ಭಾರತದಲ್ಲಿ ಸಖತ್ ಬಿಸಿನೆಸ್ ಕಾಣುತ್ತಿರುವ ಫಾಕ್ಸ್ಕಾನ್; 2024ರಲ್ಲಿ 83 ಸಾವಿರ ಕೋಟಿ ರೂ ವ್ಯವಹಾರ ಕಂಡ ತೈವಾನ್ ಕಂಪನಿ
Foxconn business in India: ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿ ಫಾಕ್ಸ್ಕಾನ್ ಭಾರತದಲ್ಲಿ ಉಪಸ್ಥಿತಿ ಗಟ್ಟಿಗೊಳ್ಳುತ್ತಿದೆ. ಭಾರತದಲ್ಲಿ ಅದರ ಬಿಸಿನೆಸ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2024ರಲ್ಲಿ ಅದರ ಒಟ್ಟು ಬಿಸಿನೆಸ್ 83,000 ಕೋಟಿ ರೂಗೆ ಏರಿದೆ.
ನವದೆಹಲಿ, ಆಗಸ್ಟ್ 19: ವಿಶ್ವದ ಅತಿದೊಡ್ಡ ಗುತ್ತಿಗೆ ಆಧಾರಿತ ಎಲೆಕ್ಟ್ರಾನಿಕ್ಸ್ ತಯಾರಿಕೆ ಕಂಪನಿ ಫಾಕ್ಸ್ಕಾನ್ ಭಾರತದಲ್ಲಿ ಭರ್ಜರಿ ಓಟ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಪಿಎಲ್ಐ ಸ್ಕೀಮ್ನ ದೆಸೆಯಿಂದ ಭಾರತದತ್ತ ಆಕರ್ಷಿತರಾಗಿ ಲಾಭ ಮಾಡುತ್ತಿರುವ ಕಂಪನಿಗಳಲ್ಲಿ ಫಾಕ್ಸ್ಕಾನ್ ಒಂದು. ತೈವಾನ್ ಮೂಲದ ಈ ಕಂಪನಿ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಉತ್ಪಾದನೆ ಹೆಚ್ಚಿಸುತ್ತಲೇ ಇದೆ. ಈ ವರ್ಷ ಅದರ ಬುಸಿನೆಸ್ 10 ಬಿಲಿಯನ್ ಡಾಲರ್ ಗಡಿ ದಾಟಿದೆ. ಅಂದರೆ ಎಂಟು ತಿಂಗಳಲ್ಲೇ 83,800 ಕೋಟಿ ರೂ ಪ್ರಮಾಣದ ಬಿಸಿನೆಸ್ ಮಾಡಿದೆ. ವರ್ಷಾಂತ್ಯಕ್ಕೆ ಈ ಸಂಖ್ಯೆ ಒಂದು ಲಕ್ಷ ಕೋಟಿ ರೂ ಗಡಿ ದಾಟಬಹುದು. ಜಾಗತಿಕವಾಗಿ ಫಾಕ್ಸ್ಕಾನ್ನ ಒಟ್ಟು ಬಿಸಿನೆಸ್ ಸುಮಾರು 200 ಬಿಲಿಯನ್ ಡಾಲರ್ನಷ್ಟಿದೆ. ಭಾರತದಲ್ಲಿ ಅದರ ಪಾಲು ಶೇ. 5 ಮಾತ್ರವೇ. ಆದರೆ, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ನಿರೀಕ್ಷೆ ಇದೆ.
ತೈವಾನ್ ಮೂಲದ ಫಾಕ್ಸ್ಕಾನ್ ಸಂಸ್ಥೆ ಆ್ಯಪಲ್ ಕಂಪನಿಯ ಐಫೋನ್ ಮೊದಲಾದ ಉತ್ಪನ್ನಗಳನ್ನು ತಯಾರಿಸುತ್ತದೆ. ಆ್ಯಪಲ್ ಮಾತ್ರವಲ್ಲ, ಬೇರೆ ಎಲೆಕ್ಟ್ರಾನಿಕ್ಸ್ ದೈತ್ಯರ ಮೊಬೈಲ್ ಫೋನ್, ಲ್ಯಾಪ್ಟಾಪ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಲು ಗುತ್ತಿಗೆ ಪಡೆಯುತ್ತದೆ. ಅದರ ಹೆಚ್ಚಿನ ಘಟಕಗಳು ಚೀನಾದಲ್ಲಿ ನೆಲಸಿದ್ದವು. ಕೋವಿಡ್ ಬಂದ ಬಳಿಕ ಚೀನಾದಲ್ಲಿ ಹೆಚ್ಚಿನ ಅವಧಿ ಲಾಕ್ ಡೌನ್ ಇತ್ತು. ವಿಶ್ವದ ಮ್ಯಾನುಫ್ಯಾಕ್ಚರಿಂಗ್ ಕೇಂದ್ರ ಎನಿಸಿರುವ ಚೀನಾದಲ್ಲಿ ಈ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಸರಬರಾಜು ಸರಪಳಿ ವ್ಯವಸ್ಥೆಗೆ ಅಪಾಯವಾಗಿತ್ತು. ಬಹಳಷ್ಟು ಉದ್ದಿಮೆಗಳಿಗೆ ತೊಂದರೆ ಆಯಿತು. ಚೀನಾ ಮೇಲಿನ ಅವಲಂಬನೆ ತಪ್ಪಿಸಲು ಹೆಚ್ಚಿನ ಅಮೆರಿಕನ್ ಕಂಪನಿಗಳು ಚೀನಾ ಪ್ಲಸ್ ಸ್ಟ್ರಾಟಿಜಿ ಇಟ್ಟುಕೊಂಡಿವೆ. ಚೀನಾದಲ್ಲಿ ಉತ್ಪಾದನೆ ಕಡಿಮೆ ಮಾಡಿ ಬೇರೆ ದೇಶಗಳಲ್ಲೂ ಉತ್ಪಾದನೆ ಹರಡುವುದು ಈ ಕಾರ್ಯತಂತ್ರ.
ಇದನ್ನೂ ಓದಿ: ಜನಸಂಖ್ಯೆಗಿಂತ ವೇಗವಾಗಿ ಉದ್ಯೋಗಸೃಷ್ಟಿ ಹೆಚ್ಚುತ್ತಿದೆ: ನೀತಿ ಆಯೋಗ್ ಸದಸ್ಯ ಅರವಿಂದ್ ವಿರ್ಮಾನಿ
ಈ ಚೀನಾ ಪ್ಲಸ್ ಕಾರ್ಯತಂತ್ರದ ಉಪಯೋಗವನ್ನು ಇಂಡೋನೇಷ್ಯಾ, ವಿಯೆಟ್ನಾಂ, ಫಿಲಿಪ್ಪೈನ್ಸ್, ಥಾಯ್ಲೆಂಡ್, ಮೊದಲಾದ ದೇಶಗಳು ಪಡೆಯುತ್ತಿವೆ. ಈ ಕಂಪನಿಗಳ ಪೈಪೋಟಿಯಲ್ಲೂ ಭಾರತ ಸಾಕಷ್ಟು ವಿದೇಶೀ ಹೂಡಿಕೆಗಳನ್ನು ಆಕರ್ಷಿಸುತ್ತಿದೆ.
ಫಾಕ್ಸ್ಕಾನ್ ತಮಿಳುನಾಡಿನಲ್ಲಿ ಐಫೋನ್ ಘಟಕ ಹೊಂದಿದೆ. ಈಗ ಕರ್ನಾಟಕ ಮತ್ತು ತೆಲಂಗಾಣದಲ್ಲೂ ಹೊಸ ಘಟಕಗಳನ್ನು ನಿರ್ಮಿಸಲು ಹೊರಟಿದೆ. ಐಫೋನ್ ಜೊತೆಗೆ ಗೂಗಲ್ ಪಿಕ್ಸೆಲ್ ಫೋನ್ಗಳನ್ನೂ ತಯಾರಿಸುವ ಗುತ್ತಿಗೆ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಹಳ ಬೇಡಿಕೆ ಇರುವ ಚಿಪ್ಗಳ ತಯಾರಿಕೆಯನ್ನೂ ಭಾರತದಲ್ಲಿ ಮಾಡಲಿದೆ.
ಇದನ್ನೂ ಓದಿ: ಭಾರತದಲ್ಲಿ ಶಾಲೆ ಫೀಸ್, ಆಸ್ಪತ್ರೆ ಬಿಲ್ ದುಬಾರಿ ಯಾಕೆ? ಜೋಹೋ ಸಿಇಒ ಬಿಚ್ಚಿಟ್ಟಿದ್ದಾರೆ ಪ್ರಮುಖ ಕಾರಣ
ಫಾಕ್ಸ್ಕಾನ್ನ ಛೇರ್ಮನ್ ಯಂಗ್ ಲಿಯು ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಕೊಟ್ಟಿದೆ. ಭಾರತದಲ್ಲಿ ತನ್ನ ಉಪಸ್ಥಿತಿ ಹೆಚ್ಚಿಸಲು ಫಾಕ್ಸ್ಕಾನ್ ಬದ್ಧವಾಗಿದೆ. ಫಾಕ್ಸ್ಕಾನ್ ಜೊತೆಗೆ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಸಪ್ಲೈ ಚೈನ್ನ ಇತರ ಸರಬರಾಜುದಾರರೂ ಭಾರತದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿವೆ, ಸ್ಥಾಪಿಸುತ್ತಿವೆ. ಹೀಗಾಗಿ, ಫಾಕ್ಸ್ಕಾನ್ನಂತಹ ಕಂಪನಿಯ ಉಪಸ್ಥಿತಿಯು ಭಾರತದ ಆರ್ಥಿಕತೆಯ ಓಟಕ್ಕೆ ಹೆಚ್ಚು ಪುಷ್ಟಿ ಕೊಡಬಲ್ಲುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ