BSNL Profit: ಅಚ್ಚರಿ ಹುಟ್ಟಿಸಿದ ಬಿಎಸ್ಸೆನ್ನೆಲ್; ಸತತ 2ನೇ ಬಾರಿ ಲಾಭ; 18 ವರ್ಷದಲ್ಲಿ ಇಂಥದ್ದು ಇದೇ ಮೊದಲು
BSNL turns profit in Q3 and Q4 of 2024-25: ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆ ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ 280 ಕೋಟಿ ರೂ ನಿವ್ವಳ ಲಾಭ ಕಂಡಿದೆ. 2024ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲೂ 261 ಕೋಟಿ ರೂ ಲಾಭ ಮಾಡಿತ್ತು. ಸತತ ಎರಡು ತ್ರೈಮಾಸಿಕ ಅವಧಿ ಲಾಭ ಮಾಡಿರುವುದು ಕಳೆದ 17-18 ವರ್ಷದಲ್ಲಿ ಇದೇ ಮೊದಲ ಸಲ.

ನವದೆಹಲಿ, ಮೇ 30: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬಿಳಿಯಾನೆಗಳು ಎನ್ನುವಂತಹ ಭಾವನೆ ಸುಳ್ಳೆಂದು ಸಾಬೀತು ಮಾಡುವ ಬಹಳಷ್ಟು ನಿದರ್ಶನಗಳು ಈಗ ಸಿಗುತ್ತವೆ. ಕೆಲವೇ ವರ್ಷಗಳ ಹಿಂದೆ ಬಿಎಸ್ಸೆನ್ನೆಲ್ (BSNL) ಗತ ಇತಿಹಾಸದ ಪುಟ ಸೇರಿತು ಎಂದು ಎಲ್ಲರೂ ಭಾವಿಸುತ್ತಿರುವಂತೆಯೇ ಈ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಹೊಸ ಉತ್ಸಾಹದಲ್ಲಿ ಕಂಬ್ಯಾಕ್ ಮಾಡಿದೆ. ಅಷ್ಟು ಮಾತ್ರವಲ್ಲ, ಸತತ ಎರಡನೇ ಕ್ವಾರ್ಟರ್ ಅದು ಲಾಭ ತೋರಿಸಿದೆ. ಇಂಥದ್ದು ಕಳೆದ 18 ವರ್ಷದಲ್ಲಿ ಇದೇ ಮೊದಲು ಎನ್ನಲಾಗಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಥವಾ ಬಿಎಸ್ಸೆನ್ನೆಲ್ ಸಂಸ್ಥೆ 2024-25ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ನಲ್ಲಿ (ಜನವರಿಯಿಂದ ಮಾರ್ಚ್) 280 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಅದಕ್ಕೂ ಹಿಂದಿನ ಕ್ವಾರ್ಟರ್ನಲ್ಲಿ 261 ಕೋಟಿ ರೂ ಲಾಭ ಕಂಡಿತ್ತು. ಸತತ ಎರಡು ಕ್ವಾರ್ಟರ್ನಲ್ಲಿ ಬಿಎಸ್ಎನ್ಎಲ್ ಲಾಭ ಕಂಡಿರುವುದು ಕಳೆದ 17 ವರ್ಷದಲ್ಲಿ ಇದೇ ಮೊದಲ ಸಲ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕಕ್ಕೆ ತಿರುಗುಬಾಣವಾಗ್ತಿದ್ಯಾ ಟ್ರೇಡ್ ವಾರ್?; ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಕುಸಿತ
ಈ ಎರಡು ಕ್ವಾರ್ಟರ್ಗಳಲ್ಲಿ ಲಾಭ ಕಂಡಿದ್ದರಿಂದ ವರ್ಷದ ಒಟ್ಟಾರೆ ನಷ್ಟದ ಭಾರ ತಗ್ಗಿದೆ. 2023-24ರಲ್ಲಿ ಬಿಎಸ್ಸೆನ್ನೆಲ್ 5,370 ಕೋಟಿ ರೂ ನಷ್ಟ ಅನುಭವಿಸಿತ್ತು. ಈಗ 2024-25ರಲ್ಲಿ ನಷ್ಟದ ಪ್ರಮಾಣ 2,247 ಕೋಟಿ ರೂಗೆ ಇಳಿದಿದೆ.
ಹತ್ತು ವರ್ಷದ ಹಿಂದೆ (2013-14) ಬಿಎಸ್ಸೆನ್ನೆಲ್ 14,979 ಕೋಟಿ ರೂ ನಷ್ಟ ಕಂಡಿತ್ತು. ಈಗ ಅದು ಲಾಭದ ಹಳಿಗೆ ಬಂದಿರುವ ದಟ್ಟ ಸೂಚನೆ ಇದೆ. ಈ ಲಾಭದ ಓಟ ಹೀಗೆ ಮುಂದುವರಿದಲ್ಲಿ 2025-26ರಲ್ಲಿ ಬಿಎಸ್ಸೆನ್ನೆಲ್ ಸಂಸ್ಥೆ ಪೂರ್ಣ ವಾರ್ಷಿಕ ಲಾಭ ತೋರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಜಾಗತಿಕ ಅನಿಶ್ಚಿತತೆ ಮಧ್ಯೆಯೂ ಭಾರತದ ಆರ್ಥಿಕತೆ ಅತ್ಯುತ್ತಮ ಬೆಳವಣಿಗೆ: ಆರ್ಬಿಐ ಅಂದಾಜು
ಬಿಎಸ್ಸೆನ್ನೆಲ್ ಕೊನೆಯ ಬಾರಿ ಲಾಭ ಕಂಡಿದ್ದು 2008ರಲ್ಲಿ
ಬಿಎಸ್ಸೆನ್ನೆಲ್ ಸಂಸ್ಥೆ ಕೊನೆಯ ಬಾರಿ ಲಾಭ ಕಂಡಿದ್ದು 2008-09ರಲ್ಲಿ. ಆ ಹಣಕಾಸು ವರ್ಷದಲ್ಲಿ 575 ಕೋಟಿ ರೂ ನಿವ್ವಳ ಲಾಭ ಪಡೆದಿತ್ತು. ಅದಕ್ಕೂ ಮುಂಚೆ ನಷ್ಟದ ಅರಿವೇ ಇಲ್ಲದಿದ್ದ ಈ ಸರ್ಕಾರಿ ಸಂಸ್ಥೆ 2009-10ರಲ್ಲಿ ಮೊದಲ ಬಾರಿಗೆ 1,823 ಕೋಟಿ ರೂ ನಷ್ಟ ಕಂಡಿತ್ತು. ಅದಾದ ಬಳಿಕ ಸತತ 15 ವರ್ಷಗಳಿಂದ ನಿರಂತರವಾಗಿ ನಷ್ಟ ಕಾಣುತ್ತಾ ಬಂದಿದೆ. ಈ ಹಣಕಾಸು ವರ್ಷದಲ್ಲಿ ಈ ಸೋಲಿನ ಸರಮಾಲೆ ಕತ್ತರಿಸಿಬೀಳುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ