DA Hike Likely: ಡಿಎ ಹೆಚ್ಚಿಸಲಿರುವ ಕೇಂದ್ರ; 1 ಕೋಟಿಗೂ ಹೆಚ್ಚು ಮಂದಿಗೆ ಖುಷಿಯ ಸುದ್ದಿ
Central Government May Hike DA and DR: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಇನ್ನೆರಡು ವಾರದಲ್ಲಿ ಡಿಎ ಮತ್ತು ಡಿಆರ್ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಈಗ ಸದ್ಯ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 38ರಷ್ಟು ಡಿಎ ಕೊಡಲಾಗುತ್ತಿದೆ. ಇದು ಶೇ. 42ಕ್ಕೆ ಹೆಚ್ಚಬಹುದು.
ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಖುಷಿಯ ಸುದ್ದಿ ಬಂದಿದೆ. ಇನ್ನೆರಡು ವಾರದಲ್ಲಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ (DA and DR) ಅನ್ನು ಏರಿಸುವ ಸಾಧ್ಯತೆ ಇದೆ. ಬಹಳ ದಿನಗಳಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳು ತುಟ್ಟಿ ಭತ್ಯೆ ಏರಿಸಬೇಕೆಂದು ಒತ್ತಾಯಿಸುತ್ತಾ ಬಂದಿದ್ದರು. ಹೋಳಿ ಹಬ್ಬಕ್ಕೆ ಮುನ್ನ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮಹಾರಾಷ್ಟ್ರ ಟೈಮ್ಸ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಕೇಂದ್ರ ಸರ್ಕಾರದ ಸಂಪುಟ ಸಭೆ ಮಾರ್ಚ್ 1ರಂದು ನಡೆಯಲಿದೆ. ಆಗ ಡಿಯರ್ನೆಸ್ಟ್ ಅಲೋಯನ್ಸ್ ಹೆಚ್ಚಿಸುವ ನಿರ್ಧಾರಕ್ಕೆ ಅನುಮೋದನೆ ಪಡೆಯಬಹುದು. ಡಿಆರ್ ಹೆಚ್ಚಳಕ್ಕೂ ಸರ್ಕಾರ ನಿರ್ಧರಿಸಿದೆ.
ಡಿಎ ಎಂಬುದು ಸರ್ಕಾರಿ ಉದ್ಯೋಗಿಗಳಿಗೆ ನೀಡುವ ತುಟ್ಟಿಭತ್ಯೆ. ಡಿಆರ್ ಅಥವಾ ಡಿಯರ್ನೆಸ್ ರಿಲೀಫ್ ಎಂಬುದು ಪಿಂಚಣಿದಾರರಿಗೆ ನೀಡುವ ಸೌಲಭ್ಯ. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಇದನ್ನು ಹೆಚ್ಚಿಸುತ್ತದೆ. ಕಳೆದ ವರ್ಷ ಜನವರಿ ಮತ್ತು ಜುಲೈನಲ್ಲಿ ಡಿಎ ಮತ್ತು ಡಿಆರ್ ಹೆಚ್ಚಿಸಲಾಗಿತ್ತು. ಈ ವರ್ಷ ಜನವರಿಯಲ್ಲಿ ಡಿಎ ಹೆಚ್ಚಳ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಸರ್ಕಾರದಿಂದ ನಿರ್ಧಾರ ವಿಳಂಬಗೊಂಡಿದೆ. ಕೇಂದ್ರ ಉದ್ಯೋಗಿಗಳು ಕಳೆದ ತಿಂಗಳಿಂದಲೂ ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.
ಸದ್ಯ 2022 ಸೆಪ್ಟಂಬರ್ನಲ್ಲಿ ಕೇಂದ್ರ ಸರ್ಕಾರ ಡಿಎ ಅನ್ನು ಶೇ 4ರಷ್ಟು ಹೆಚ್ಚಿಸಿತ್ತು. ಇದೀಗ 48 ಲಕ್ಷ ಉದ್ಯೋಗಿಗಳಿಗೆ ಶೇ. 38ರಷ್ಟು ಡಿಎ ಸಿಗುತ್ತಿದೆ. ಈ ವರ್ಷವೂ ಶೇ. 4ರಷ್ಟು ಡಿಎ ಹೆಚ್ಚಾದರೆ ಒಟ್ಟು ಶೇ. 42ರಷ್ಟು ತುಟ್ಟಿಭತ್ಯೆ ಕೇಂದ್ರ ಉದ್ಯೋಗಿಗಳಿಗೆ ಸಿಗುವ ನಿರೀಕ್ಷೆ ಇದೆ. ತುಟ್ಟಿಭತ್ಯೆ ಹೆಚ್ಚಾದಾಗ ಸಂಬಳವೂ ಸಹಜವಾಗಿ ಹೆಚ್ಚಾಗುತ್ತದೆ. ಡಿಆರ್ ಹೆಚ್ಚಳವು ಪಿಂಚಣಿದಾರರಿಗೆ ಅನ್ವಯ ಆಗುತ್ತದೆ. ಕೇಂದ್ರ ಸರ್ಕಾರದಲ್ಲಿ 68 ಲಕ್ಷದಷ್ಟು ಪಿಂಚಣಿದಾರರಿದ್ದಾರೆ. ಅಂದರೆ ಕೇಂದ್ರ ಸರ್ಕಾರೀ ಉದ್ಯೋಗದಲ್ಲಿದ್ದು ನಿವೃತ್ತರಾದವರು 68 ಲಕ್ಷ ಮಂದಿ ಇದ್ದು, ಅವರಿಗೆ ಡಿಆರ್ ಹೆಚ್ಚಳ ಲಾಭವಾಗಲಿದೆ.
ಇದನ್ನೂ ಓದಿ: Sanitary Pads: ಜನೌಷಧಿ ಮಳಿಗೆಗಳಲ್ಲಿ ಇದೂವರೆಗೆ ಮಾರಾಟವಾದ ಸ್ಯಾನಿಟರಿ ಪ್ಯಾಡ್ ಎಷ್ಟು?
ಸದ್ಯ ಕೇಂದ್ರದವರಿಗೆ 7ನೇ ವೇತನ ಆಯೋಗದ ಪ್ರಕಾರ ಸಂಬಳ ಸಿಗುತ್ತಿದೆ. ಇದೀಗ ಎಂಟನೇ ವೇತನ ಆಯೋಗವನ್ನು ಜಾರಿಗೆ ತರಬಹುದು ಎಂಬಂತಹ ಸುದ್ದಿ ಇದೆ. ಆದರೆ, ಈ ಬಾರಿಯ ಬಜೆಟ್ನಲ್ಲಿ ಎಂಟನೇ ವೇತನ ಆಯೋಗದ ಪ್ರಸ್ತಾಪ ಆಗಿಲ್ಲ.
ಈಗ ಸರ್ಕಾರ ಒಂದು ವೇಳೆ ಡಿಎ ಮತ್ತು ಡಿಆರ್ ಹೆಚ್ಚಿಸಿದಲ್ಲಿ ಖಜಾನೆಗೆ ಹೊರೆಯಾದರೂ ಆರ್ಥಿಕತೆಗೆ ಪರೋಕ್ಷವಾಗಿ ಲಾಭವಾಗುತ್ತದೆ. ಜನರ ಕೈಗೆ ಹೆಚ್ಚು ಹಣ ಸಿಕ್ಕು ಆ ಮೂಲಕ ಮಾರುಕಟ್ಟೆ ವ್ಯಾಪಾರ ವಹಿವಾಟು ಹೆಚ್ಚುವ ಸಾಧ್ಯತೆ ಇದೆ.