AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment: ಮಿತಿ ಹೆಚ್ಚಿರುವ SCSS; ಮಾರ್ಚ್​ಗೆ ಮುಗಿಯಲಿರುವ PMVVY; ಹಿರಿಯ ನಾಗರಿಕರಿಗೆ ಅನುಕೂಲವೇನು?

Senior Citizens' Schemes: ಇದೇ ಮಾರ್ಚ್ 31ಕ್ಕೆ ಪಿಎಂವಿವಿವೈ ಯೋಜನೆ ಅಂತ್ಯಗೊಳ್ಳುತ್ತಿದೆ. ಎಸ್​ಸಿಎಸ್​ಎಸ್ ಯೋಜನೆಯ ಮಿತಿಯನ್ನು 30 ಲಕ್ಷಕ್ಕೆ ಏರಿಸಲಾಗಿದೆ. ಅಂಚೆ ಕಚೇರಿ ಉಳಿತಾಯ ಯೋಜನೆಯ ಹೂಡಿಕೆ ಮಿತಿಯೂ ಹೆಚ್ಚಿದೆ. ಇವು ಹಿರಿಯ ನಾಗರಿಕರಿಗೆಂದು ಮಾಡಿರುವ ಸ್ಕೀಮ್​ಗಳು.

Investment: ಮಿತಿ ಹೆಚ್ಚಿರುವ SCSS; ಮಾರ್ಚ್​ಗೆ ಮುಗಿಯಲಿರುವ PMVVY; ಹಿರಿಯ ನಾಗರಿಕರಿಗೆ ಅನುಕೂಲವೇನು?
ಹಿರಿಯ ನಾಗರಿಕರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 22, 2023 | 10:18 AM

Share

ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ಹಣಕಾಸು ಸಂಸ್ಥೆಗಳಲ್ಲಿ ಅತಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಸರ್ಕಾರಗಳೂ ವಯೋವೃದ್ಧರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು (Schemes for Senior Citizens) ಜಾರಿಗೆ ತಂದಿದೆ. ಹಿರಿಯ ನಾಗರಿಕರಿಗೆಂದೇ ಮಾಡಲಾದ ಕೆಲ ಹೂಡಿಕೆ ಯೋಜನೆಗಳನ್ನು ಸರ್ಕಾರ ನಡೆಸುತ್ತಿದೆ. ಈ ಬಜೆಟ್​ನಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS- Senior Citizen Saving Scheme) ಹೂಡಿಕೆ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಏರಿಸಿದೆ. ಜೊತೆಗೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ (POMIS) ಹೂಡಿಕೆ ಮಿತಿಯನ್ನು 9 ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಈ ಎರಡು ಸ್ಕೀಮ್​ಗಳು ಹೂಡಿಕೆಗೆ ಉತ್ತಮ ಬಡ್ಡಿ ದರ ಕೊಡುತ್ತವೆ. ಹಿರಿಯ ನಾಗರಿಕರೊಬ್ಬರು ಈ ಎರಡು ಯೋಜನೆಗಳಲ್ಲಿ ಒಟ್ಟು 39 ಲಕ್ಷ ರೂ ಹೂಡಿಕೆ ಮಾಡಲು ಸಾಧ್ಯ.

ಇದೇ ವೇಳೆ, ಪಿಎಂ ವಯ ವಂದನ ಯೋಜನೆ (ಪಿಎಂವಿವಿವೈ) ಎಂಬ ಪೆನ್ಷನ್ ಸ್ಕೀಮ್ ಇದೇ ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತದೆ. ಏಪ್ರಿಲ್ 1ರಿಂದ ಅದು ಅಲಭ್ಯವಿರಬಹುದು. ಇದರಲ್ಲಿ ಹೂಡಿಕೆ ಮಿತಿ 15 ಲಕ್ಷ ರೂ ವರೆಗೂ ಇದೆ. ಪಿಎಂವಿವಿವೈ ಯೋಜನೆಯಲ್ಲಿನ ಹೂಡಿಕೆಗೆ ವಾರ್ಷಿಕವಾಗಿ ಶೇ. 7.4ರಷ್ಟು ಬಡ್ಡಿ ಕೊಡಲಾಗುತ್ತದೆ. ಈ ಸ್ಕೀಮ್ ಮುಂದುವರಿಯುತ್ತದೋ ಇಲ್ಲವೋ ಎಂಬುದು ಸ್ಪಷ್ಟ ಇಲ್ಲವಾದ್ದರಿಂದ ಹಿರಿಯ ನಾಗರಿಕರು ತಮ್ಮ ಬಳಿ ಹೆಚ್ಚು ಹಣ ಇದ್ದ ಪಕ್ಷದಲ್ಲಿ ಪಿಎಂವಿವಿವೈ ಸ್ಕೀಮ್​ನಲ್ಲಿ ಹಣ ತೊಡಗಿಸಿಕೊಳ್ಳಬಹುದು. ಇದು 10 ವರ್ಷಗಳ ಅವಧಿಯ ಸ್ಕೀಮ್ ಆಗಿದೆ.

ಇನ್ನು, ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆಯಲ್ಲಿ ಹೂಡಿಕೆಗೆ ವಾರ್ಷಿಕವಾಗಿ ಶೇ. 8ರಷ್ಟು ಬಡ್ಡಿ ಸಿಗುತ್ತದೆ. ನೀವು 15 ಲಕ್ಷ ರೂ ಹೂಡಿಕೆ ಮಾಡಿದರೆ ವರ್ಷಕ್ಕೆ ಬಡ್ಡಿ ಮೂಲಕವೇ 1.2 ಲಕ್ಷ ರೂ ಬರುತ್ತದೆ. ಇದು ಐದು ವರ್ಷದ ಸ್ಕೀಮ್ ಆಗಿದೆ. ಒಂದು ವೇಳೆ ಈ ಯೋಜನೆಯ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದಲ್ಲಿ ಕೈಗೆ ಸಿಗುವ ಬಡ್ಡಿ ಮೊತ್ತವೂ ಹೆಚ್ಚುತ್ತದೆ.

ಇದನ್ನೂ ಓದಿ: DA Hike Likely: ಡಿಎ ಹೆಚ್ಚಿಸಲಿರುವ ಕೇಂದ್ರ; 1 ಕೋಟಿಗೂ ಹೆಚ್ಚು ಮಂದಿಗೆ ಖುಷಿಯ ಸುದ್ದಿ

ಎಸ್​ಸಿಎಸ್​ಎಸ್ ಯೋಜನೆಯ ಹೂಡಿಕೆ ಮಿತಿ ಏಪ್ರಿಲ್ 1ರಿಂದ 30 ಲಕ್ಷಕ್ಕೆ ಹೆಚ್ಚಾಗುತ್ತದೆ. ಈಗ 15 ಲಕ್ಷ ತೊಡಗಿಸಿಕೊಂಡು ಏಪ್ರಿಲ್ 1ರ ನಂತರ ಇನ್ನಷ್ಟು 15 ಲಕ್ಷ ರೂ ಹೂಡಿಕೆ ಮಾಡಲು ಸಾಧ್ಯ.

ಪಿಎಂಎಂಐಎಸ್ ಸ್ಕೀಮ್​ನಲ್ಲೂ ಉತ್ತಮ ಬಡ್ಡಿ ಸಿಗುತ್ತದೆ. ಇದರ ಜೊತೆಗೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವೂ ಇದೆ. ಈ ನಾಲ್ಕು ಸೇವಿಂಗ್ ಸ್ಕೀಮ್​ಗಳ ಮೇಲೆ ಹಿರಿಯ ನಾಗರಿಕರು ಒಂದು ಕೋಟಿ ರೂಗೂ ಹೆಚ್ಚು ಮೊತ್ತದಷ್ಟು ಹೂಡಿಕೆ ಮಾಡಲು ಸಾಧ್ಯ. ಒಂದು ಕೋಟಿ ರೂ ಹೂಡಿಕೆಗೆ ತಿಂಗಳಿಗೆ ಬಡ್ಡಿ ರೂಪದಲ್ಲೇ ಸುಮಾರು 70 ಸಾವಿರ ರೂನಷ್ಟು ರಿಟರ್ನ್ಸ್ ಬರುತ್ತಿರುತ್ತದೆ.

ಇಂಥ ಉಳಿತಾಯ ಯೋಜನೆಗಳು, ಸಾಲಪತ್ರಗಳು ಬಹಳ ಸುರಕ್ಷಿತ ಹೂಡಿಕೆ ಮಾರ್ಗಗಳಾಗಿವೆ. ಹಿರಿಯ ನಾಗರಿಕರಿಗೆ ಬ್ಯಾಂಕುಗಳ ಎಫ್​ಡಿಯಲ್ಲೂ ಒಳ್ಳೆಯ ಬಡ್ಡಿ ಸಿಗುತ್ತದೆ. ಕೆಲ ಬ್ಯಾಂಕುಗಳು ವೃದ್ಧರ ಎಫ್​ಡಿಗೆ ಶೇ. 9ರವರೆಗೆ ಬಡ್ಡಿ ಆಫರ್ ಮಾಡುತ್ತವೆ. ಅದನ್ನೂ ಹಿರಿಯ ನಾಗರಿಕರು ಬಳಕೆ ಮಾಡಬಹುದು. ಆದರೆ, ಸತತವಾಗಿ ಬೆಲೆ ಏರಿಕೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ವಾರ್ಷಿಕ ಶೇ. 8ರ ದರದಲ್ಲಿ ಹಣ ಬೆಳೆಯುವುದು ಸಾಕಾಗಲ್ಲ ಎಂದು ಅನಿಸಿದಲ್ಲಿ, ಮತ್ತು ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಪ್ರವೃತ್ತಿ ಇದ್ದಲ್ಲಿ ಷೇರುಪೇಟೆಯಲ್ಲಿ ಅದೃಷ್ಟಪರೀಕ್ಷೆ ಮಾಡಬಹುದು. ಅದು ಬಿಟ್ಟರೆ ರಿಯಲ್ ಎಸ್ಟೇಟ್​ನಲ್ಲಿ, ಅದರಲ್ಲೂ ಬೆಂಗಳೂರು, ಮೈಸೂರು, ತುಮಕೂರು ಸುತ್ತಮುತ್ತ ಭೂಮಿ ಖರೀದಿ ಮಾಡಿದರೆ ವಾರ್ಷಿಕವಾಗಿ ಶೇ. 12ಕ್ಕಿಂತ ಹೆಚ್ಚಿನ ದರದಲ್ಲಿ ಮೌಲ್ಯ ವೃದ್ಧಿ ಆಗುತ್ತಿರುತ್ತದೆ.

ಇದರ ಜೊತೆಗೆ ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಸರ್ಕಾರ ಮಾಸಿಕ 1 ಸಾವಿರ ರೂ ಸಹಾಯಧನ ಒದಗಿಸುತ್ತದೆ. ವಿಧವೆಯರಿಗೂ ಮಾಸಿಕ ಪಿಂಚಣಿ ಸಿಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Tue, 21 February 23