ಜನ್ ಧನ್ ಯೋಜನೆಗೆ 10 ವರ್ಷ; ಎಕ್ಸ್ನಲ್ಲಿ ಪ್ರಧಾನಿ ಶ್ಲಾಘನೆ; ಪಿಎಂಜೆಡಿವೈ ಸಾಧನೆ, ಪ್ರಯೋಜನಗಳೇನು?
PM Jan Dhan Yojana highlights: ಇಂದು ಆಗಸ್ಟ್ 28ರಂದು ಪ್ರಧಾನಮಂತ್ರಿ ಜನ್ ಧನ್ ಯೋಜನೆಗೆ 10 ವರ್ಷ ಆಗಿದೆ. ಪ್ರಧಾನಿ ಈ ಸಂದರ್ಭದಲ್ಲಿ ಯೋಜನೆಯ ಫಲಾನುಭವಿಗಳಿಗೆ ಅಭಿನಂದನೆ ಹೇಳಿದ್ದಾರೆ. ಈವರೆಗೆ 53 ಕೋಟಿಗೂ ಹೆಚ್ಚು ಜನರು ಈ ಸ್ಕೀಮ್ ಮೂಲಕ ಬ್ಯಾಂಕ್ ಖಾತೆ ತೆರೆದಿದ್ದಾರೆ. ಈ ಜನ್ ಧನ್ ಖಾತೆಯಲ್ಲಿ 2.3 ಲಕ್ಷ ಕೋಟಿ ರೂಗೂ ಹೆಚ್ಚು ಹಣದ ಠೇವಣಿ ಬಂದಿದೆ.
ನವದೆಹಲಿ, ಆಗಸ್ಟ್ 28: ಪ್ರಧಾನಿ ಜನ್ ಧನ್ ಯೋಜನೆ ಶುರುವಾಗಿ ಇವತ್ತಿಗೆ ಸರಿಯಾಗಿ 10 ವರ್ಷ ಆಗಿದೆ. 2014ರ ಆಗಸ್ಟ್ 28ರಂದು ಈ ಯೋಜನೆ ಆರಂಭಿಸಲಾಯಿತು. ಬ್ಯಾಂಕಿಂಗ್ ಪರಿಧಿಗೆ ಬಾರದೇ ಹೋಗಿದ್ದ 53 ಕೋಟಿಗೂ ಹೆಚ್ಚು ಜನರು ಈ ಹತ್ತು ವರ್ಷದಲ್ಲಿ ಪಿಎಂ ಜನ್ ಧನ್ ಯೋಜನೆ ಮೂಲಕ ಬ್ಯಾಂಕ್ ಖಾತೆ ತೆರೆದಿದ್ದಾರೆ. ಈ ಖಾತೆಗಳಲ್ಲಿ 2.3 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಹಣದ ಜಮೆ ಆಗಿದೆ. ಈ ಹತ್ತು ವರ್ಷದ ಯಶಸ್ವಿ ಪ್ರಯಾಣವನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿ, ಜನರನ್ನು ಅಭಿನಂದಿಸಿದ್ದಾರೆ.
‘ಜನ್ ಧನ್ ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವರು ಮತ್ತು ಫಲಾನುಭವಿಗಳು ಎಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಹೇಳಲು ಬಯಸುತ್ತೇನೆ. ಹಣಕಾಸು ಒಳಗೊಳ್ಳುವಿಕೆಗೆ ಉತ್ತೇಜಿಸಲು ಮತ್ತು ಮಹಿಳೆಯರು, ಯುವಜನರು, ನಿರ್ಲಕ್ಷಿತ ಸಮುದಾಯಗಳಿಗೆ ಸೇರಿದ ಕೋಟ್ಯಂತರ ಜನರಿಗೆ ಆತ್ಮವಿಶ್ವಾಸ ತರಲು ಜನ್ ಧನ್ ಯೋಜನೆ ಬಹಳ ಮುಖ್ಯ ಪಾತ್ರ ವಹಿಸಿದೆ’ ಎಂದು ಪ್ರಧಾನಿಗಳು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಪೋಸ್ಟ್ಗೆ ಪ್ರತಿಕ್ರಿಯಿಸಿ, ಪಿಎಂ ಜನ್ ಧನ್ ಯೋಜನೆಯ ಸಾಧನೆಯ ವಿವರ ನೀಡಿದ್ದಾರೆ. ಈ ಯೋಜನೆಯನ್ನು ಅವರು ಜನಾಂದೋಲನ ಎಂದು ಬಣ್ಣಿಸಿದ್ದಾರೆ. ಪಿಎಂ ಜನ್ ಧನ್ ಯೋಜನೆ ಅಡಿಯಲ್ಲಿ 53 ಕೋಟಿ ಬ್ಯಾಂಕ್ ಅಕೌಂಟ್ಗಳು ತೆರೆದಿರುವುದನ್ನು ಮತ್ತು ಆ ಖಾತೆಗಳಲ್ಲಿ 2.3 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಹಣ ಠೇವಣಿ ಆಗಿರುವುದನ್ನು ಅವರು ತಿಳಿಸಿದ್ದಾರೆ.
A progressive step was taken on this day 10 years ago for financial inclusion. PM Modi launched this initiative to ensure crores of our people who didn’t benefit from formal coverage of financial services are brought in to benefit. Over 53 crore accounts with over ₹ 2.3 lakh… https://t.co/jhS2Tmm34I
— Nirmala Sitharaman (@nsitharaman) August 28, 2024
ಇದನ್ನೂ ಓದಿ: ಎಂಟು ಸಿಬ್ಬಂದಿ ಇರುವ ಕಂಪನಿ ಐಪಿಒನಲ್ಲಿ ಕೇಳಿದ್ದು 12 ಕೋಟಿ ರೂ, ಜನರು ಕೊಡಲು ಮುಂದಾಗಿದ್ದು 4,800 ಕೋಟಿ ರೂ; ಇದೇನು ಕಥೆ..!
ಏನಿದು ಪಿಎಂ ಜನ್ ಧನ್ ಯೋಜನೆ?
- ಬ್ಯಾಂಕ್ ಖಾತೆ ಹೊಂದಿಲ್ಲದ ಜನರಿಗೆ ಸೇವಿಂಗ್ಸ್ ಬ್ಯಾಂಕ್ ಖಾತೆ ತೆರೆಯುವ ಅವಕಾಶ
- ಜನ್ ಧನ್ ಖಾತೆಯನ್ನು ಯಾವುದೇ ಬ್ಯಾಂಕ್ನಲ್ಲಾದರೂ ತೆರೆಯಬಹುದು
- ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಎಂಬುದು ಇರೋದಿಲ್ಲ. ಅಂದರೆ ಇದು ಝೀರೋ ಬ್ಯಾಲನ್ಸ್ ಅಕೌಂಟ್.
- ಜನ್ ಧನ್ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ಸಿಗುತ್ತದೆ
- ಎರಡು ಲಕ್ಷ ರೂ ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ.
- 10,000 ರೂವರೆಗೂ ಓವರ್ಡ್ರಾಫ್ಟ್ ಸೌಲಭ್ಯ ಇರುತ್ತದೆ.
- ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ಈ ಖಾತೆಗೆ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:31 am, Wed, 28 August 24