PF Interest: ಪಿಎಫ್​ ಖಾತೆದಾರರಿಗೆ ಬಡ್ಡಿ ಮೊತ್ತ ಜಮೆ; ಖಾತೆಗೆ ಬಂದಿದೆಯಾ ಪರಿಶೀಲಿಸುವುದು ಹೇಗೆ?

21.8 ಕೋಟಿ ಖಾತೆದಾರರಿಗೆ ಪಿಎಫ್​ ಬಡ್ಡಿ ದರವನ್ನು ಖಾತೆಗೆ ಜಮೆ ಮಾಡಲಾಗಿದೆ ಎಂದು ಇಪಿಎಫ್​ಒದಿಂದ ಮಾಹಿತಿ ನೀಡಲಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

PF Interest: ಪಿಎಫ್​ ಖಾತೆದಾರರಿಗೆ ಬಡ್ಡಿ ಮೊತ್ತ ಜಮೆ; ಖಾತೆಗೆ ಬಂದಿದೆಯಾ ಪರಿಶೀಲಿಸುವುದು ಹೇಗೆ?
ಸಾಂದರ್ಭಿಕ ಚಿತ್ರ

ಭವಿಷ್ಯ ನಿಧಿ ಖಾತೆಯಲ್ಲಿ ಹೆಚ್ಚಿದ ಬಡ್ಡಿದರಗಳಿಗೆ ಮಂಜೂರಾತಿ ನೀಡಿದ ಕೆಲ ದಿನಗಳ ನಂತರದಲ್ಲಿ ಇಪಿಎಫ್​ಒದಿಂದ ಘೋಷಣೆ ಮಾಡಿರುವ ಪ್ರಕಾರ, 2021-22ರ ಹಣಕಾಸಿನ ವರ್ಷಕ್ಕಾಗಿ 21.28 ಕೋಟಿ ಖಾತೆಗಳಿಗೆ ಶೇಕಡಾ 8.5ರ ಬಡ್ಡಿದರದೊಂದಿಗೆ ಜಮಾ ಮಾಡಲಾಗಿದೆ ಎಂದು ಘೋಷಿಸಿದೆ. ವರದಿಗಳಂತೆ, ಮುಂದಿನ ತಿಂಗಳ ಅಂತ್ಯದ ವೇಳೆಗೆ ಆರು ಕೋಟಿ ಖಾತೆದಾರರು ಇದರ ಲಾಭವನ್ನು ಪಡೆಯಲಿದ್ದಾರೆ. ಈ ವರ್ಷದ ಆರಂಭದಲ್ಲಿ 2020-21ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 8.5ರಿಂದ ಯಾವುದೇ ಬದಲಾವಣೆ ಮಾಡದೆ ಯಥಾ ಸ್ಥಿತಿಯಲ್ಲಿ ಇರಿಸಲು ಇಪಿಎಫ್‌ಒ ನಿರ್ಧರಿಸಿತು. ಅದಕ್ಕೂ ಮೊದಲು, ಕಾರ್ಮಿಕ ಸಚಿವಾಲಯದ ಪ್ರತಿನಿಧಿಗಳು ಬಡ್ಡಿದರಗಳನ್ನು ನಿಗದಿಪಡಿಸುವ ನಿರ್ಧಾರವನ್ನು ಶೀಘ್ರವಾಗಿ ಟ್ರ್ಯಾಕ್ ಮಾಡಲು ಹಣಕಾಸು ಸಚಿವಾಲಯವನ್ನು ಕೇಳಿದ್ದರು.

ಟ್ವೀಟ್‌ನಲ್ಲಿ ಇಪಿಎಫ್‌ಒ ತಿಳಿಸಿರುವಂತೆ, “2020-21ನೇ ಹಣಕಾಸು ವರ್ಷಕ್ಕೆ 21.38 ಕೋಟಿ ಖಾತೆಗಳಿಗೆ ಶೇ 8.50ರ ಬಡ್ಡಿಯೊಂದಿಗೆ ಜಮಾ ಮಾಡಲಾಗಿದೆ.” ಕೊವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ FY2021-22ಕ್ಕೆ ಬಡ್ಡಿದರಗಳನ್ನು ಬದಲಾಯಿಸದೆ ಇರಿಸಲು ಇಪಿಎಫ್​ಒ ​​ನಿರ್ಧರಿಸಿತ್ತು. ಭವಿಷ್ಯನಿಧಿಗೆ ಹಣ ಹಾಕುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಿಂಪಡೆಯುವುದೇ ಕಂಡುಬಂದವು. ಕೊವಿಡ್​ ಬಿಕ್ಕಟ್ಟು ದೇಶವನ್ನು ಅಪ್ಪಳಿಸಿದಾಗ FY2020-21ರಲ್ಲಿ ಬಡ್ಡಿದರವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಿತು.

ಇಪಿಎಫ್​ಒ ಪ್ರಸಕ್ತ ಹಣಕಾಸು ವರ್ಷದ ಹೆಚ್ಚುವರಿ ಬಡ್ಡಿದರದೊಂದಿಗೆ ಖಾತೆಗಳಿಗೆ ಜಮಾ ಮಾಡಿದ್ದರಿಂದ ಅನೇಕ ಜನರು ಈ ಮೊತ್ತವನ್ನು ಸ್ವೀಕರಿಸಿದ್ದಾರೆ ಎಂದು ಖಚಿತಪಡಿಸಲಾಗಿದೆ. ಆದರೆ ಅವರು ಖಾತೆಯ ಬಾಕಿಯನ್ನು ಹೇಗೆ ಪರಿಶೀಲಿಸುವುದು? ವಿವರಗಳನ್ನು ಹಂಚಿಕೊಳ್ಳಲು ಉದ್ಯೋಗದಾತರನ್ನು ಅವಲಂಬಿಸದಿರಲು ಆಯ್ಕೆ ಮಾಡಬಹುದು. ಏಕೆಂದರೆ ವಿವಿಧ ವಿಧಾನಗಳನ್ನು ಬಳಸಿಕೊಂಡು ಡಿಜಿಟಲ್‌ನಲ್ಲಿ ಯಾವುದೇ ಸಮಯದಲ್ಲಿ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಉಮಂಗ್ ಆ್ಯಪ್, ಇಪಿಎಫ್‌ಒ ಸದಸ್ಯರ ಇ-ಸೇವಾ ವೆಬ್‌ಸೈಟ್, ಎಸ್‌ಎಂಎಸ್ ಅಥವಾ ಮಿಸ್ಡ್ ಕಾಲ್‌ನಿಂದ ಪರಿಶೀಲಿಸುವುದು ಸಹ ಇವುಗಳಲ್ಲಿ ಸೇರಿವೆ. ಅವುಗಳ ಬಗ್ಗೆ ಇನ್ನಷ್ಟು ವಿವರಕ್ಕೆ ಮುಂದೆ ಓದಿ.

EPFO ಸದಸ್ಯ ಇ-ಸೇವಾ ಪೋರ್ಟಲ್ ಮೂಲಕ EPFO ​​ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು? ನಿಮ್ಮ ಸಕ್ರಿಯ ಯೂನಿವರ್ಸಲ್ ಖಾತೆ ಸಂಖ್ಯೆ (UAN) ಬಳಸಿಕೊಂಡು ಸರ್ಕಾರವು ನಡೆಸುತ್ತಿರುವ EPFO ​​ಪೋರ್ಟಲ್ ಅನ್ನು ಬಳಸಿಕೊಂಡು ಪಿಎಫ್​ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಈ ಪೋರ್ಟಲ್ ಅನ್ನು ಬಳಸಿಕೊಂಡು ಇ-ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಮುದ್ರಿಸಬಹುದು.

– ಮೊದಲಿಗೆ www.epfindia.gov.in ಗೆ ಲಾಗ್ ಇನ್ ಮಾಡಬೇಕು ಮತ್ತು ‘Our services’ ಡ್ರಾಪ್‌ಡೌನ್ ಮೆನು ಅಡಿಯಲ್ಲಿ ‘For employees’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

– ಆ ನಂತರ, ‘services’ ಅಡಿಯಲ್ಲಿ ‘members passbook’ ಆಯ್ಕೆಯನ್ನು ಕ್ಲಿಕ್ ಮಾಡಿ, ಅಲ್ಲಿ ನಿಮ್ಮ ಪಾಸ್‌ಬುಕ್ ಅನ್ನು ವೀಕ್ಷಿಸಲು UAN ಸಂಖ್ಯೆ ಮತ್ತು ಪಾಸ್‌ವರ್ಡ್ ಒದಗಿಸಬೇಕು.

– ಈ ಸೇವೆಯನ್ನು ಪ್ರವೇಶಿಸಲು ಸಕ್ರಿಯವಾದ UAN ಅನ್ನು ಹೊಂದಿರಬೇಕು ಮತ್ತು ಯೂನಿವರ್ಸಲ್ ಖಾತೆ ಸಂಖ್ಯೆಯನ್ನು ಉದ್ಯೋಗದಾತರು ಸಕ್ರಿಯಗೊಳಿಸದಿದ್ದರೆ ಅದು ಲಭ್ಯ ಇರುವುದಿಲ್ಲ.

– UAN ಹೊಂದಿಲ್ಲದಿದ್ದರೆ, epfoservices.in/epfo/ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಆಫೀಸ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಸ್ಥಿತಿಯನ್ನು ಆಯ್ಕೆ ಮಾಡಿ.

– PF ಖಾತೆ ಸಂಖ್ಯೆ, ಹೆಸರು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ‘submit’ ಕ್ಲಿಕ್ ಮಾಡಿ. PF ಬ್ಯಾಲೆನ್ಸ್ ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಎಸ್ಸೆಮ್ಮೆಸ್ ಸೇವೆಯ ಮೂಲಕ EPFO ​​ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು? – ಇಪಿಎಫ್‌ಒ ಸದಸ್ಯರು ಅವರ ಯುಎಎನ್‌ಗಳನ್ನು ನಿವೃತ್ತಿ ಸಂಸ್ಥೆಯಲ್ಲಿ ನೋಂದಾಯಿಸಿದ್ದಲ್ಲಿ ಇತ್ತೀಚಿನ ಕೊಡುಗೆಗಳು ಮತ್ತು ಭವಿಷ್ಯ ನಿಧಿಯ ಬಾಕಿ ವಿವರಗಳನ್ನು ಎಸ್‌ಎಂಎಸ್ ಮೂಲಕ ಪಡೆಯಬಹುದು.

– 7738299899 ಸಂಖ್ಯೆಗೆ “EPFOHO UAN ENG” ಟೆಕ್ಸ್ಟ್​ದೊಂದಿಗೆ SMS ಕಳುಹಿಸುವುದು. ‘ENG’ ಇಲ್ಲಿ ಆದ್ಯತೆಯ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಇಂಗ್ಲಿಷ್ ಅಂತ ಹಾಕಬಹುದು. ಈ ಸೇವೆಯು 10 ವಿವಿಧ ಭಾಷೆಗಳಲ್ಲಿ ಲಭ್ಯವಿದೆ.

– ಈ ನಿಟ್ಟಿನಲ್ಲಿ EPFO ​​ತನ್ನ ಸದಸ್ಯರ ವಿವರಗಳನ್ನು ಸಂಗ್ರಹಿಸುವುದರಿಂದ ನಿಮ್ಮ UAN ಅನ್ನು ಬ್ಯಾಂಕ್ ಖಾತೆ, ಆಧಾರ್ ಮತ್ತು PAN ನೊಂದಿಗೆ ಜೋಡಣೆ ಮಾಡಲು ಮರೆಯಬಾರದು. ಜೋಡಣೆ ಮಾಡಲು ಉದ್ಯೋಗದಾತರನ್ನು ಸಹ ಕೇಳಬಹುದು.

ಮಿಸ್ಡ್ ಕಾಲ್ ಸೇವೆಯ ಮೂಲಕ EPFO ​​ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು? – ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ ಅಥವಾ ಇಪಿಎಫ್‌ಒ ಸದಸ್ಯರು 011-22901406 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.

– ನೋಂದಾಯಿತ ಫೋನ್ ಸಂಖ್ಯೆಯಿಂದ ಕರೆ ಮಾಡಬೇಕು.

– UAN ಪೋರ್ಟಲ್‌ನಲ್ಲಿ ನೋಂದಾಯಿಸಿದ್ದರೆ ವಿವರಗಳನ್ನು ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ UAN ಅನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.

ಉಮಂಗ್ ಆ್ಯಪ್ ಮೂಲಕ ಇಪಿಎಫ್​ ​​ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು? ನೌಕರರು ತಮ್ಮ ಭವಿಷ್ಯ ನಿಧಿ ಬಾಕಿಯನ್ನು ವೀಕ್ಷಿಸಲು ಸರ್ಕಾರದ ಉಮಂಗ್ ಆ್ಯಪ್ ಅನ್ನು ಬಳಸಬಹುದು. ಕೇಂದ್ರವು ಬಿಡುಗಡೆ ಮಾಡಿದ ಅಪ್ಲಿಕೇಷನ್ ಅಡಿಯಲ್ಲಿ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಬಳಸಬಹುದು. ಇದನ್ನು ಬಳಸಿಕೊಂಡು, ಇಪಿಎಫ್ ಪಾಸ್‌ಬುಕ್ ಅನ್ನು ವೀಕ್ಷಿಸಬಹುದು, ಭವಿಷ್ಯ ನಿಧಿಯನ್ನು ಕ್ಲೇಮ್ ಮಾಡಬಹುದು ಮತ್ತು ನಿಮ್ಮ ಕ್ಲೇಮ್ ಅನ್ನು ಟ್ರ್ಯಾಕ್ ಮಾಡಬಹುದು. ಉದ್ಯೋಗಿ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅಪ್ಲಿಕೇಷನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ: PF Deposit: ಪಿಎಫ್​ ಠೇವಣಿ ಮೇಲೆ ಶೇ 8.5ರ ಬಡ್ಡಿಗೆ ಹಣಕಾಸು ಸಚಿವಾಲಯ ಅನುಮೋದನೆ

Click on your DTH Provider to Add TV9 Kannada