SBI Credit card EMI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್​ ಕಾರ್ಡ್​ ಇಎಂಐ ಇಂದಿನಿಂದ ದುಬಾರಿ

ಪ್ರೊಸೆಸಿಂಗ್​ ಮೇಲೆ ಶುಲ್ಕ ವಿಧಿಸುವುದರಿಂದ ಡಿಸೆಂಬರ್ 1, 2021ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್​ ಕಾರ್ಡ್ ಇಎಂಐ ದುಬಾರಿ ಆಗಲಿದೆ.

SBI Credit card EMI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್​ ಕಾರ್ಡ್​ ಇಎಂಐ ಇಂದಿನಿಂದ ದುಬಾರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 01, 2021 | 5:33 PM

ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಡಿಸೆಂಬರ್ 1ರ ಬುಧವಾರದಿಂದ ತನ್ನ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದ ಎಲ್ಲ ಇಎಂಐ ವಹಿವಾಟುಗಳ ಮೇಲೆ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತದೆ. ಅಷ್ಟೇ ಅಲ್ಲ, ಇದೇ ಪ್ರಕ್ರಿಯೆಯ ಮೂಲಕ ಮಾಡುವ ವಹಿವಾಟಿನ ಮೇಲೆ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುವುದಾಗಿ ಬ್ಯಾಂಕ್ ಘೋಷಣೆ ಮಾಡಿದೆ. ಕಳೆದ ತಿಂಗಳು ಘೋಷಣೆ ಮಾಡಿದಂತೆ, ಎಸ್‌ಬಿಐ ಕಾರ್ಡ್ಸ್ ಅಂಡ್ ಪೇಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಎಸ್‌ಬಿಐಸಿಪಿಎಸ್‌ಎಲ್) 99 ರೂಪಾಯಿಯನ್ನು ಪ್ರೊಸೆಸಿಂಗ್ ಶುಲ್ಕ ಮತ್ತು ಅದರ ಮೇಲೆ ತೆರಿಗೆಗಳನ್ನು ವಿಧಿಸುತ್ತದೆ ಎಂದು ಹೇಳಿದೆ.

ಇದರ ಅರ್ಥ ಏನೆಂದರೆ, ಬ್ಯಾಂಕ್​ನ ಗ್ರಾಹಕರು ಈಗ ಎಸ್​ಬಿಐ ಕ್ರೆಡಿಟ್ ಕಾರ್ಡ್ ಇಎಂಐ ಯೋಜನೆಯ ಮೂಲಕ ಏನನ್ನಾದರೂ ಖರೀದಿಸಿದಾಗ ಹೆಚ್ಚಿನ ವಹಿವಾಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಂದಿನಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಇದು ರೀಟೇಲ್ ಮಾರಾಟ ಮಳಿಗೆಗಳಲ್ಲಿ ಮತ್ತು ಅಮೆಜಾನ್, ಫ್ಲಿಪ್​ಕಾರ್ಟ್​ ಮತ್ತು Myntraನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮಾಡಿದ ಎಲ್ಲ ಇಎಂಐ ವಹಿವಾಟುಗಳಿಗೆ ಅನ್ವಯಿಸುತ್ತದೆ.

ಗ್ರಾಹಕರಿಗೆ ಅಧಿಸೂಚನೆ ಇ-ಮೇಲ್ ರವಾನೆ ನವೆಂಬರ್ 12ರಂದು ಈ ಸಂಬಂಧವಾಗಿ ಬ್ಯಾಂಕ್​ನಿಂದ ಅಧಿಸೂಚನೆಯನ್ನು ಹೊರಡಿಸಲಾಯಿತು. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಆ ದಿನದಂದು ಇ-ಮೇಲ್ ಮೂಲಕ ಅಧಿಸೂಚನೆಯನ್ನು ಕಳುಹಿಸಲಾಗಿದೆ. “ನಾವು ನಿಮಗೆ ತಿಳಿಸಲು ಬಯಸುತ್ತೇವೆ, ಆತ್ಮೀಯ ಕಾರ್ಡ್‌ದಾರರೇ, 1 ಡಿಸೆಂಬರ್ 2021ರಿಂದ ಜಾರಿಗೆ ಬರುವಂತೆ ಮರ್ಚೆಂಟ್ ಔಟ್‌ಲೆಟ್/ವೆಬ್‌ಸೈಟ್/ಅಪ್ಲಿಕೇಷನ್‌ನಲ್ಲಿ ಮಾಡಿದ ಎಲ್ಲ ಮರ್ಚೆಂಟ್ ಇಎಂಐ ವಹಿವಾಟುಗಳಿಗೆ ಪ್ರೊಸೆಸಿಂಗ್ ಶುಲ್ಕ ರೂ. 99 + ಅನ್ವಯವಾಗುವ ತೆರಿಗೆಗಳನ್ನು ವಿಧಿಸಲಾಗುತ್ತದೆ. ನಿಮ್ಮ ನಿರಂತರ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ಮರ್ಚೆಂಟ್ ಇಎಂಐ ಪ್ರೊಸೆಸಿಂಗ್ ಶುಲ್ಕದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ,” ಎಂದು SBICPSLನಿಂದ ಮೇಲ್ ಕಳುಹಿಸಲಾಗಿದೆ.

ಎಲ್ಲ ಎಸ್​ಬಿಐ ಕ್ರೆಡಿಟ್ ಕಾರ್ಡ್​ದಾರರು ಈ ಸಂದೇಶವನ್ನು ಸ್ವೀಕರಿಸಿದ್ದಾರೆ. ಆದ್ದರಿಂದ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಇಎಂಐನಲ್ಲಿ ಏನನ್ನಾದರೂ ಖರೀದಿಸಲು ಬಯಸುವ ಎಸ್​ಬಿಐ ಗ್ರಾಹಕರು ಹೊಸ ನೀತಿಯ ಅಡಿಯಲ್ಲಿ ಬರಲು ಅರ್ಹರಾಗಿರುತ್ತಾರೆ. ಒಬ್ಬರ ಖರೀದಿಯನ್ನು ಮಾಸಿಕ ಪಾವತಿಗಳಾಗಿ ಪರಿವರ್ತಿಸಲು ಈ ದರಗಳು ಬಡ್ಡಿದರಗಳ ಮೇಲೆ ಮತ್ತು ಪ್ರಸ್ತುತವಾಗಿ ಲಕ್ಷಾಂತರ ನಾಗರಿಕರು ಬಳಸುತ್ತಿರುವ ಸೇವೆಗೆ ಅನ್ವಯಿಸುತ್ತವೆ ಎಂದು ಬ್ಯಾಂಕ್ ಹೇಳಿದೆ. ಸಂಬಂಧಿತ ಬ್ಯಾಂಕ್‌ಗಳಿಗೆ ಬಡ್ಡಿಯನ್ನು ಪಾವತಿಸುವ ಮೂಲಕ ಇಎಂಥ ವಹಿವಾಟುಗಳಿಗೆ ರಿಯಾಯಿತಿ ನೀಡುವ ಅನೇಕ ವ್ಯಾಪಾರಿಗಳಿಗೆ ಈ ಕ್ರಮವು ಆಘಾತದಂತೆ ಆಗಿದೆ. ಇದು ಗ್ರಾಹಕರಿಗೆ ನಂತರ ವ್ಯಾಪಾರಿಯಿಂದ ವಸ್ತುಗಳನ್ನು ಖರೀದಿಸುವಾಗ ‘ಶೂನ್ಯ ಬಡ್ಡಿ’ ಯೋಜನೆಯಾಗಿ ಗೋಚರಿಸುತ್ತದೆ. ಡಿಸೆಂಬರ್ 1ರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ರೂ. 99 ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇಎಂಐ ವಹಿವಾಟುಗಳ ಮೇಲೆ 99 ರೂಪಾಯಿ ಪ್ರೊಸೆಸಿಂಗ್ ಶುಲ್ಕ ಮಾಧ್ಯಮ ವರದಿಗಳ ಪ್ರಕಾರ, ಯಶಸ್ವಿಯಾಗಿ ಬದಲಾಯಿಸಿದ ಮಾಸಿಕ ಕಂತುಗಳು ಅಥವಾ ಇಎಂಐ ವಹಿವಾಟುಗಳಾಗಿ ಮಾತ್ರ 99 ರೂಪಾಯಿಗಳ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಮತ್ತೊಂದೆಡೆ, ಇಎಂಐ ವಹಿವಾಟು ವಿಫಲವಾದರೆ ಅಥವಾ ರದ್ದುಗೊಂಡರೆ ಪ್ರೊಸೆಸಿಂಗ್ ಶುಲ್ಕವನ್ನು ಹಿಂತಿರುಗಿಸಲಾಗುತ್ತದೆ. ಆದರೂ ಇಎಂಐ ಪ್ರೀಕ್ಲೋಷರ್ ಆದ ಸಂದರ್ಭದಲ್ಲಿ ಇದನ್ನು ಹಿಂತಿರುಗಿಸಲಾಗುವುದಿಲ್ಲ. ಡಿಸೆಂಬರ್ 1ರ ಮೊದಲು ಮಾಡಿದ ವಹಿವಾಟುಗಳಿಗೆ ನಂತರದ ದಿನಾಂಕದಿಂದ ಪಾವತಿ ಪ್ರಾರಂಭವಾಗುತ್ತದೆ, ಹೊಸ ನಿಯಮವನ್ನು ಅನುಸರಿಸುವುದಿಲ್ಲ.

ಆದರೆ, ಈ ಹೊಸ ನಿಯಮವು ಹೇಗೆ ಕಾರ್ಯನಿರ್ವಹಿಸುತ್ತದೆ? ನಿಮ್ಮ SBI ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಮೊಬೈಲ್ ಫೋನ್ ಅನ್ನು ಇ-ಕಾಮರ್ಸ್ ವೆಬ್‌ಸೈಟ್‌ನಿಂದ ಖರೀದಿಸಿದ್ದೀರಿ ಎಂದು ಭಾವಿಸೋಣ. ಉದಾಹರಣೆಗೆ ಅಮೆಜಾನ್​ನಿಂದ ಬ್ಯಾಂಕ್‌ನ ಇಎಂಐ ಯೋಜನೆಯಡಿ ಖರೀದಿಸಿದ್ದೀರಿ. ನಂತರ SBICPSL ನಿಮಗೆ ವಹಿವಾಟನ್ನು ಪ್ರೊಸೆಸ್​ ಮಾಡಲು ರೂ. 99 ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ. ಈ ವಹಿವಾಟು ಹೆಚ್ಚುವರಿಯಾಗಿ ತೆರಿಗೆಯನ್ನು ಸೇರಿಸುತ್ತದೆ. ಈ ಹೆಚ್ಚುವರಿ ಮೊತ್ತವು ಕ್ರೆಡಿಟ್ ಕಾರ್ಡ್‌ನ ಮಾಸಿಕ ಸ್ಟೇಟ್​ಮೆಂಟ್​ ಜತೆಗೆ ಆ ಉತ್ಪನ್ನದ ಇಎಂಐ ಮೊತ್ತವನ್ನು ಪ್ರತಿಬಿಂಬಿಸುತ್ತದೆ. ವರದಿಗಳ ಪ್ರಕಾರ, ಹೊಸ ಕ್ರಮವು ‘ಈಗ ಖರೀದಿಸಿ, ನಂತರ ಪಾವತಿಸಿ’ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏಕೆಂದರೆ ಅವು ಖರೀದಿದಾರರಿಗೆ ಹೆಚ್ಚು ದುಬಾರಿ ಆಗಬಹುದು. ಈ ಆಯ್ಕೆಗಳನ್ನು ಸಾಮಾನ್ಯವಾಗಿ ಇ-ಕಾಮರ್ಸ್ ವೆಬ್‌ಸೈಟ್‌ಗಳು ಒದಗಿಸುತ್ತವೆ.

ಇದನ್ನೂ ಓದಿ: SBI Bank Charges: ಯುಪಿಐ, ರುಪೇ ಡೆಬಿಟ್ ಕಾರ್ಡ್, ಮೂಲ ಉಳಿತಾಯ ಖಾತೆಗಳ ಶುಲ್ಕಗಳ ಬಗ್ಗೆ ಎಸ್​ಬಿಐ ಸ್ಪಷ್ಟನೆ