
ನವದೆಹಲಿ, ಜೂನ್ 25: ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಭಾರಿ ಏರುಪೇರು ಕಂಡುಬಂದಿದ್ದು, ಪ್ರಮುಖ ಕ್ರಿಪ್ಟೋಕರೆನ್ಸಿ ಆದ ಬಿಟ್‌ಕಾಯಿನ್ (Bitcoin) ತೀವ್ರ ಕುಸಿತದ ಹಾದಿ ಹಿಡಿದಿದೆ. ಎಂಟು ತಿಂಗಳ ಹಿಂದೆ $1.26 ಲಕ್ಷ ಇದ್ದ ಬಿಟ್‌ಕಾಯಿನ್ ಮೌಲ್ಯವು ಸದ್ಯ $60,000 (ಅಂದಾಜು ₹56 ಲಕ್ಷ) ಮಟ್ಟಕ್ಕಿಂತ ಕೆಳಕ್ಕೆ ಜಾರಿದ್ದು, ಹಲವು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಬಿಟ್‌ಕಾಯಿನ್ ಜೊತೆಗೆ ಎಥೆರಿಯಮ್ (Ethereum), ಸೋಲಾನಾ (Solana) ಸೇರಿದಂತೆ ಇತರ ಪ್ರಮುಖ ಆಲ್ಟ್‌ಕಾಯಿನ್‌ಗಳು ಸಹ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸುತ್ತಿವೆ. ಕ್ರಿಪ್ಟೋ ಮಾರುಕಟ್ಟೆ ದಿಢೀರ್ ಆಗಿ ಹೀಗೆ ಕುಸಿಯಲು ಪ್ರಮುಖ ಕಾರಣಗಳೇನಿರಬಹುದು?
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ‘ಫೆಡರಲ್ ರಿಸರ್ವ್’ (US Fed) ಬಡ್ಡಿದರಗಳನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಮುಂದೂಡಬಹುದು ಎಂಬ ಮುನ್ಸೂಚನೆಗಳು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿವೆ. ಹಣದುಬ್ಬರದ ಒತ್ತಡದಿಂದಾಗಿ ಬಡ್ಡಿದರಗಳು ದೀರ್ಘಕಾಲದವರೆಗೆ ಗರಿಷ್ಠ ಮಟ್ಟದಲ್ಲೇ ಉಳಿಯಲಿವೆ ಎಂಬ ಭಯದಿಂದ ಹೂಡಿಕೆದಾರರು ಕ್ರಿಪ್ಟೋಕರೆನ್ಸಿಯಂತಹ ಅಪಾಯಕಾರಿ ಆಸ್ತಿಗಳಿಂದ (Risky Assets) ತಮ್ಮ ಹಣವನ್ನು ಹಿಂಪಡೆಯುತ್ತಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ
ಕಳೆದ ಒಂದು ದಶಕದ ಹಿಂದೆ ದಿವಾಳಿಯಾಗಿದ್ದ ಜಪಾನ್ ಮೂಲದ ಪ್ರಮುಖ ಕ್ರಿಪ್ಟೋ ಎಕ್ಸ್‌ಚೇಂಜ್ ‘ಮೌಂಟ್ ಗ್ಯಾಕ್ಸ್’ (Mt. Gox), ತನ್ನ ಗ್ರಾಹಕರಿಗೆ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಮರುಪಾವತಿ ಮಾಡಲು ಸಿದ್ಧತೆ ನಡೆಸಿದೆ. ಈ ಬಿಟ್‌ಕಾಯಿನ್‌ಗಳು ಮಾರುಕಟ್ಟೆಗೆ ಒಮ್ಮೆಲೇ ಬಂದರೆ, ಗ್ರಾಹಕರು ತಮಗ ಸಿಕ್ಕ ಚಿನ್ನದಂತಹ ಲಾಭವನ್ನು ನಗದೀಕರಿಸಲು ಭಾರಿ ಪ್ರಮಾಣದಲ್ಲಿ ಮಾರಾಟ (Panic Selling) ಮಾಡಬಹುದು. ಇದು ಮಾರುಕಟ್ಟೆಯಲ್ಲಿ ಭಾರಿ ಪೂರೈಕೆಯನ್ನು (Over-supply) ಸೃಷ್ಟಿಸಿ ಬೆಲೆ ಮತ್ತಷ್ಟು ಕುಸಿಯಲು ಕಾರಣವಾಗಬಹುದು ಎಂಬ ಭೀತಿ ಹೂಡಿಕೆದಾರರನ್ನು ಕಾಡುತ್ತಿದೆ. ಹೀಗಾಗಿ, ಹಲವರು ಕ್ರಿಪ್ಟೋ ಅಸೆಟ್ಗಳನ್ನು ಮಾರಲು ಮುಂದಾದ ಕಾರಣ ಬೆಲೆ ಕಡಿಮೆ ಆಗುತ್ತಿದೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವು ದೇಶಗಳು ಕ್ರಿಪ್ಟೋ ವಹಿವಾಟಿನ ಮೇಲೆ ಕಠಿಣ ಕಾನೂನುಗಳು ಮತ್ತು ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಿವೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಸಹ ಪ್ರಮುಖ ಕ್ರಿಪ್ಟೋ ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ಬಿಗಿಗೊಳಿಸುತ್ತಿರುವುದು ಸಾಂಸ್ಥಿಕ ಹೂಡಿಕೆದಾರರು (Institutional Investors) ಸದ್ಯಕ್ಕೆ ಮಾರುಕಟ್ಟೆಯಿಂದ ದೂರ ಉಳಿಯುವಂತೆ ಮಾಡಿದೆ.
ಇತ್ತೀಚೆಗಷ್ಟೇ ಅಮೆರಿಕದಲ್ಲಿ ಆರಂಭವಾದ ಬಿಟ್‌ಕಾಯಿನ್ ಸ್ಪಾಟ್ ಇಟಿಎಫ್‌ಗಳಿಂದ ಭಾರಿ ಪ್ರಮಾಣದಲ್ಲಿ ಹಣ ಹೊರಹೋಗುತ್ತಿದೆ (Outflows). ನಿರಂತರವಾಗಿ ಹೂಡಿಕೆದಾರರು ಇಟಿಎಫ್ ಫಂಡ್‌ಗಳನ್ನು ಮಾರಾಟ ಮಾಡುತ್ತಿರುವುದು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಒತ್ತಡವನ್ನು ತಂದಿದೆ.
ಇದನ್ನು ಓದಿ: ವಾಹನ ಕ್ಷೇತ್ರದಲ್ಲಿ ಚೀನಾವನ್ನು ಭಾರತ ಹೇಗೆ ಹಿಂದಿಕ್ಕಬಹುದು? ಸೀಕ್ರೆಟ್ ತಿಳಿಸಿದ ಟಾಟಾ ಮೋಟರ್ಸ್ನ ಶ್ವೆನ್ ಪಟುಶ್ಕಾ
ಬಿಟ್‌ಕಾಯಿನ್ ಬೆಲೆಗೆ ಇದ್ದ ಸಪೋರ್ಟ್ ಲೆವೆಲ್ಗೆ ಭಂಗಗೊಂಡಿದೆ. ತಜ್ಞರ ಪ್ರಕಾರ, ಬಿಟ್ಕಾಯಿನ್ನ ಸಪೋರ್ಟ್ ಲೆವೆಲ್ ಎಂದು ಪರಿಗಣಿಸಲಾಗಿದ್ದ $60,000 ಮಟ್ಟವನ್ನು ಕಳೆದುಕೊಂಡಿರುವುದು ತಾಂತ್ರಿಕವಾಗಿ ಮಾರುಕಟ್ಟೆ ಮತ್ತಷ್ಟು ದುರ್ಬಲಗೊಳ್ಳುವ ಸಂಕೇತವಾಗಿದೆ. ಇದು ಮುಂದಿನ ದಿನಗಳಲ್ಲಿ $56,000 ಅಥವಾ $52,000 ಮಟ್ಟಕ್ಕೆ ಕುಸಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಿಟ್‌ಕಾಯಿನ್ ಕುಸಿತದ ನೇರ ಪರಿಣಾಮ ಇತರೆ ಸಣ್ಣ ಕ್ರಿಪ್ಟೋಕರೆನ್ಸಿಗಳ ಮೇಲೆ ಬೀರಿದ್ದು, ಅವು ಶೇಕಡಾ 10 ರಿಂದ 20 ರಷ್ಟು ಮೌಲ್ಯ ಕಳೆದುಕೊಂಡಿವೆ.
(ಗಮನಿಸಿ: ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಅತ್ಯಂತ ಅಸ್ಥಿರತೆಯಿಂದ (Highly Volatile) ಕೂಡಿದ್ದಾಗಿದೆ. ಇಲ್ಲಿನ ಬೆಲೆ ಏರಿಳಿತಗಳು ಯಾವುದೇ ಮುನ್ಸೂಚನೆ ಇಲ್ಲದೆ ಸಂಭವಿಸುವುದರಿಂದ, ಹೂಡಿಕೆದಾರರು ಸಂಪೂರ್ಣ ಸಂಶೋಧನೆ ಮತ್ತು ತಜ್ಞರ ಸಲಹೆ ಪಡೆದ ನಂತರವೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ