ನವದೆಹಲಿ, ಜುಲೈ 18: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ಪಾದನಾ ವಲಯಕ್ಕೆ ಒತ್ತು ಕೊಡಲಾಗುತ್ತಿದೆ. ಇದು ಯಶಸ್ವಿಯಾಗುವುದು ಕಷ್ಟ ಎಂದು ಕೆಲ ಆರ್ಥಿಕ ತಜ್ಞರು ಅಭಿಪ್ರಾಯಪಡುವುದು ಹೌದು. ಮ್ಯಾನುಫ್ಯಾಕ್ಚರಿಂಗ್ನಲ್ಲಿ ಬಹಳ ಮುಂಚೂಣಿಯಲ್ಲಿರುವ ಚೀನಾದಂತಹ ದೈತ್ಯ ದೇಶದೆದುರು ಭಾರತ ಏನೂ ಮಾಡಲಾಗದು. ಉತ್ಪಾದನಾ ಕಾರ್ಯಗಳಿಗೆ ಬೇಕಾದ ಸೌಕರ್ಯ ವ್ಯವಸ್ಥೆ ಭಾರತದಲ್ಲಿ ಇಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು. 2014ರಲ್ಲಿ ಸರ್ಕಾರ ತಂದ ಮೇಕ್ ಇನ್ ಇಂಡಿಯಾ ಯೋಜನೆ 10 ವರ್ಷದಲ್ಲಿ ನಿರೀಕ್ಷೆಮೀರಿದ ಯಶಸ್ಸು ಗಳಿಸಿದೆ. ಇವತ್ತು ಉತ್ಪಾದನಾ ವಲಯದ ಜಾಗತಿಕ ಭೂಪಟದಲ್ಲಿ ಭಾರತದ ಹೆಸರು ಕಾಣಿಸಿಕೊಳ್ಳತೊಡಗಿದೆ.
ಇವತ್ತು ಮೊಬೈಲ್ ಫೋನ್ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನಕ್ಕೇರಿದೆ. ಒಂದೊಮ್ಮೆ ಭಾರತ ಶೇ. 80ರಷ್ಟು ಮೊಬೈಲ್ ಫೋನ್ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇವತ್ತು ಭಾರತಕ್ಕೆ ಬೇಕಾದ ಶೇ. 99.9ರಷ್ಟು ಫೋನ್ಗಳು ಭಾರತದಲ್ಲೇ ತಯಾರಾಗುತ್ತಿವೆ. ಬ್ರಿಟನ್, ಆಸ್ಟ್ರಿಯಾ, ನೆದರ್ಲ್ಯಾಂಡ್ಸ್, ಇಟಲಿ ಮೊದಲಾದ ದೇಶಗಳಲ್ಲಿ ಮೇಡ್ ಇನ್ ಇಂಡಿಯಾ ಫೋನ್ಗಳು ಸರಬರಾಜಾಗುತ್ತಿವೆ.
ಮೊಬೈಲ್ ಮಾತ್ರವಲ್ಲ, ಮಿಲಿಟರಿ, ಸ್ಪೇಸ್, ಎಲೆಕ್ಟ್ರಿಕ್ ವಾಹನ, ಸೆಮಿಕಂಡಕ್ಟರ್, ಕಟ್ಟಡ ನಿರ್ಮಾಣ, ರೈಲ್ವೆ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಬಂಡವಾಳ ಹರಿದುಬರುತ್ತಿದೆ. ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿದೆ. ಇದೆಲ್ಲದರ ಮಧ್ಯೆ ಇತರ ಕೆಲ ಕ್ಷೇತ್ರಗಳಲ್ಲಿ ಅನಿರೀಕ್ಷಿತ ರೀತಿಯಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಗರಿಗೆದರಿದೆ. ಅಂಥ ಕೆಲ ಸಂಗತಿಗಳ ವಿವರ ಇಲ್ಲಿದೆ…
ಇದನ್ನೂ ಓದಿ: ರಷ್ಯಾದ ಮೈನಸ್ 40 ಡಿಗ್ರಿ ಚಳಿಗೆ ಭಾರತದ ಶೂ; ರಷ್ಯನ್ ಸೈನಿಕರ ಕಾಲಿಗೆ ಹಾಜಿಪುರ್ ರಕ್ಷೆ
ಬಿಹಾರದ ಕೃಷಿಕರ ನಾಡೆನಿಸಿದ ಹಾಜಿಪುರ್ನಲ್ಲಿ ಶೂ ತಯಾರಿಕೆಯ ಕಾರ್ಖಾನೆ ಇದ್ದು ಇಲ್ಲಿ ರಷ್ಯನ್ ಸೇನೆ ಸೇಫ್ಟಿ ಶೂ ತಯಾರಿಸಿ ರಫ್ತು ಮಾಡುತ್ತಿದೆ. ಯೂರೋಪ್ ದೇಶಗಳಿಗೆ ಡಿಸೈನರ್ ಶೂ ತಯಾರಿಸುವ ಕಾರ್ಯವೂ ಇಲ್ಲಿ ನಡೆಯಲಿದೆ.
ವಿಶ್ವದ ಬೈಸಿಕಲ್ ರಾಜಧಾನಿ ಎನಿಸಿದ ನೆದರ್ಲ್ಯಾಂಡ್ಸ್ನಲ್ಲಿ ಮೇಡ್ ಇನ್ ಇಂಡಿಯಾ ಬೈಸಿಕಲ್ ಜನಪ್ರಿಯವಾಗಿದೆ. ಇಲ್ಲಿ ಮಾತ್ರವಲ್ಲ, ಬ್ರಿಟನ್, ಜರ್ಮನಿಯಲ್ಲೂ ಭಾರತದ ಸೈಕಲ್ಗಳಿಗೆ ಬೇಡಿಕೆ ಇದೆ. ಚೀನಾ ನಿರ್ಮಿತ ಸೈಕಲ್ಗಿಂತ ಭಾರತೀಯ ಸೈಕಲ್ಗಳ ಗುಣಮಟ್ಟ ಉತ್ತಮ ಎನಿಸಿದೆ.
ಭಾರತದ ಅಗ್ರಗಣ್ಯ ಹಾಲು ತಯಾರಕಾ ಸಂಸ್ಥೆಯಾದ ಅಮುಲ್ 50ಕ್ಕೂ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆ ಹೊಂದಿದೆ. ಅಮೆರಿಕ ದೇಶಕ್ಕೂ ಅದು ಲಗ್ಗೆ ಹಾಕಿದೆ. ಕೆಎಂಎಫ್ ನಂದಿನಿ ಹಾಲು ಕೂಡ ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳೆಯಲಾಗುವ ವಿಲ್ಲೋ ಮರದಿಂದ ಮಾಡಲಾದ ಕ್ರಿಕೆಟ್ ಬ್ಯಾಟ್ ಜನಪ್ರಿಯವಾಗುತ್ತಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳಿಂದ ಈ ಬ್ಯಾಟ್ಗಳಿಗೆ ಆರ್ಡರ್ ಬರುತ್ತಿದೆ. ಈ ವಿಲ್ಲೋ ಮರಗಳು ಕಾಶ್ಮೀರದಲ್ಲಿ ಬೆಳೆಯುವ ವಿಶೇಷ ಜಾತಿಯ ಮರ. ಈ ವಿಲ್ಲೋ ಬ್ಯಾಟ್ಗಳಿಗೆ ಜಿಐ ಟ್ಯಾಗ್ ಪಡೆಯಲು ಸರ್ಕಾರ ಯತ್ನಿಸುತ್ತಿದೆ.
ಭಾರತವೇ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ವಿಶ್ವದ ಪ್ರಬಲ ಕ್ಷಿಪಣಿಗಳಲ್ಲಿ ಒಂದಾಗಿದೆ. ಈ ಸೂಪರ್ಸೋನಿಕ್ ಕ್ರೂಸ್ ಮಿಸೈಲ್ ಬಗ್ಗೆ ಹಲವು ದೇಶಗಳು ಆಸಕ್ತವಾಗಿವೆ. ಸದ್ಯ ಫಿಲಿಪ್ಪೈನ್ಸ್ ದೇಶ ಈ ಕ್ಷಿಪಣಿಯನ್ನು ಖರೀದಿಸಿದೆ. ಇತರ ದೇಶಗಳೂ ಕೂಡ ಈ ಕ್ಷಿಪಣಿ ಪಡೆಯಲು ಮುಂದಾಗಬಹುದು.
ಭಾರತದ ಯುಪಿಐ ಪಾವತಿ ವ್ಯವಸ್ಥೆ ದೇಶದಲ್ಲಿ ಚಮತ್ಕಾರವನ್ನೇ ಮಾಡಿದೆ. ಈ ಮಾದರಿ ಪೇಮೆಂಟ್ ಸಿಸ್ಟಂ ಬೇರೆ ಬೇರೆ ದೇಶಗಳಲ್ಲೂ ಅಳವಡಿಕೆ ಆಗುತ್ತಿದೆ. ಫ್ರಾನ್ಸ್, ಯುಎಇ, ಸಿಂಗಾಪುರ್, ಶ್ರೀಲಂಕಾ, ಮಾರಿಷಸ್, ನೇಪಾಳ ಮೊದಲಾದ ದೇಶಗಳಲ್ಲಿ ಯುಪಿಐ ಅಳವಡಿಕೆ ಆಗಿದೆ.
ಅಮೇಜಾನ್ನ ಬ್ಲ್ಯಾಕ್ ಫ್ರೈಡೆ, ಸೈಬರ್ ಮಂಡೇ ಮಾರಾಟ ಕಾರ್ಯಕ್ರಮದಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳೇ ಹೆಚ್ಚು ಮಾರಾಟವಾಗುತ್ತಿವೆ. ಇದು ಜಾಗತಿಕ ಇಕಾಮರ್ಸ್ ಮಾರುಕಟ್ಟೆಯಲ್ಲಿ ಭಾರತದ ಮಹತ್ವವನ್ನು ತೋರಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ