ರಷ್ಯಾದ ಮೈನಸ್ 40 ಡಿಗ್ರಿ ಚಳಿಗೆ ಭಾರತದ ಶೂ; ರಷ್ಯನ್ ಸೈನಿಕರ ಕಾಲಿಗೆ ಹಾಜಿಪುರ್ ರಕ್ಷೆ
Made in Bihar Shoes: ರಷ್ಯಾದ ಮೈನಸ್ 40 ಡಿಗ್ರಿಯವರೆಗಿನ ಶೀತ ಪ್ರದೇಶದಲ್ಲಿ ಅಲ್ಲಿನ ಸೈನಿಕರಿಗೆ ಭಾರತದ ಶೂಗಳು ರಕ್ಷಣೆ ಕೊಡುತ್ತಿವೆ. ಹಾಜಿಪುರ್ನಲ್ಲಿ ಪುಟ್ಟ ಖಾಸಗಿ ಶೂ ತಯಾರಿಕಾ ಕಂಪನಿಯೊಂದು ರಷ್ಯಾ ಮಿಲಿಟರಿಗೆ ಶೂ ರಫ್ತು ಮಾಡುತ್ತಿದೆ. ಯೂರೋಪ್ನ ವಿವಿಧ ದೇಶಗಳಿಗೆ ಡಿಸೈನರ್ ಶೂಗಳನ್ನೂ ಈ ಕಂಪನಿ ತಯಾರಿಸಿಕೊಡುವ ಆರ್ಡರ್ ಪಡೆಯುತ್ತಿದೆ.
ಪಾಟ್ನಾ, ಜುಲೈ 17: ಬಿಹಾರ ಸಂಪನ್ಮೂಲ ಶ್ರೀಮಂತ ರಾಜ್ಯವಾದರೂ ಪ್ರಮುಖ ಉದ್ಯಮವಿಲ್ಲದೇ ಬಡ ಪ್ರದೇಶಗಳ ಸಾಲಿನಲ್ಲಿ ಇದೆ. ಇಂಥ ಬಿಹಾರ ಅಂತಾರಾಷ್ಟ್ರೀಯ ಉದ್ಯಮ ನಕ್ಷೆಗೆ ಸೇರುವ ದಿನಗಳು ಸನ್ನಿಹಿತವಾಗಿದೆ. ಇದಕ್ಕೆ ಇಂಬು ಕೊಡುತ್ತಿರುವುದು ಕಾಂಪಿಟೆನ್ಸ್ ಎಕ್ಸ್ಪೋರ್ಟ್ಸ್ ಎಂಬ ಪುಟ್ಟ ಖಾಸಗಿ ಕಂಪನಿ. ಕಳೆದ ಐದಾರು ವರ್ಷದಿಂದ ಶೂ ತಯಾರಿಸುತ್ತಿರುವ ಈ ಕಂಪನಿ ಅಚ್ಚರಿ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಹಾಜಿಪುರ್ನಲ್ಲಿ ಶೂ ಫ್ಯಾಕ್ಟರಿ ಹೊಂದಿರುವ ಈ ಕಂಪನಿ ಕಳೆದ ಒಂದು ವರ್ಷದಲ್ಲಿ 100 ಕೋಟಿ ರೂ ಮೌಲ್ಯದ 15 ಲಕ್ಷ ಶೂಗಳನ್ನು ಹೊರದೇಶಗಳಿಗೆ ರಫ್ತು ಮಾಡಿದೆ. ಮುಂದಿನ ವರ್ಷದಲ್ಲಿ ಈ ರಫ್ತನ್ನು ಶೇ. 50ರಷ್ಟು ಹೆಚ್ಚಿಸಲು ಹೊರಟಿದೆ.
ರಷ್ಯಾ ಸೈನಿಕರ ಕಾಲಿನಲ್ಲಿ ಹಾಜಿಪುರ್ ಶೂ
ಭಾರತದ ಸಿಯಾಚಿನ್ ಆಗಲೀ ಹಿಮಾಲಯ ಗ್ಲೇಷಿಯರ್ನ ಯಾವುದೇ ಭಾಗಕ್ಕಿಂತ ಹೆಚ್ಚು ಶೀತ ಪ್ರದೇಶ ರಷ್ಯಾದಲ್ಲಿ ಇದೆ. ಇಲ್ಲಿಯ ಕೆಲ ಪ್ರದೇಶಗಳಲ್ಲಿ ಮೈನಸ್ 40 ಡಿಗ್ರಿಯಷ್ಟು ಕೊರೆಯುವ ಚಳಿ ಇರುತ್ತದೆ. ಇಲ್ಲಿ ಸೈನಿಕರು ಪಹರೆ ತಿರುಗುವುದು ಅನಿವಾರ್ಯ. ರಷ್ಯಾ ಸೇನೆ ಇದೇ ಹಾಜಿಪರ್ನ ಕಾಂಪಿಟೆನ್ಸ್ ಎಕ್ಸ್ಪೋರ್ಟ್ಸ್ನಿಂದ ಶೂ ತಯಾರಿಸಿಕೊಂಡು ತರಿಸುತ್ತಿದೆ. ರಷ್ಯನ್ ಸೈನಿಕರ ಕಾಲಿಗೆ ಈಗಾಗಲೇ ಈ ಶೂ ರಕ್ಷಾ ಕವಚವಾಗಿಬಿಟ್ಟಿದೆ.
ರಷ್ಯಾಗೆ ಭಾರತದ ರಫ್ತುದಾರರಲ್ಲಿ ಕಾಂಪಿಟೆನ್ಸ್ ಎಕ್ಸ್ಪೋರ್ಟ್ಸ್ ಅಗ್ರಸ್ಥಾನ ಪಡೆದಿದೆ. ರಷ್ಯನ್ ಸೈನಿಕರಿಗೆ ಇದು ತಯಾರಿಸುವ ಶೂ ಗುಣಮಟ್ಟದಲ್ಲಿ ಉತ್ಕೃಷ್ಟವಾದುದು. ಹಗುರ ತೂಕದ ಈ ಶೂ ಎಂಥ ಚಳಿ ವಾತಾವರಣದಲ್ಲೂ ಕಾಲನ್ನು ಬೆಚ್ಚಗಿರಿಸುತ್ತದೆ.
ಇದನ್ನೂ ಓದಿ: ನೀವು ನಕಲಿ ರೆಂಟ್ ರೆಸಿಪ್ಟ್ ಸಲ್ಲಿಸಿದ್ರೆ ಸರ್ಕಾರಕ್ಕೆ ಗೊತ್ತಾಗುತ್ತೆ ಹುಷಾರ್..! ಇಲಾಖೆ ನೆರವಿಗೆ ಎಐ ಟೆಕ್ನಾಲಜಿ
ಯೂರೋಪ್ ದೇಶಗಳಿಗೆ ಫ್ಯಾಷನ್ ಮತ್ತು ಡಿಸೈನರ್ ಶೂ ರಫ್ತು…
ಹಾಜಿಪುರ್ನ ಈ ಶೂ ಕಂಪನಿ ಕೇವಲ ರಷ್ಯಾಗೆ ಮಾತ್ರ ಶೂ ರಫ್ತು ಮಾಡುತ್ತಿಲ್ಲ, ಯೂರೋಪ್ನ ಕೆಲ ದೇಶಗಳಿಗೆ ಡಿಸೈನರ್ ಶೂಗಳನ್ನು ತಯಾರಿಸಿ ರಫ್ತು ಮಾಡುತ್ತಿದೆ. ಇಟಲಿ, ಫ್ರಾನ್ಸ್, ಸ್ಪೇನ್, ಬ್ರಿಟನ್ ಮೊದಲಾದ ದೇಶಗಳಿಂದ ಆರ್ಡರ್ ಬರುತ್ತಿದೆ ಎನ್ನಲಾಗಿದೆ. ವಿದೇಶಗಳಿಂದ ವಿವಿಧ ಕಂಪನಿಗಳು ಹಾಜಿಪುರ್ಗೆ ಬಂದು ಇಲ್ಲಿಯ ಉತ್ಪಾದನಾ ಘಟಕವನ್ನು ವೀಕ್ಷಿಸಲಿವೆ.
ಕುತೂಹಲ ಎಂದರೆ, ಕಾಂಪಿಟೆನ್ಸ್ ಎಕ್ಸ್ಪೋರ್ಟ್ಸ್ ಸಂಸ್ಥೆ ತನ್ನ ಶೂಗಳನ್ನು ವಿದೇಶಗಳಿಗೆ ಕಳುಹಿಸುತ್ತಿದೆಯಾದರೂ ಭಾರತದ ಮಾರುಕಟ್ಟೆಗೆ ಇನ್ನೂ ಬಿಡುಗಡೆ ಮಾಡಿಲ್ಲ. ಸದ್ಯದಲ್ಲೇ ಅದೂ ಆಗಲಿದೆ.
ದೊಡ್ಡ ಫ್ಯಾಕ್ಟರಿ ನಿರ್ಮಿಸುವ ಆಲೋಚನೆ
ಸದ್ಯ ಹಾಜಿಪುರ್ನಲ್ಲಿ ಕಾಂಪಿಟೆನ್ಸ್ ಎಕ್ಸ್ಪೋರ್ಟ್ಸ್ ಒಂದು ಸಣ್ಣ ಫ್ಯಾಕ್ಟರಿ ಹೊಂದಿದೆ. ಇಲ್ಲಿ 300 ಉದ್ಯೋಗಿಗಳು ಕೆಲಸ ಮಾಡುತ್ತಾರೆ. ವಿಶೇಷ ಎಂದರೆ ಶೇ. 70ರಷ್ಟು ಉದ್ಯೋಗಿಗಳು ಮಹಿಳೆಯರೇ ಇದ್ದಾರೆ. ಬಿಹಾರದಲ್ಲಿ ಹೊಸದಾದ ವಿಶ್ವದರ್ಜೆ ಕಾರ್ಖಾನೆಯನ್ನು ಸ್ಥಾಪಿಸುವ ಉದ್ದೇಶ ಕಂಪನಿಯದ್ದು. ಬಿಹಾರದಲ್ಲಿ ಹೆಚ್ಚೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಇದೆ ಎನ್ನುತ್ತಾರೆ ಕಾಂಪಿಟೆನ್ಸ್ ಎಕ್ಸ್ಪೋರ್ಟ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ದಾನೇಶ್ ಪ್ರಸಾದ್ ಹೇಳುತ್ತಾರೆ.
ಇದನ್ನೂ ಓದಿ: ಪ್ರಸಕ್ತ ಹಣಕಾಸು ವರ್ಷ ಭಾರತದ ಆರ್ಥಿಕತೆ ಶೇ 7ರಷ್ಟು ಬೆಳೆಯುವ ಸಾಧ್ಯತೆ; ಅಂದಾಜು ಹೆಚ್ಚಿಸಿದ ಐಎಂಎಫ್
ಬಿಹಾರ ಮೂಲಸೌಕರ್ಯ ವೃದ್ದಿಯಾಗಬೇಕು…
ವಿದೇಶಗಳಿಂದ ಉದ್ಯಮಿಗಳು ಇಲ್ಲಿಯ ಸವಲತ್ತುಗಳನ್ನು ವೀಕ್ಷಿಸಲು ಬರುವುದರಿಂದ ಬಿಹಾರದಲ್ಲಿ ಸರಿಯಾದ ರಸ್ತೆ ಮತ್ತಿತತರ ಸಂಪರ್ಕ ಸೌಕರ್ಯ ವ್ಯವಸ್ಥೆ ಚೆನ್ನಾಗಿರಬೇಕು ಎನ್ನುತ್ತಾರೆ ಕಾಂಪಿಟೆನ್ಸ್ ಎಕ್ಸ್ಪೋರ್ಟ್ಸ್ ಘಟಕದ ಜನರಲ್ ಮ್ಯಾನೇಜರ್ ಶಿಬ್ ಕುಮಾರ್ ರಾಯ್ ತಿಳಿಸಿದ್ದಾರೆ.
ಘಟಕದಲ್ಲಿ ಕೆಲಸ ಮಾಡಲು ನುರಿತರ ಅವಶ್ಯಕತೆ ಇದೆ. ಆ ರೀತಿಯ ತಜ್ಞರ ನಿರ್ಮಾಣ ಆಗಲು ತರಬೇತಿ ಸಂಸ್ಥೆಯೊಂದನ್ನು ಬಿಹಾರದಲ್ಲಿ ಸ್ಥಾಪಿಸಬೇಕಾಗುತ್ತದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ