ಕಾಗ್ನೈಜೆಂಟ್ ಲಂಚ ಪ್ರಕರಣ: ಎಲ್ ಅಂಡ್ ಟಿ ಮುಖ್ಯಸ್ಥ ಸುಬ್ರಮಣ್ಯನ್ ಮತ್ತಿತರ ಹೇಳಿಕೆ ಕೋರಿದ ಅಮೆರಿಕ
Cognizant bribery case updates: ಅಮೆರಿಕದ ಮೂಲದ ಐಟಿ ಸಂಸ್ಥೆ ಕಾಗ್ನೈಜೆಂಟ್ ಲಂಚ ನೀಡಿಕೆ ಪ್ರಕರಣದಲ್ಲಿ ಎಲ್ ಅಂಡ್ ಟಿ ಛೇರ್ಮನ್ ಎಸ್.ಎನ್. ಸುಬ್ರಮಣಿಯನ್ ಸೇರಿದಂತೆ ನಾಲ್ಕೈದು ಮಂದಿಯ ಹೇಳಿಕೆ ದಾಖಲಿಸಲು ಅಮೆರಿಕ ಪ್ರಯತ್ನಿಸಿದೆ. 2013ರಿಂದ 2015ರ ಅವಧಿಯಲ್ಲಿ ಪುಣೆ ಮತ್ತು ಚೆನ್ನೈನಲ್ಲಿ ಎಲ್ ಅಂಡ್ ಟಿಯಿಂದ ಕಾಗ್ನೈಜೆಂಟ್ಗೆ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಇದೆ.
ವಾಷಿಂಗ್ಟನ್, ಆಗಸ್ಟ್ 20: ಅಮೆರಿಕ ಮೂಲದ ಕಾಗ್ನೇಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ಭಾರತದಲ್ಲಿ ತನ್ನ ಕಟ್ಟಡ ನಿರ್ಮಾನಕ್ಕಾಗಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಪ್ರಕರಣದಲ್ಲಿ ಅಮೆರಿಕ ಸರ್ಕಾರ ಸಾಕ್ಷ್ಯ ಸಂಗ್ರಹ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಮಣಿಯನ್ ಹಾಗೂ ಇತರ ಮಂದಿಯಿಂದ ಅಮೆರಿಕ ಸರ್ಕಾರ ಹೇಳಿಕೆ ದಾಖಲಿಸಲು ಮುಂದಾಗಿದೆ ಎಂದು ದಿ ಮಿಂಟ್ ಪತ್ರಿಕೆಯಲ್ಲಿ ವರದಿಯಾಗಿದೆ. ಎಲ್ ಅಂಡ್ ಟಿ ಸಂಸ್ಥೆ ಮೂಲಕ ಕಾಗ್ನೈಜೆಂಟ್ ಲಂಚ ನೀಡಿದೆ ಎನ್ನುವ ಆರೋಪ ಇದೆ.
ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಮಣಿಯನ್, ಆ ಸಂಸ್ಥೆಯ ಇತರ ನಾಲ್ವರು ಉದ್ಯೋಗಿಗಳಾದ ರಮೇಶ್ ವಡಿವೇಲು, ಆದಿಮೂಲಂ ತ್ಯಾಗರಾಜನ್, ಬಾಲಾಜಿ ಸುಬ್ರಮಣಿಯನ್, ಟಿ ನಂದಕುಮಾರ್ ಅವರಿಗೆ ಹೇಳಿಕೆ ನೀಡುವಂತೆ ಅಮೆರಿಕದ ಸರ್ಕಾರ ಕೇಳಿದೆ. ಹಾಗೆಯೇ, ಕಾಗ್ನೈಜೆಂಟ್ ಟೆಕ್ನಾಲಜಿ ಸಲ್ಯೂಶನ್ಸ್ನ ಮಾಜಿ ಉದ್ಯೋಗಿಗಳಾದ ವೆಂಕಟೇಶನ್ ನಟರಾಜನ್ ಮತ್ತು ನಾಗಸುಬ್ರಮಣಿಯನ್ ಗೋಪಾಲಕೃಷ್ಣನ್ ಅವರಿಗೂ ಹೇಳಿಕೆ ಕೊಡುವಂತೆ ಕೇಳಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಸಖತ್ ಬಿಸಿನೆಸ್ ಕಾಣುತ್ತಿರುವ ಫಾಕ್ಸ್ಕಾನ್; 2024ರಲ್ಲಿ 83 ಸಾವಿರ ಕೋಟಿ ರೂ ವ್ಯವಹಾರ ಕಂಡ ತೈವಾನ್ ಕಂಪನಿ
ಕಾಗ್ನೈಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ಪುಣೆ ಮತ್ತು ಚೆನ್ನೈನಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ 2013ರಿಂದ 2015ರ ಅವಧಿಯಲ್ಲಿ ಭಾರತೀಯ ಅಧಿಕಾರಿಗಳು ಎಲ್ ಅಂಡ್ ಟಿ ಮುಖಾಂತರ ಲಂಚ ನೀಡಿತ್ತು ಎನ್ನಲಾಗಿದೆ. ಆ ಕಟ್ಟಡಗಳನ್ನು ಎಲ್ ಅಂಡ್ ಟಿ ಸಂಸ್ಥೆ ನಿರ್ಮಿಸಿತ್ತು. ಅಮೆರಿಕದ ಕಾನೂನು ಪ್ರಕಾರ, ಆ ದೇಶದ ಯಾವುದೇ ಪ್ರಜೆಗಳು ಅಥವಾ ಸಂಸ್ಥೆಗಳು ವಿದೇಶೀ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವಂತಿಲ್ಲ. ಈ ಸಂಬಂಧ ಅಮೆರಿಕದ ಕೋರ್ಟ್ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ.
ಭಾರತದಲ್ಲೂ ಎಲ್ ಅಂಡ್ ಟಿ ಮತ್ತು ಕಾಗ್ನೈಜೆಂಟ್ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪುಣೆ ಮತ್ತು ಚೆನ್ನೈನಲ್ಲಿ ತನಿಖೆ ನಡೆಯುತ್ತಿದೆ. ಲಂಚ ಸ್ವೀಕರಿಸಿದರೆನ್ನಲಾದ ಸರ್ಕಾರಿ ಅಧಿಕಾರಿಗಳನ್ನೂ ವಿಚಾರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ದೇಶಪ್ರೇಮಿಗಳಾದ್ರೆ ಸ್ಲಿಮ್ ಆಗಿ… ದೇಶದ ಆರ್ಥಿಕ ಆರೋಗ್ಯಕ್ಕೆ ಮಗ್ಗುಲ ಮುಳ್ಳಾಗಿದೆ ಜನರ ಬೊಜ್ಜು
2016ರಲ್ಲಿ ಕಾಗ್ನೈಜೆಂಟ್ ಕಂಪನಿ ಈ ಲಂಚದ ವಿಚಾರವನ್ನು ಬಹಿರಂಗಪಡಿಸಿತ್ತು. ಅದರ ಬೆನ್ನಲ್ಲೇ ಸಂಸ್ಥೆಯ ಸಿಇಒ ಗಾರ್ಡಾನ್ ಕೋಬರ್ನ್ ರಾಜೀನಾಮೆ ನೀಡಿದ್ದರು. ಈಗ ಗಾರ್ಡಾನ್ ಕೋಬರ್ನ್, ಸಂಸ್ಥೆಯ ಚೀಫ್ ಲೀಗಲ್ ಆಫೀಸರ್ ಆಗಿದ್ದ ಸ್ಟೀವನ್ ಶ್ವಾರ್ಟ್ಜ್ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ