ನವದೆಹಲಿ, ಆಗಸ್ಟ್ 29: ಪುರುಷರಿಗೆ ಹೆಚ್ಚು ಸೀಮಿತವಾಗಿರುವ ಉದ್ಯೋಗಗಳಿಗೆ ಹೆಣ್ಮಕ್ಕಳನ್ನು ಅಣಿಗೊಳಿಸಲು ಸರ್ಕಾರ ಹೊಸ ಸ್ಕೀಮ್ ಆರಂಭಿಸಲು ಆಲೋಚಿಸುತ್ತಿದೆ ಎನ್ನುವಂತಹ ವರದಿ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಹಿಳೆಯರಿಗೆ ಅಸಾಂಪ್ರದಾಯಿಕವಾಗಿರುವ ಕೆಲಸಗಳಿಗೆ ಹೆಣ್ಮಕ್ಕಳಿಗೆ ಈ ಸ್ಕೀಮ್ ಮೂಲಕ ತರಬೇತಿ ಕೊಡಲಾಗುತ್ತದೆ. 14ರಿಂದ 18 ವರ್ಷ ವಯಸ್ಸಿನ ಹುಡುಗಿಯರಿಗೆ ಈ ತರಬೇತಿ ಸಿಗಲಿದೆ. ವರದಿ ಪ್ರಕಾರ ಮುಂದಿನ ಎರಡು ಅಥವಾ ಮೂರು ವಾರದೊಳಗೆ ಯೋಜನೆ ಪ್ರಯೋಗಾರ್ಥವಾಗಿ ಆರಂಭವಾಗಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಅನಿಲ್ ಮಲಿಕ್ ಹೇಳಿದ್ದಾರೆ.
ನಾನ್-ಟ್ರೆಡಿಶನಲ್ ಜಾಬ್ ಅಥವಾ ಅಸಾಂಪ್ರದಾಯಿಕ ಕೆಲಸ ಎನ್ನುವುದು ಒಂದು ಲಿಂಗ ವರ್ಗಕ್ಕೆ ಹೆಚ್ಚು ಸೀಮಿತವಾಗಿರುತ್ತದೆ. ಒಂದು ಕೆಲಸದಲ್ಲಿ ಒಂದು ಲಿಂಗ ವರ್ಗದ ಸಂಖ್ಯೆ ಶೇ. 25ಕ್ಕಿಂತ ಕಡಿಮೆ ಇದ್ದರೆ ಅದು ಆ ಲಿಂಗ ವರ್ಗಕ್ಕೆ ಅಸಾಂಪ್ರದಾಯಿಕ ಎನಿಸುತ್ತದೆ. ಉದಾಹರಣೆಗೆ, ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ಸಿವಿಲ್ ಎಂಜಿನಿಯರ್, ಮೇಸ್ತ್ರಿ, ಗಾರೆ ಕೆಲಸಗಾರ, ಮರಗೆಲಸ ಇತ್ಯಾದಿ ಬಹುತೇಕ ಕೆಲಸಗಳಲ್ಲಿ ಪುರುಷರೇ ಹೆಚ್ಚು. ಮಹಿಳೆಯರ ಪ್ರಮಾಣ ಶೇ. 25ಕ್ಕಿಂತ ಕಡಿಮೆಯೇ. ಹೀಗಾಗಿ ಇವು ಮಹಿಳೆಯರಿಗೆ ಅಸಾಂಪ್ರದಾಯಿಕ ಕೆಲಸವಾಗಿರುತ್ತದೆ.
ಇದನ್ನೂ ಓದಿ: ಹತ್ತು ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳ ಸ್ಥಾಪನೆಗೆ ಸಂಪುಟ ಅನುಮೋದನೆ
ಹಾಗೆಯೇ, ಬುಟ್ಟಿ ಹೆಣೆಯುವುದು, ಡಯೆಟಿಶಿಯನ್, ಗೈನೆಕಾಲಜಿಸ್ಟ್, ಪ್ರೀಸ್ಕೂಲ್ ಟೀಚರ್ ಇತ್ಯಾದಿ ಕೆಲಸಗಳು ಪುರುಷರಿಗೆ ಅಸಾಂಪ್ರದಾಯಿಕ ಎನಿಸುತ್ತವೆ.
ಮಹಿಳೆಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಉದ್ಯೋಗಗಳನ್ನು ಹೊಂದುವಂತಾಗಲು ಕೇಂದ್ರ ಸರ್ಕಾರ ಕಸರತ್ತು ನಡೆಸುತ್ತಿದೆ. ಅಂತೆಯೇ, ಇನ್ನೆರಡು ಮೂರು ವಾರದಲ್ಲಿ ಹೊರತರಲಿರುವ ಈ ಸ್ಕೀಮ್ ಅನ್ನು ಪ್ರಾಯೋಗಿಕ ಹಂತದಲ್ಲಿ ದೇಶಾದ್ಯಂತ 27 ಜಿಲ್ಲೆಗಳಲ್ಲಿ ಆರಂಭಿಸಬಹುದು. ಅದು ಯಶಸ್ವಿಯಾದಲ್ಲಿ 218 ಜಿಲ್ಲೆಗಳಿಗೆ ಈ ಸ್ಕೀಮ್ ವಿಸ್ತರಿಸುವುದು ಸರ್ಕಾರದ ಉದ್ದೇಶ.
27 ಜಿಲ್ಲೆಗಳಲ್ಲಿನ 14ರಿಂದ 18 ವರ್ಷ ವಯೋಮಾನದ ಹದಿಹರೆಯದ ಬಾಲಕಿಯರಿಗೆ ಅಸಾಂಪ್ರದಾಯಿಕ ಕೆಲಸಗಳಿಗೆ ತರಬೇತಿ ಕೊಡಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ದಿಮೆದಾರಿಕೆ ಸಚಿವಾಲಯದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿಹಾಕಿರುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಜನ್ ಧನ್ ಯೋಜನೆಗೆ 10 ವರ್ಷ; ಎಕ್ಸ್ನಲ್ಲಿ ಪ್ರಧಾನಿ ಶ್ಲಾಘನೆ; ಪಿಎಂಜೆಡಿವೈ ಸಾಧನೆ, ಪ್ರಯೋಜನಗಳೇನು?
ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನಾ ಸಂಸ್ಥೆಯ ಮೂಲಕ ಜನ್ ಶಿಕ್ಷಣ್ ಸಂಸ್ಥಾನ್ ಮೊದಲಾದವರಿಗೆ ತರಬೇತುದಾರರನ್ನು ಅಣಿಗೊಳಿಸಲಾಗುತ್ತದೆ ಎನ್ನುವ ಮಾಹಿತಿ ಬಂದಿದೆ. ಒಟ್ಟಾರೆ, ಮಹಿಳೆಯರನ್ನು ಉದ್ಯೋಗ ವಲಯಕ್ಕೆ ಕರೆತರಲು ಪ್ರೇರೇಪಿಸುವ ದೊಡ್ಡ ಗುರಿಯಲ್ಲಿ ಇದು ಒಂದು ಹೆಜ್ಜೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ