Digital Rupee: ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ಇರುಪಾಯಿ ಬಳಕೆ: ಆರ್​ಬಿಐ ಆಲೋಚನೆ

|

Updated on: Feb 08, 2024 | 4:48 PM

Offline e-Rupee Transactions: ಆರ್​​ಬಿಐ ರೂಪಿಸಿರುವ ಸಿಬಿಡಿಸಿ ಅಥವಾ ಇರುಪೀ ಬಳಕೆ ಸಾಧ್ಯತೆಗಳನ್ನು ಅವಲೋಕಿಸಲಾಗುತ್ತಿದೆ. ಸದ್ಯ ಡಿಜಿಟಲ್ ಕರೆನ್ಸಿಯನ್ನು ಪ್ರಾಯೋಗಿಕವಾಗಿ ಮಾಡಲಾಗುತ್ತಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ವ್ಯಕ್ತಿಯಿಂದ ವರ್ತಕರಿಗೆ ವಹಿವಾಟು ಸಾಧ್ಯವಿದೆ. ಈಗ ಸರ್ಕಾರಿ ಯೋಜನೆಗಳಿಗೆ ಬಳಸಾಗುತ್ತಿರುವ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ವ್ಯವಸ್ಥೆಯಲ್ಲಿ ಸಿಬಿಡಿಸಿ ಅಳವಡಿಸುವ ಆಲೋಚನೆ ಆರ್​ಬಿಐನದ್ದಾಗಿದೆ.

Digital Rupee: ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ಇರುಪಾಯಿ ಬಳಕೆ: ಆರ್​ಬಿಐ ಆಲೋಚನೆ
ಇರುಪಾಯಿ
Follow us on

ನವದೆಹಲಿ, ಫೆಬ್ರುವರಿ 8: ಸರ್ಕಾರದ ವಿವಿಧ ಯೋಜನೆಗಳಿಗೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರ ಹಣ ಹಾಕುತ್ತದೆ. ಈಗ ಯೋಜನೆಯ ಹಣವನ್ನು ಇರುಪೀ ರೂಪದಲ್ಲಿ ಫಲಾನುಭವಿಗಳಿಗೆ ವರ್ಗಾಯಿಸುವ ಒಂದು ವ್ಯವಸ್ಥೆ ಬರುವ ಸಾಧ್ಯತೆ ಇದೆ. ಇರುಪಾಯಿ ಅಥವಾ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC- Central Bank Digital Currency) ಬಳಕೆಗೆ ಇನ್ನಷ್ಟು ಸಾಧ್ಯತೆಗಳನ್ನು ತರಲು ಆರ್​ಬಿಐ ಪ್ರಸ್ತಾಪಿಸಿದೆ. ಎಂಪಿಸಿ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಆರ್​ಬಿಐ ಈ ವಿಚಾರವನ್ನ ಮುಂದಿಟ್ಟಿದೆ. ಸದ್ಯ ಆಯ್ದ ಬ್ಯಾಂಕುಗಳು ಆಯ್ದ ಗ್ರಾಹಕರಿಗೆ ಡಿಜಿಟಲ್ ರುಪಾಯಿ ವ್ಯಾಲಟ್​​ಗಳನ್ನು ನೀಡಿದೆ. ಆ ವ್ಯಾಲಟ್ ಹೊಂದಿರುವ ವ್ಯಕ್ತಿಗಳ ಮಧ್ಯೆ ವಹಿವಾಟು ನಡೆಸಬಹುದು. ವ್ಯಕ್ತಿಯಿಂದ ವರ್ತಕರ ಮಧ್ಯೆ ವಹಿವಾಟು ನಡೆಸಬಹುದು. ಇದಿನ್ನೂ ಪ್ರಾಯೋಗಿಕ ಹಂತದಲ್ಲಿದೆ. ಈಗ ಯೂಸ್ ಕೇಸ್ ಅಥವಾ ಬಳಕೆಯ ನಿದರ್ಶನಗಳನ್ನು ಹೆಚ್ಚಿಸುವ ಇರಾದೆಯಲ್ಲಿ ಆರ್​ಬಿಐ ಇದೆ.

ಅಂದರೆ, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್, ಅಥವಾ ಡಿಬಿಟಿ ಸ್ಕೀಮ್ ಇತ್ಯಾದಿ ವ್ಯವಸ್ಥೆಗೆ ಇದನ್ನು ಅಳವಡಿಸುವುದೂ ಸೇರಿದಂತೆ ವಿವಿಧ ಮಾರ್ಗಗಳನ್ನು ಆರ್​​ಬಿಐ ಅವಲೋಕಿಸುತ್ತಿದೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬಿಸಿನೆಸ್ ಟ್ರಾವಲ್ ವೆಚ್ಚಕ್ಕೆ ಇರುಪಾಯಿ ಒದಗಿಸುವುದು ಇತ್ಯಾದಿ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ.

‘ಪ್ರಾಗ್ರಾಮಿಂಗ್ ಮತ್ತು ಆಫ್​ಲೈನ್ ಫೀಚರ್ ಬಳಸಿ ಹೆಚ್ಚಿನ ಬಳಕೆ ನಿದರ್ಶನಗಳನ್ನು ಅವಲೋಕಿಸುವ ಪ್ರಸ್ತಾಪ ಇದೆ. ಪ್ರಾಗ್ರಾಮಿಂಗ್ ಫೀಚರ್ ಮೂಲಕ ನಿರ್ದಿಷ್ಟ ಉದ್ದೇಶಗಳಿಗೆ ಹಣದ ಬಳಕೆ ಆಗುವಂತೆ ನೋಡಿಕೊಳ್ಳಬಹುದು. ಉದಾಹರಣೆಗೆ ಸರ್ಕಾರಿ ಏಜೆನ್ಸಿಗಳು ತಾವು ನೀಡಿದ ಪೇಮೆಂಟ್ ಆ ನಿರ್ದಿಷ್ಟ ಯೋಜನೆಗೆ ಬಳಕೆ ಆಗಿರುವುದನ್ನು ಖಚಿತಪಡಿಸಿಕೊಳ್ಳಬಹುದು’ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇದನ್ನೂ ಓದಿ: ಪೇಟಿಎಂ ವಿರುದ್ಧ ಕ್ರಮ; ಮುಂದಿನ ವಾರ ಎಲ್ಲದಕ್ಕೂ ಉತ್ತರ ಕೊಡಲಾಗುವುದು: ಆರ್​ಬಿಐ ಗವರ್ನರ್

ಇಂಟರ್ನೆಟ್ ಕನೆಕ್ಟಿವಿಟಿ ಕಡಿಮೆ ಇರುವ ಪ್ರದೇಶಗಳಲ್ಲಿ ಡಿಜಿಟಲ್ ಹಣದ ವಹಿವಾಟು ಸುಗಮವಾಗಿ ನಡೆಯಲು ಅನುವಾಗುವಂತೆ ಆಫ್​ಲೈನ್ ಫೀಚರ್ ಅನ್ನು ತರಲೂ ಆರ್​ಬಿಐ ಯೋಜಿಸಿದೆ.

ಏನಿದು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)?

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಎಂಬುದು ಎಲೆಕ್ಟ್ರಾನಿಕ್ ರೂಪದಲ್ಲಿರುವ ನಗದು ಹಣ. ನಗದು ಹಣದಂತೆಯೇ ಇದನ್ನು ಬಳಕೆ ಮಾಡಬಹುದು. ಕ್ರಿಪ್ಟೋಕರೆನ್ಸಿ ತಂತ್ರಜ್ಞಾನವನ್ನು ಬಳಸಿ ರೂಪಿಸಿರುವ ಇ-ಹಣ ಇದು. ವಿಶ್ವಾದ್ಯಂತ ಎಲ್ಲಾ ದೇಶಗಳೂ ತಮ್ಮದೇ ಸಿಬಿಡಿಸಿ ನಿರ್ಮಿಸುತ್ತಿವೆ. ಇರುಪಾಯಿಯು ಭಾರತದ ಸಿಬಿಡಿಸಿಯಾಗಿದೆ. ಕ್ರಿಪ್ಟೋ ಟೆಕ್ನಾಲಜಿ ಇರುವ ಇದು ಹಲವು ರೀತಿಯ ಬಳಕೆಯ ಸಾಧ್ಯತೆಗಳನ್ನು ನೀಡುತ್ತದೆ.

ಇದನ್ನೂ ಓದಿ: ಪ್ರೋಸಸಿಂಗ್ ಫೀ ಸೇರಿ ಎಲ್ಲಾ ಶುಲ್ಕಗಳೂ ಬಡ್ಡಿದರದಲ್ಲೇ ಒಳಗೊಳ್ಳಲಿ: ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ

ಸಿಬಿಡಿಸಿಯನ್ನು ಇಟ್ಟುಕೊಳ್ಳಲು ವ್ಯಕ್ತಿಗಳ ಬಳಿ ನಿರ್ದಿಷ್ಟ ವ್ಯಾಲಟ್ ಬೇಕಾಗುತ್ತದೆ. ಅದನ್ನು ಬ್ಯಾಂಕುಗಳು ಒದಗಿಸುತ್ತವೆ. ಇಂಟರ್ನೆಟ್ ಸಂಪರ್ಕ ಇಲ್ಲದ ಕಡೆ ಆಫ್​ಲೈನ್​ನಲ್ಲಿ ಬಳಸಲು ನಿಯರ್ ಫೀಲ್ಡ್ ಕಮ್ಯುನಿಕೇಶನ್ (ಎನ್​ಎಫ್​ಸಿ) ಟೆಕ್ನಾಲಜಿ ಬಳಸಬಹುದು. ವ್ಯಾಲಟ್​ನಿಂದ ವ್ಯಾಲಟ್​ಗೆ ನಡೆಯುವ ವಹಿವಾಟು ಬ್ಯಾಂಕುಗಳಲ್ಲಿ ರಿಜಿಸ್ಟರ್ ಆಗುವುದಿಲ್ಲ. ಹೀಗಾಗಿ, ನಗದು ಹಣದ ವಹಿವಾಟಿನಂತೆ ಇದನ್ನೂ ಕೂಡ ಗೌಪ್ಯವಾಗಿ ಇಟ್ಟುಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ