ಚೀನಾದ 2022ರ ಸೇನಾ ಬಜೆಟ್ ಭಾರತದ ಮೂರು ಪಟ್ಟು; ಶೇ 7.1ರಷ್ಟು ಹೆಚ್ಚಳವಾಗಿ 17.58 ಲಕ್ಷ ಕೋಟಿ ರೂಪಾಯಿಗೆ
ಚೀನಾ ದೇಶದ 2022ರ ಬಜೆಟ್ನಲ್ಲಿ ಸೇನೆಗಾಗಿ ಶೇ 7ರಷ್ಟು ಹೆಚ್ಚಿನ ಮೊತ್ತವನ್ನು ಮೀಸಲಿಡಲಾಗಿದ್ದು, ಅದು 230 ಬಿಲಿಯನ್ ಡಾಲರ್ಗೆ ಏರಿಕೆ ಆಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಚೀನಾ (China) ದೇಶದವು ಶನಿವಾರ ತನ್ನ ವಾರ್ಷಿಕ ರಕ್ಷಣಾ ಬಜೆಟ್ ಅನ್ನು ಶೇ 7.1ರಷ್ಟು ಹೆಚ್ಚಳ ಮಾಡಿದ್ದು, 23,000 ಕೋಟಿ ಅಮೆರಿಕನ್ ಡಾಲರ್ ಮೀಸಲಿಟ್ಟಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 17,57,786.50 ಕೋಟಿ (17.58 ಲಕ್ಷ ಕೋಟಿ) ಆಗುತ್ತದೆ. ಕಳೆದ ವರ್ಷ ಈ ಬಜೆಟ್ 20,900 ಕೋಟಿ ಅಮೆರಿಕನ್ ಡಾಲರ್ ಇತ್ತು. ಒಂದು ಹೋಲಿಕೆಗೆ ಅಂತ ಹೇಳುವುದಾದರೆ, ಭಾರತದ ರಕ್ಷಣಾ ಬಜೆಟ್‌ನ ಮೂರು ಪಟ್ಟು. ಚೀನೀ ಸರ್ಕಾರವು ಹಣಕಾಸು ವರ್ಷ 2022ಕ್ಕೆ ರಕ್ಷಣಾ ಬಜೆಟ್ 1.45 ಲಕ್ಷ ಯುವಾನ್ (23,000 ಕೋಟಿ ಯುಎಸ್ಡಿ) ಮೀಸಲಿಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 7.1ರಷ್ಟು ಹೆಚ್ಚಳ ಆಗುತ್ತದೆ. ದೇಶದ ಸಂಸತ್ ಆದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನಲ್ಲಿ (NPC) ಸಚಿವರಾದ ಲೀ ಕೆಕಿಯಂಗ್ ಮಂಡಿಸಿದ ಬಜೆಟ್ ಪ್ರಸ್ತಾವದ ಕರಡಿನಲ್ಲಿ ತಿಳಿಸಿದ್ದಾರೆ.
ಆಯಕಟ್ಟಿನ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ (ಚೀನಾ ಸೇನೆ) ಆಕ್ರಮಣಕಾರಿ ಧೋರಣೆ ಮಧ್ಯೆ ಚೀನಾದ ರಕ್ಷಣಾ ವೆಚ್ಚದಲ್ಲಿ ಹೆಚ್ಚಳವಾಗಿದೆ. ಎನ್ಪಿಸಿಗೆ ಪ್ರಸ್ತುತಪಡಿಸಿದ ತಮ್ಮ ವರದಿಯಲ್ಲಿ, ಪೀಪಲ್ಸ್ ಲಿಬರೇಷನ್ ಆರ್ಮಿ (PLA)ಯಿಂದ ಸಮಗ್ರ ಯುದ್ಧ ಸನ್ನದ್ಧತೆಯನ್ನು ತೀವ್ರವಾಗಿಸಲು ಲೀ ಕರೆ ನೀಡಿದ್ದಾರೆ. ದೇಶದ ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸಲು ಪಿಎಲ್‌ಎ ದೃಢವಾದ ಮತ್ತು ಹೊಂದಿಕೊಳ್ಳುವ ರೀತಿಯಲ್ಲಿ ಮಿಲಿಟರಿ ಹೋರಾಟಗಳನ್ನು ನಡೆಸುವ ಅಗತ್ಯವಿದೆ ಎಂದಿದ್ದಾರೆ. ಹೊಸ ವಿಮಾನವಾಹಕ ನೌಕೆಗಳು, ವಾಯುಪಡೆ ಮತ್ತು ಕ್ಷಿಪಣಿ ವ್ಯವಸ್ಥೆಗಳ ನಿರ್ಮಾಣ ಸೇರಿ ನೌಕಾಪಡೆಯ ಕ್ಷಿಪ್ರ ಆಧುನೀಕರಣದ ಹೆಚ್ಚಿನ ವೆಚ್ಚಕ್ಕೆ ಕಾರಣ ಆಗದ ಚೀನಾದ ರಕ್ಷಣಾ ಬಜೆಟ್, 2022ಕ್ಕೆ ಭಾರತದ ರಕ್ಷಣಾ ಬಜೆಟ್‌ನ 5.25 ಲಕ್ಷ ಕೋಟಿ ರೂಪಾಯಿಗಿಂತ ಮೂರು ಪಟ್ಟು ಹೆಚ್ಚು (ಸುಮಾರು USD 70 ಶತಕೋಟಿ) ಇದೆ.
ರಕ್ಷಣಾ ಬಜೆಟ್‌ನ ಹೊರತಾಗಿ ಚೀನಾ ಪ್ರತ್ಯೇಕ ಆಂತರಿಕ ಭದ್ರತಾ ಬಜೆಟ್ ಅನ್ನು ಹೊಂದಿದ್ದು, ಇದು ರಕ್ಷಣಾ ವೆಚ್ಚವನ್ನು ಮೀರಿಸುತ್ತದೆ. 2017ರಲ್ಲಿ ಹಿಂದಿನ 2.3 ಮಿಲಿಯನ್‌ನಿಂದ ಎರಡು ಮಿಲಿಯನ್‌ಗೆ ತನ್ನ ಸೈನ್ಯವನ್ನು ಕಡಿಮೆಗೊಳಿಸಿದ್ದರೂ ಚೀನಾವು ಅತಿದೊಡ್ಡ ಸೈನ್ಯವಾಗಿ ಮುಂದುವರಿದಿದೆ. ಅಮೆರಿಕದ ನಂತರ ರಕ್ಷಣಾ ಬಜೆಟ್ಗಾಗಿ 600 ಬಿಲಿಯನ್ ಯುಎಸ್‌ಡಿಗಿಂತ ಹೆಚ್ಚಿನದನ್ನು ಮೀಸಲಿಟ್ಟಿದೆ. ಕಳೆದ ವರ್ಷ ಚೀನಾದ ರಕ್ಷಣಾ ವೆಚ್ಚವು ಮೊದಲ ಬಾರಿಗೆ ಯುಎಸ್ಡಿ 200 ಶತಕೋಟಿ ದಾಟಿತು. 2021 ರಲ್ಲಿ ರಕ್ಷಣಾ ಬಜೆಟ್ ಶೇ 6.8 ಹೆಚ್ಚಳವಾಗಿ 209 ಶತಕೋಟಿ ಯುಎಸ್ಡಿಗೆ ಏರಿತು. 2012ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಚೀನಾದ ಮಿಲಿಟರಿಯ ಸರ್ವತೋಮುಖ ಅಭಿವೃದ್ಧಿಯು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಗಮನದ ಕೇಂದ್ರಬಿಂದು ಆಗಿದ್ದರಿಂದ ರಕ್ಷಣಾ ವೆಚ್ಚವು ವರ್ಷಗಳಲ್ಲಿ ಹೆಚ್ಚಾಯಿತು.
ಸೇನೆ ಮತ್ತು ಅಧ್ಯಕ್ಷ ಸ್ಥಾನದ ಹೊರತಾಗಿ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ಮುಖ್ಯಸ್ಥರಾಗಿರುವ ಕ್ಸಿ ಅವರಿಗೆ 68 ವರ್ಷ ವಯಸ್ಸು. ತಮ್ಮ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರವೂ ಅವರು ತಮಗೂ ಮುಂಚೆ ಅಧಿಕಾರದಲ್ಲಿ ಇದ್ದವರಿಗಿಂತ ಭಿನ್ನವಾಗಿ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧರಾಗಿದ್ದಾರೆ. ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ಅವರಂತೆ “ಕೋರ್ ಲೀಡರ್” ಎಂಬ ಬಿರುದು ನೀಡಲಾಗಿದೆ. ಸೇನೆಯ ಗಾತ್ರವನ್ನು ತಗ್ಗಿಸುವುದು ಮತ್ತು ನೌಕಾಪಡೆ ಹಾಗೂ ವಾಯುಪಡೆಯ ಪಾತ್ರವನ್ನು ಹೆಚ್ಚಿಸುವುದು ಸೇರಿದಂತೆ ಮಿಲಿಟರಿಯ ವ್ಯಾಪಕ ಸುಧಾರಣೆಗಳನ್ನು ಕ್ಸಿ ಅವರು ಕೈಗೊಂಡಿದ್ದು, ಆಫ್ರಿಕಾದ ಡಿಜಿಬೌಟಿಯಲ್ಲಿ ಮಿಲಿಟರಿ ನೆಲೆಗಳೊಂದಿಗೆ ಜಾಗತಿಕ ವಿಸ್ತರಣೆ ಮೇಲೆ ಬೀಜಿಂಗ್ ತನ್ನ ದೃಷ್ಟಿಯನ್ನು ಹೊಂದಿದೆ.
ಶ್ರೀಲಂಕಾದ ಹಂಬಂಟೋಟಾ ಬಂದರನ್ನು ಚೀನಾವು 99 ವರ್ಷಗಳ ಗುತ್ತಿಗೆಗೆ ತೆಗೆದುಕೊಂಡಿದೆ ಮತ್ತು ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನದ ಗ್ವದಾರ್ ಬಂದರನ್ನು ವಿಸ್ತರಿಸಿದೆ, ಆಧುನೀಕರಿಸಿದೆ. ಹಿಂದಿನ ವರದಿಗಳ ಪ್ರಕಾರ, ಅಲ್ಲಿ ಅದು ಪ್ರಮುಖ ನೌಕಾ ನೆಲೆಯನ್ನು ಯೋಜಿಸಿದೆ.
ಇದನ್ನೂ ಓದಿ: ಸೂಪರ್ ಸಾನಿಕ್ ಬಿಸಿನೆಸ್ ಜೆಟ್ ಹೇಗಿದೆ ಗೊತ್ತಾ? ಚೀನಾದ ಏರೋಸ್ಪೇಸ್ ಸಂಸ್ಥೆಯಿಂದ ಹೊಸ ಜೆಟ್ ಬಿಡುಗಡೆ