಿತು.
ಇದನ್ನೂ ಓದಿ: SBI Credit card EMI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ಇಎಂಐ ಇಂದಿನಿಂದ ದುಬಾರಿ