AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coal India: ಕೋಲ್ ಇಂಡಿಯಾ ಷೇರು ಶೇ 12ರಷ್ಟು ಏರಿಕೆ: ಮಿಡ್​ಕ್ಯಾಪ್​ನ ಟಾಪ್ 50 ಕಂಪನಿಗಳಲ್ಲಿ ಸ್ಥಾನ ಪಡೆದ ಸರ್ಕಾರಿ ಉದ್ಯಮ

ವಾಲ್ಯೂಮ್ ದೃಷ್ಟಿಯಿಂದ ಕೋಲ್ ಇಂಡಿಯಾ ಕಂಪನಿಯ ವಹಿವಾಟು ಹೂಡಿಕೆದಾರರ ಗಮನ ಸೆಳೆಯಿತು. ಕಳೆದ ಮೂರು ವಾರಗಳ ಅವಧಿಯಲ್ಲಿ ಕೋಲ್ ಇಂಡಿಯಾ ಷೇರು ಮೌಲ್ಯವು ಶೇ 31ರಷ್ಟು ಹೆಚ್ಚಾಗಿದೆ

Coal India: ಕೋಲ್ ಇಂಡಿಯಾ ಷೇರು ಶೇ 12ರಷ್ಟು ಏರಿಕೆ: ಮಿಡ್​ಕ್ಯಾಪ್​ನ ಟಾಪ್ 50 ಕಂಪನಿಗಳಲ್ಲಿ ಸ್ಥಾನ ಪಡೆದ ಸರ್ಕಾರಿ ಉದ್ಯಮ
ಕೋಲ್ ಇಂಡಿಯಾ ಲಿಮಿಟೆಡ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 29, 2021 | 8:44 PM

ಮುಂಬೈ: ಭಾರತದ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಕಂಪನಿ ಕೋಲ್ ಇಂಡಿಯಾ ಲಿಮಿಟೆಡ್ ಮಧ್ಯಮ ಗಾತ್ರದ ಬಂಡವಾಳವಿರುವ ಟಾಪ್-50 ಕಂಪನಿಗಳ ಪಟ್ಟಿಯಲ್ಲಿ ಮತ್ತೆ ಸ್ಥಾನ ಪಡೆದಿದೆ. ₹ 174.50 ಮೊತ್ತದಲ್ಲಿ ಬುಧವಾರ ದಿನದ ವಹಿವಾಟು ಆರಂಭಿಸಿದ ಕಂಪನಿ ಒಂದು ಹಂತದಲ್ಲಿ ₹ 194 ಮೌಲ್ಯ ಮುಟ್ಟಿತ್ತು. ₹ 185.70 ಮೊತ್ತದಲ್ಲಿ ದಿನದ ವಹಿವಾಟು ಮುಗಿಸಿತು. ವಾಲ್ಯೂಮ್ ದೃಷ್ಟಿಯಿಂದ ಕೋಲ್ ಇಂಡಿಯಾ ಕಂಪನಿಯ ವಹಿವಾಟು ಹೂಡಿಕೆದಾರರ ಗಮನ ಸೆಳೆಯಿತು. ಕಳೆದ ಮೂರು ವಾರಗಳ ಅವಧಿಯಲ್ಲಿ ಕೋಲ್ ಇಂಡಿಯಾ ಷೇರು ಮೌಲ್ಯವು ಶೇ 31ರಷ್ಟು ಹೆಚ್ಚಾಗಿದೆ.

ಷೇರು ಮೌಲ್ಯವು ತೀವ್ರಗತಿಯಲ್ಲಿ ಏರಿಕೆ ದಾಖಲಿಸಿದ್ದರಿಂದ ಕಂಪನಿಯ ಬಂಡವಾಳ ಗಾತ್ರವು ₹ 1 ಲಕ್ಷ ಕೋಟಿ ದಾಟಿತು. ಪ್ರಸ್ತುತ ಕೋಲ್ ಇಂಡಿಯಾದ ಒಟ್ಟು ಮಾರುಕಟ್ಟೆ ಬಂಡವಾಳದ ಮೌಲ್ಯ ₹ 1.18 ಲಕ್ಷ ಕೋಟಿ ಇದೆ. ಮಾರುಕಟ್ಟೆಯಲ್ಲಿ 42ನೇ ಅತಿದೊಡ್ಡ ಕಂಪನಿ ಎನಿಸಿಕೊಂಡಿದೆ. ಆಗಸ್ಟ್ 5, 2015ರಲ್ಲಿ ಕೋಲ್ ಇಂಡಿಯಾ ಕಂಪನಿಯ ಷೇರು ₹ 447 ಮುಟ್ಟಿ ದಾಖಲೆ ಬರೆದಿತ್ತು. ಇಂದು (ಸೆ.29) ಬೆಳಿಗ್ಗೆ 11.06ರಲ್ಲಿ ಕೋಲ್ ಇಂಡಿಯಾ ಷೇರುಗಳು ಶೇ 9ರಷ್ಟು ಏರಿಕೆ ಕಂಡು ₹ 190.25ರಲ್ಲಿ ವಹಿವಾಟು ನಡೆಸುತ್ತಿತ್ತು. ವಹಿವಾಟು ಪ್ರಮಾಣವು 6.6 ಕೋಟಿಗೂ ಹೆಚ್ಚಾಗಿತ್ತು. ಫ್ಯೂಚರ್ ಅಂಡ್ ಆಪ್ಷನ್ ವಿಭಾಗದಲ್ಲಿಯೂ ಕೋಲ್ ಇಂಡಿಯಾ ಕಂಪನಿ ವಹಿವಾಟು ನಡೆಸುತ್ತದೆ. ಅಲ್ಲಿ ಏರಿಕೆ ಅಥವಾ ಇಳಿಕೆಗೆ ಮಿತಿ (ಸರ್ಕ್ಯೂಟ್ ಲಿಮಿಟ್) ಇರುವುದಿಲ್ಲ.

ಭಾರತದ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ನಿಚ್ಚಳ ಮೇಲುಗೈ ಸಾಧಿಸಿದೆ. ಸದ್ಯದ ಭವಿಷ್ಯದಲ್ಲಿ ಈ ಸ್ಥಾನಚ್ಯುತಿಯಾಗುವ ಯಾವುದೇ ಸಾಧ್ಯತೆ ಇಲ್ಲ. ಕಲ್ಲಿದ್ದಲು ಗಣಿಯಲ್ಲಿ ಖಾಸಗಿ ಕಂಪನಿಗಳಿಗೆ ಭಾರತ ಸರ್ಕಾರವು ಅವಕಾಶ ನೀಡಿದ ನಂತರವೂ ಕೇಂದ್ರ ಸರ್ಕಾರದ ಕಂಪನಿಯ ಸ್ಥಿತಿಗತಿಗೆ ಯಾವುದೇ ಧಕ್ಕೆ ಒದಗಿಲ್ಲ. ಭಾರತಲ್ಲಿ ಇರುವ ಕಲ್ಲಿದ್ದಲು ಬೇಡಿಕೆಯ ಬಹುಪಾಲನ್ನು ಕೋಲ್ ಇಂಡಿಯಾ ಪೂರೈಸುತ್ತಿದೆ.

ಭಾರತದ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಆಧರಿತ ಘಟಕಗಳ ಕೊಡುಗೆ ಶೇ 55 ಇದೆ. ವಿದ್ಯುತ್ ಮತ್ತು ಉಕ್ಕು ಉತ್ಪಾದನೆಗಾಗಿ ಕಲ್ಲಿದ್ದಲು ಬೇಡಿಕೆ ಹೆಚ್ಚಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕೋಲ್ ಇಂಡಿಯಾ ಕಂಪನಿಯು 23 ಗಣಿಗಳನ್ನು ಮುಚ್ಚಲು ಗುರುತಿಸಿಕೊಂಡಿದೆ. ಈ ಪೈಕಿ 12 ಗಣಿಗಳಲ್ಲಿ ಉತ್ಪಾದನೆ ಈಗಾಗಲೇ ಸ್ಥಗಿತಗೊಂಡಿದೆ. ಈ ಘಟಕಗಳನ್ನು ಮುಚ್ಚಲು ಆಗುವ ಖರ್ಚಿನ ಲೆಕ್ಕದ ನಂತರವೂ ಕಂಪನಿಗೆ ₹ 500 ಕೋಟಿ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

2023-24ರ ಹೊತ್ತಿಗೆ ಕೋಲ್ ಇಂಡಿಯಾ ಕಂಪನಿಯು 1 ಶತಕೋಟಿ ಟನ್ ಕಲ್ಲಿದ್ದಲು ಉತ್ಪಾದಿಸಲಿದೆ ಎಂದು ವಿಷನ್ 2024ರ ಕಲ್ಲಿದ್ದಲು ಕಾರ್ಯಸೂಚಿ ಹೇಳಿದೆ. ಈ ಗುರಿ ಮುಟ್ಟಲು ಅಗತ್ಯವಿರುವ ಸಿದ್ಧತೆಗಳನ್ನು ಕೋಲ್ ಇಂಡಿಯಾ ಈಗಾಗಲೇ ಮಾಡಿಕೊಂಡಿದ್ದು, ಹಲವು ಪ್ರಮುಖ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ. ಕಳೆದ ಸೆ.13ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕೋಲ್ ಇಂಡಿಯಾ ಕಂಪನಿಯು ಕಲ್ಲಿದ್ದಲು ಬೆಲೆ ಹೆಚ್ಚಿಸಬೇಕಾದ ಅನಿವಾರ್ಯತೆ ಬಗ್ಗೆ ನಿರ್ಣಯ ಅಂಗೀಕರಿಸಿದೆ. ಈ ಬಗ್ಗೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಶೀಘ್ರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

(Coal India Share Price soars 12 percent company re enters list of top 50 firms by mid cap)

ಇದನ್ನೂ ಓದಿ: ಕಲ್ಲಿದ್ದಲು ಕಳ್ಳ ಸಾಗಣೆ ಹಗರಣ: ಇಡಿ ಮುಂದೆ ಹಾಜರಾದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ

ಇದನ್ನೂ ಓದಿ: ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಅಮಿತಾಭ್​ ಬಚ್ಚನ್