Bharti Airtel: ಬೆಂಗಳೂರಿನ ಸ್ಟಾರ್ಟಪ್ ಲೆಮ್ನಿಸ್ಕ್ ಷೇರು ಖರೀದಿಸಿದ ಏರ್‌ಟೆಲ್
ಏರ್ಟೆಲ್ನ ಸ್ಟಾರ್ಟಪ್ ಉತ್ತೇಜನ ಯೋಜನೆಯ ಮತ್ತು ಡಿಜಿಟಲ್ ಇನ್ನೋವೇಷನ್ ಎಂಜಿನ್ನ ಭಾಗವಾಗಿ ಲೆಮ್ನಿಸ್ಕ್ ಅನ್ನು ಸ್ವಾಗತಿಸಲು ಸಂತಸಗೊಂಡಿದ್ದೇವೆ ಎಂದು ಏರ್‌ಟೆಲ್ ಡಿಜಿಟಲ್ನ ಸಿಇಒ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವದೆಹಲಿ: ಬೆಂಗಳೂರಿನ ಸ್ಟಾರ್ಟಪ್ ಕಂಪನಿ ಲೆಮ್ನಿಸ್ಕ್ (Lemnisk) ಶೇಕಡಾ 8ರಷ್ಟು ಷೇರುಗಳನ್ನು ದೇಶದ ಅತಿದೊಡ್ಡ ದೂರಸಂಪರ್ಕ ಕಂಪನಿ ಭಾರ್ತಿ ಏರ್‌ಟೆಲ್ (Bharti Airtel) ಖರೀದಿಸಿದೆ. ಸ್ಟಾರ್ಟಪ್ ಉತ್ತೇಜನ ಯೋಜನೆಯ ಅಂಗವಾಗಿ ಈ ಷೇರು ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಏರ್‌ಟೆಲ್ ತಿಳಿಸಿದೆ. ಬೆಂಗಳೂರಿನ ಲೆಮ್ನಿಸ್ಕ್ ಕಂಪನಿಯು ರಿಯಲ್ಟೈಂ ಮಾರ್ಕೆಟಿಂಗ್ ಆಟೊಮೇಷನ್ ಮತ್ತು ಸೆಕ್ಯೂರ್ ಕಸ್ಟಮರ್ ಡಾಟಾ ಪ್ಲಾಟ್‌ಫಾರ್ಮ್ (ಸಿಡಿಪಿ) ಅನ್ನು ಒದಗಿಸುತ್ತದೆ.
‘ಏರ್ಟೆಲ್ನ ಸ್ಟಾರ್ಟಪ್ ಉತ್ತೇಜನ ಯೋಜನೆಯ ಮತ್ತು ಡಿಜಿಟಲ್ ಇನ್ನೋವೇಷನ್ ಎಂಜಿನ್ನ ಭಾಗವಾಗಿ ಲೆಮ್ನಿಸ್ಕ್ ಅನ್ನು ಸ್ವಾಗತಿಸಲು ಸಂತಸಗೊಂಡಿದ್ದೇವೆ. ಈ ಮೈತ್ರಿಯಿಂದ ಅನೇಕ ಸಾಧ್ಯತೆಗಳಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಜಗತ್ತಿನ ಅತಿದೊಡ್ಡ ಸಿಡಿಪಿ ತಾಣವನ್ನು ಸೃಷ್ಟಿಸಬಹುದಾಗಿದೆ. ಲೆಮ್ನಿಸ್ಕ್ ಕಂಪನಿಯು ರಿಯಲ್ಟೈಂ ಮಾರ್ಕೆಟಿಂಗ್ ಆಟೊಮೇಷನ್ ಪ್ರತಿ ದಿನ ಸುಮಾರು 350 ದಶಲಕ್ಷ ಗ್ರಾಹಕರನ್ನು ಹೊಂದಿರುವ ನಮಗೆ ಚೆನ್ನಾಗಿ ಹೊಂದಾಣಿಕೆಯಾಗಲಿದೆ’ ಎಂದು ಏರ್‌ಟೆಲ್ ಡಿಜಿಟಲ್ನ ಸಿಇಒ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Holidays in 2023: 15 ಸುದೀರ್ಘ ವಾರಾಂತ್ಯಗಳು; ಇಲ್ಲಿದೆ 2023ರ ರಜೆ ವಿವರ
ಶೇಕಡಾ 8ರಷ್ಟು ಷೇರು ಖರೀದಿಸಿರುವುದಾಗಿ ಷೇರುಮಾರುಕಟ್ಟೆಗೆ ಏರ್‌ಟೆಲ್ ಮಾಹಿತಿ ನೀಡಿದೆ. ಹಣಕಾಸು ವಿವರಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.
ಲೆಮ್ನಿಸ್ಕ್ ಕಂಪನಿಯು ಸಿಂಗಾಪುರ, ದುಬೈ, ಬೋಸ್ಟನ್ ಹಾಗೂ ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿದೆ. ಏರ್ಟೆಲ್ನ ಡಿಜಿಟಲ್ ಉದ್ಯಮಗಳಾದ ಏರ್‌ಟೆಲ್ ಆ್ಯಡ್ಸ್, ಡಿಜಿಟಲ್ ಎಂಟರ್ಟೇನ್ಮೆಂಟ್ ಹಾಗೂ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ಗಳಿಗೆ ಲೆಮ್ನಿಸ್ಕ್ ಕಂಪನಿಯು ಸಿಡಿಪಿ ಪ್ಲಾಟ್ಫಾರ್ಮ್ಗಳನ್ನು ಸಿದ್ಧಪಡಿಸಲಿದೆ. ಭವಿಷ್ಯದಲ್ಲಿ, ಏರ್‌ಟೆಲ್ ಈ ಸೇವೆಯನ್ನು ತನ್ನ ಗ್ರಾಹಕರಿಗೆ ನೆಟ್‌ವರ್ಕ್ ಇಂಟಿಗ್ರೇಟೆಡ್ ಕ್ಲೌಡ್ ಪ್ಲಾಟ್‌ಫಾರ್ಮ್ ಮೂಲಕ ಐಕ್ಯೂ ಸೇವೆಯಾಗಿ ನೀಡಲು ಯೋಜಿಸಿದೆ ಎಂದು ಕಂಪನಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ