ಕೇಂದ್ರ ಸರ್ಕಾರದಿಂದ ಕಡಿಮೆ ಬಡ್ಡಿಗೆ ಗೃಹಸಾಲ; ಸೆಪ್ಟೆಂಬರ್ನಲ್ಲಿ ಹೊಸ ಸ್ಕೀಮ್ ಜಾರಿ ಸಾಧ್ಯತೆ
Home Loan Scheme: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಲಾದಂತೆ ಕಡಿಮೆ ಬಡ್ಡಿದರಕ್ಕೆ ಗೃಹ ಸಾಲ ಕೊಡಿಸುವ ಸ್ಕೀಮ್ ಅನ್ನು ಸರ್ಕಾರ ಸೆಪ್ಟೆಂಬರ್ನಲ್ಲಿ ಜಾರಿಗೊಳಿಸಬಹುದು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ನಗರದಲ್ಲಿ ಸ್ವಂತ ಮನೆ ಹೊಂದಿರದ ಮತ್ತು ಅನಧಿಕೃತ ಕಾಲೊನಿಗಳಲ್ಲಿ ವಾಸಿಸುತ್ತಿರುವ ಜನರು ಈ ಸಾಲದ ಸ್ಕೀಮ್ ಅನ್ನು ಪಡೆಯಬಹುದ ಎನ್ನಲಾಗಿದೆ.
ನವದೆಹಲಿ, ಆಗಸ್ಟ್ 31: ಕೇಂದ್ರ ಸರ್ಕಾರದ ಪ್ರಸ್ತಾವಿತ ಗೃಹಸಾಲ ಯೋಜನೆ (Home Loan scheme) ಸೆಪ್ಟೆಂಬರ್ ತಿಂಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರು ಈ ಯೋಜನೆಯ ರೂಪುರೇಖೆ (Modalities) ಅಂತಿಮಗೊಳಿಸಲಾಗುತ್ತಿರುವ ಸಂಗತಿಯನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.
‘ನಗರಗಳಲ್ಲಿ ಮನೆಗಳನ್ನು ಖರೀದಿಸಲು ಬಯಸುವ ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುವ ಈ ಸ್ಕೀಂ ಅನ್ನು ಸೆಪ್ಟೆಂಬರ್ನಲ್ಲಿ ಆರಂಭಿಸಲಾಗುವುದು,’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಷಿ ತಿಳಿಸಿದ್ದಾರೆ.
ಎರಡು ವಾರದ ಹಿಂದೆ, ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾತನಾಡುತ್ತಾ ನಗರವಾಸಿ ಮಧ್ಯಮವರ್ಗದ ಕುಟುಂಬಗಳ ಕನಸಿನ ಮನೆ ಸಾಕಾರಗೊಳಿಸುವ ಯೋಜನೆಯನ್ನು ಘೋಷಿಸಿದ್ದರು.
‘ಮಧ್ಯಮವರ್ಗದ ಕುಟುಂಬಗಳು ನಗರಗಳಲ್ಲಿ ತಮ್ಮದೇ ಸ್ವಂತ ಮನೆ ಹೊಂದುವ ಕನಸು ಕಾಣುತ್ತಾರೆ. ಅವರಿಗಾಗಿ ನಾವು ಯೋಜನೆಯೊಂದನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇವೆ.
‘ನಗರಗಳಲ್ಲಿ ಬಾಡಿಗೆ ಮನೆಯಲ್ಲಿರುವ, ಅನಧಿಕೃತ ಕಾಲೊನಿ ಮತ್ತು ಸ್ಲಂಗಳಲ್ಲಿರುವ ಕುಟುಂಬಗಳಿಗೆ ಸ್ವಂತ ಮನೆ ಪಡೆಯಲು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಕೊಡಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅಂದು ಹೇಳಿದ್ದರು.
ಇದನ್ನೂ ಓದಿ: ಪಿಎಲ್ಐ ಸ್ಕೀಮ್ ಅಡಿಯಲ್ಲಿ ಐಟಿ ಹಾರ್ಡ್ವೇರ್ ತಯಾರಿಕೆಗೆ 40 ಕಂಪನಿಗಳಿಂದ ಅರ್ಜಿ, 75 ಸಾವಿರ ಉದ್ಯೋಗಸೃಷ್ಟಿ ಸಾಧ್ಯತೆ
ಆದರೆ, ಈ ಸ್ಕೀಮ್ ಅಡಿಯಲ್ಲಿ ಎಷ್ಟು ಬಡ್ಡಿದರಕ್ಕೆ ಬ್ಯಾಂಕ್ ಸಾಲದ ವ್ಯವಸ್ಥೆ ಆಗುತ್ತದೆ ಎಂಬ ವಿವರ ಗೊತ್ತಾಗಿಲ್ಲ. ಬ್ಯಾಂಕ್ನ ಮಾಮೂಲಿಯ ಗೃಹಸಾಲ ದರಕ್ಕಿಂತ ತುಸು ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸ್ಕೀಮ್ ಬಗ್ಗೆ ಸದ್ಯ ಗೊತ್ತಾಗಿರುವ ಮಾಹಿತಿ ಪ್ರಕಾರ, ನಗರದಲ್ಲಿ ಸ್ವಂತ ಮನೆ ಹೊಂದಿರದ ಕುಟುಂಬಕ್ಕೆ ಮಾತ್ರ ಈ ಸೌಲಭ್ಯ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ