Cheque Payment: ಚೆಕ್ ಮೂಲಕ ಪಾವತಿಸುತ್ತಿದ್ದೀರಾ? ಇನ್ನು ಮುಂದೆ ಕಡ್ಡಾಯವಾಗಿ ಈ ಅಂಶಗಳು ನಿಮ್ಮ ಗಮನದಲ್ಲಿರಲಿ
ಇನ್ನು ಮುಂದೆ ಚೆಕ್ ಮೂಲಕ ಹಣವನ್ನು ಪಾವತಿಸುವ ಮೊದಲು ಈ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಿ. ಆರ್ಬಿಐನಿಂದ ಆಗಸ್ಟ್ 1ರಿಂದ ಅನ್ವಯ ಆಗುವಂತೆ ತಂದಿರುವ ನಿಯಮಗಳನ್ನು ತಿಳಿಯಿರಿ.
ನೀವು ಇನ್ನು ಮುಂದೆ ಚೆಕ್ ಮೂಲಕ ಯಾವುದೇ ಪಾವತಿ ಮಾಡುವಂತಿದ್ದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿಂಗ್ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಆಗಸ್ಟ್ 1ರಿಂದ ಜಾರಿಗೆ ಬಂದಿದೆ. ಕೇಂದ್ರ ಬ್ಯಾಂಕ್ನಿಂದ ತೀರ್ಮಾನಿಸಿದಂತೆ, ಬಲ್ಕ್ ಕ್ಲಿಯರಿಂಗ್ ದಿನದ 24 ಗಂಟೆಯೂ ವಾರದ ಎಲ್ಲ ದಿನಗಳಲ್ಲೂ (ರಜಾ ದಿನಗಳೂ ಸೇರಿ) ಲಭ್ಯ ಇರುತ್ತದೆ. ಆಗಸ್ಟ್ ತಿಂಗಳಿಂದ ನ್ಯಾಷನಲ್ ಆಟೋಮೆಟೆಡ್ ಕ್ಲಿಯರಿಂಗ್ ಹೌಸ್ (NACH) ಮೊದಲೇ ಹೇಳಿದಂತೆ ದಿನದ 24 ಗಂಟೆಯೂ ದೊರೆಯುತ್ತದೆ. ಆ ಕಾರಣದಿಂದಲೇ ಚೆಕ್ ಮೂಲಕ ಪಾವತಿ ಮಾಡುವುದು ಅಂತಾದರೆ ಒಂದಿಷ್ಟು ಮುಂಜಾಗ್ರತೆಯನ್ನು ವಹಿಸಬೇಕು. ಕಾರ್ಯ ನಿರ್ವಹಣೆ ಇಲ್ಲದ ದಿನಗಳಲ್ಲೂ ಹಾಗೂ ರಜಾ ದಿನಗಳಲ್ಲೂ ಚೆಕ್ ಕ್ಲಿಯರಿಂಗ್ ಆಗುತ್ತದೆ. ಈ ಕಾರಣದಿಂದ ಚೆಕ್ ವಿತರಿಸುವ ಮುನ್ನವೇ ಬ್ಯಾಂಕ್ ಖಾತೆಯಲ್ಲಿ ಅಗತ್ಯ ಪ್ರಮಾಣದ ಬ್ಯಾಲೆನ್ಸ್ ಇದೆಯಾ ಎಂಬುದನ್ನು ಖಾತ್ರಿ ಮಾಡಿಕೊಂಡೇ ನೀಡಬೇಕು. ಇಲ್ಲದಿದ್ದಲ್ಲಿ ಚೆಕ್ ಬೌನ್ಸ್ ಆಗಬಹುದು, ಅದರಿಂದ ದಂಡ ತೆರಬೇಕಾಗಬಹುದು.
ಏನಿದು ನ್ಯಾಷನಲ್ ಆಟೋಮೆಟೆಡ್ ಕ್ಲಿಯರಿಂಗ್ ಹೌಸ್ (NACH)? ನ್ಯಾಷನಲ್ ಆಟೋಮೆಟೆಡ್ ಕ್ಲಿಯರಿಂಗ್ ಹೌಸ್ (NACH) ಎಂಬುದು ಬಲ್ಕ್ ಕ್ಲಿಯರಿಂಗ್ ವ್ಯವಸ್ಥೆ. ಇದನ್ನು ನಿರ್ವಹಿಸುವುದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI). ಒಂದು ಸಲಕ್ಕೆ ಹಲವು ಖಾತೆಗಳಿಗೆ ಹಣ ಜಮೆ ಮಾಡಬಹುದಾದ ವ್ಯವಸ್ಥೆ ಇದು. ಡಿವಿಡೆಂಡ್, ಬಡ್ಡಿ, ವೇತನ ಹಾಗೂ ಪೆನ್ಷನ್ ಪಾವತಿಯಂಥದ್ದಕ್ಕೆ ಬಳಸಲಾಗುತ್ತದೆ. ಇದರ ಜತೆಗೆ ವಿದ್ಯುತ್ ಬಿಲ್, ಗ್ಯಾಸ್, ಟೆಲಿಫೋನ್, ನೀರು, ಸಾಲದ ಇಎಂಐಗಳು, ಮ್ಯೂಚುವಲ್ ಫಂಡ್ಗಳು ಹಾಗೂ ಇನ್ಷೂರೆನ್ಸ್ ಪ್ರೀಮಿಯಂಗಳ ಪಾವತಿಯ ಸಂಗ್ರಹಕ್ಕೂ ಬಳಸಲಾಗುತ್ತದೆ.
ಹೆಚ್ಚಿನ ಮೊತ್ತದ ಚೆಕ್ಗಳಿಗೆ ಹೊಸ ಪಾವತಿ ನಿಯಮ ಈ ವರ್ಷದ ಜನವರಿಯಲ್ಲಿ ಆರ್ಬಿಐನಿಂದ ಪಾಸಿಟಿವ್ ಪೇ ಸಿಸ್ಟಮ್ ಅನ್ನು ಜಾರಿಗೊಳಿಸಲಾಗಿದೆ. ಚೆಕ್ ಆಧಾರಿತ ವಹಿವಾಟಿನಲ್ಲಿ ಸುರಕ್ಷತೆ ಹೆಚ್ಚಿಸುವ ದೃಷ್ಟಿಯಿಂದ ಇದನ್ನು ತರಲಾಗಿದೆ. ಪಾಸಿಟಿವ್ ಪೇ ಸಿಸ್ಟಮ್ ಅಡಿಯಲ್ಲಿ 50 ಸಾವಿರ ರೂಪಾಯಿಗಿಂತ ಮೇಲ್ಪಟ್ಟ ಪಾವತಿಗೆ ಚೆಕ್ಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಮತ್ತೊಮ್ಮೆ ಖಾತ್ರಿ ಪಡಿಸಬೇಕಾಗುತ್ತದೆ. ಯಾರು ಚೆಕ್ ವಿತರಿಸುತ್ತಾರೋ ಅವರು ಎಲೆಕ್ಟ್ರಾನಿಕಲಿ ಚೆಕ್ ಮಾಹಿತಿಯನ್ನು ಸಲ್ಲಿಸಬೇಕು. ಚೆಕ್ ಸಂಖ್ಯೆ, ದಿನಾಂಕ, ಯಾರಿಗೆ ಪಾವತಿಸಲಾಗುತ್ತಿದೆಯೋ ಅವರ ಹೆಸರು, ಖಾತೆ ಸಂಖ್ಯೆ, ಮೊತ್ತ ಮತ್ತಿತರೆ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ.
ಇದನ್ನೂ ಓದಿ: ಬ್ಯಾಂಕೇತರ ಸಂಸ್ಥೆಗಳಿಗೆ ಹಂತ ಹಂತವಾಗಿ RTGS, NEFT ಕೇಂದ್ರೀಯ ಪಾವತಿ ವ್ಯವಸ್ಥೆ ಸಂಪರ್ಕಕ್ಕೆ ಅವಕಾಶ ನೀಡಲಿದೆ ಆರ್ಬಿಐ
(Before Making Payment Through Cheque These Points Keep It In Mind)