ಜನಸಂಖ್ಯೆಗಿಂತ ವೇಗವಾಗಿ ಉದ್ಯೋಗಸೃಷ್ಟಿ ಹೆಚ್ಚುತ್ತಿದೆ: ನೀತಿ ಆಯೋಗ್ ಸದಸ್ಯ ಅರವಿಂದ್ ವಿರ್ಮಾನಿ

NITI Aayog member Arvind Virmani analyses: ನೀತಿ ಆಯೋಗ್ ಸದಸ್ಯ ಅರವಿಂದ್ ವಿರ್ಮಾನಿ ಅವರು ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆಗಿಂತ ಹೆಚ್ಚು ವೇಗದಲ್ಲಿ ಉದ್ಯೋಗಸೃಷ್ಟಿಯಾಗುತ್ತಿದೆ ಎಂದಿದ್ದಾರೆ. ಕೆಳ ಮಧ್ಯಮ ಆದಾಯದ ಶ್ರೇಣಿಯಲ್ಲಿರುವ ಭಾರತ 2051ರಲ್ಲಿ ಉನ್ನತ ಆದಾಯದ ದೇಶವಾಗಲಿದೆ ಎಂದಿದ್ದಾರೆ. ಭಾರತ ಜಗತ್ತಿನ ಐದನೇ ಅತಿದೊಡ್ಡ ಉತ್ಪಾದಕ ದೇಶವಾದರೂ ರಫ್ತಿನಲ್ಲಿ 15ನೇ ಸ್ಥಾನದಲ್ಲಿರಲು ವಿರ್ಮಾನಿ ಕಾರಣ ಬಿಚ್ಚಿಟ್ಟಿದ್ದಾರೆ.

ಜನಸಂಖ್ಯೆಗಿಂತ ವೇಗವಾಗಿ ಉದ್ಯೋಗಸೃಷ್ಟಿ ಹೆಚ್ಚುತ್ತಿದೆ: ನೀತಿ ಆಯೋಗ್ ಸದಸ್ಯ ಅರವಿಂದ್ ವಿರ್ಮಾನಿ
ಅರವಿಂದ್ ವಿರ್ಮಾನಿ
Follow us
|

Updated on: Aug 19, 2024 | 3:30 PM

ನವದೆಹಲಿ, ಆಗಸ್ಟ್ 19: ಭಾರತದಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿರುವ ಬಗ್ಗೆ ನೀತಿ ಆಯೋಗ್ ಸದಸ್ಯ ಅರವಿಂದ್ ವಿರ್ಮಾನಿ ಸಂತುಷ್ಟರಾಗಿದ್ದಾರೆ. ಜನಸಂಖ್ಯೆ ಹೆಚ್ಚುತ್ತಿರುವುದಕ್ಕಿಂತ ಹೆಚ್ಚು ವೇಗದಲ್ಲಿ ಉದ್ಯೋಗಗಳ ಸೃಷ್ಟಿಯಾಗುತ್ತಿದೆ. ಕಳೆದ ಆರು ವರ್ಷದಲ್ಲಿ ಬಿಸಿ ಕಾರ್ಮಿಕರ (Casual workers) ನೈಜ ವೇತನ ಹೆಚ್ಚಾಗಿದೆ ಎಂದಿದ್ದಾರೆ. ‘ಜನಸಂಖ್ಯೆ ಮತ್ತು ಕಾರ್ಮಿಕರ ಅನುಪಾತ ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚಳಕ್ಕಿಂತ ಹೆಚ್ಚು ವೇಗದಲ್ಲಿ ಉದ್ಯೋಗಗಳು ಸೇರ್ಪಡೆ ಆಗುತ್ತಿರುವ ಒಂದು ಟ್ರೆಂಡ್ ಸ್ಪಷ್ಟವಾಗಿ ಗೋಚರಿಸುತ್ತದೆ,’ ಎಂದು ಆರ್ಥಿಕ ತಜ್ಞರೂ ಆದ ವಿರ್ಮಾನಿ ಅವರು ಲೈವ್ ಮಿಂಟ್​ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

2051ರೊಳಗೆ ಭಾರತ ಉನ್ನತ ಆದಾಯದ ದೇಶವಾಗಲಿದೆ: ವಿರ್ಮಾನಿ

ಡೆಕನ್ ಹೆರಾಲ್ಡ್​ಗೆ ನೀಡಿದ ಸಂದರ್ಶನದಲ್ಲಿ ಅರವಿಂದ್ ವಿರ್ಮಾನಿ ಅವರು ಭಾರತ 2051ರೊಳಗೆ ಉನ್ನತ ಆದಾಯದ ದೇಶ (High income nation) ಆಗಲಿದೆ ಎಂದು ಅಂದಾಜು ಮಾಡಿದ್ದಾರೆ. ಶೇ. 5.4ರ ಸರಾಸರಿ ವಾರ್ಷಿಕ ಬೆಳವಣಿಗೆ ಕಂಡರೆ ಭಾರತ 2030ರೊಳಗೆ ಮೇಲ್ಮಧ್ಯಮ ಆದಾಯದ ಆರ್ಥಿಕತೆಯ ದೇಶವಾಗುತ್ತದೆ. 2051ರೊಳಗೆ ಉನ್ನತ ಆದಾಯದ ದೇಶವಾಗುತ್ತದೆ. ಶೇ. 5.7ರ ವಾರ್ಷಿಕ ದರದಲ್ಲಿ ಬೆಳವಣಿಗೆ ಆದರೆ 2047ರೊಳಗೆ ಗುರಿ ಮುಟ್ಟಬಹುದು. ಕನಿಷ್ಠ ಶೇ. 4.6ರ ದರದಲ್ಲಾದರೂ ಆರ್ಥಿಕ ವೃದ್ಧಿ ಕಾಣುವುದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ ಅರವಿಂದ್ ವಿರ್ಮಾನಿ.

ಇದನ್ನೂ ಓದಿ: ಭಾರತದಲ್ಲಿ ಶಾಲೆ ಫೀಸ್, ಆಸ್ಪತ್ರೆ ಬಿಲ್ ದುಬಾರಿ ಯಾಕೆ? ಜೋಹೋ ಸಿಇಒ ಬಿಚ್ಚಿಟ್ಟಿದ್ದಾರೆ ಪ್ರಮುಖ ಕಾರಣ

2007ರಿಂದ 2009ರವರೆಗೂ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ವಿರ್ಮಾನಿ, ಭಾರತದ ಆರ್ಥಿಕ ಬೆಳವಣಿಗೆಯ ಗತಿಗೆ ಇಂಡೋನೇಷ್ಯಾ ಮತ್ತು ರೊಮೇನಿಯಾದ ಉದಾಹರಣೆ ನೀಡಿದರು. ಅವರ ಪ್ರಕಾರ 2019ರಲ್ಲಿ ಇಂಡೋನೇಷ್ಯಾ ಕೆಳ ಮಧ್ಯಮ ಆದಾಯದಿಂದ ಮೇಲ್ಮಧ್ಯಮ ಆದಾಯದ ಶ್ರೇಣಿಗೆ ಹೋಯಿತು. ಆ ವರ್ಷ ರೊಮೇನಿಯಾ ದೇಶ ಮೇಲ್ಮಧ್ಯಮ ಆದಾಯದಿಂದ ಉನ್ನತ ಆದಾಯದ ಶ್ರೇಣಿಗೆ ಬಡ್ತಿ ಪಡೆಯಿತು. ಇಂಡೋನೇಷ್ಯಾದ ಪಿಪಿಪಿ ಜಿಡಿಪಿ ತಲಾದಾಯ 12,895 ಡಾಲರ್ ಇದೆ. ರೊಮೇನಿಯಾದ್ದು 36,800 ಡಾಲರ್ ಇದೆ. ಭಾರತದ ಜಿಡಿಪಿ ತಲಾದಾಯ (ಪಿಪಿಪಿ) 9,172 ಡಾಲರ್ ಇದೆ ಎಂದು ವಿರ್ಮಾನಿ ನೈಜ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

ಭಾರತ ದೊಡ್ಡ ಉತ್ಪಾದನಾ ದೇಶವಾದರೂ ರಫ್ತಿನಲ್ಲಿ ಹಿಂದುಳಿದಿರುವುದು ಯಾಕೆ?

ಚೀನಾ, ಅಮೆರಿಕ, ಜರ್ಮನಿ ಮತ್ತು ಜಪಾನ್ ಬಿಟ್ಟರೆ ಭಾರತವೇ ಅತಿದೊಡ್ಡ ಮ್ಯಾನುಫ್ಯಾಕ್ಚರಿಂಗ್ ದೇಶ. ಆದರೆ, ರಫ್ತಿನ ವಿಚಾರಕ್ಕೆ ಬಂದರೆ ಭಾರತ 15ನೇ ಕ್ರಮಾಂಕದಲ್ಲಿದೆ. ಉತ್ಪಾದನೆಗೂ ರಫ್ತಿಗೂ ದೊಡ್ಡ ಅಂತರ ಇದೆ. ಬೇರೆ ಪ್ರಮುಖ ಉತ್ಪಾದಕ ದೇಶಗಳನ್ನು ನೋಡಿ, ಈ ಅಂತರ ಹೆಚ್ಚೇನೂ ಇಲ್ಲ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು, ಸಾಂಸ್ಥಿಕ ಹೂಡಿಕೆದಾರರ (Anchor investors) ಕೊರತೆ ಮತ್ತು ಸರಬರಾಜು ಸರಪಳಿ ಸಮರ್ಪಕ ಇಲ್ಲದಿರುವುದು ಎಂದು ಅರವಿಂದ್ ವಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಒಳ್ಳೆಯ ಲಾಭ ತರಬಲ್ಲ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ?

ಭಾರತದಲ್ಲಿರುವ 28 ರಾಜ್ಯಗಳಲ್ಲಿ ನಾಲ್ಕೋ ಐದೋ ರಾಜ್ಯಗಳು ಮಾತ್ರ ಹೂಡಿಕೆಗಳನ್ನು ಆಕರ್ಷಿಸುತ್ತಿವೆ. ಉಳಿದ ರಾಜ್ಯಗಳ ಕಥೆ? ಸಾಂಸ್ಥಿಕ ಹೂಡಿಕೆದಾರರನ್ನನು ಆಕರ್ಷಿಸಲು ಮತ್ತು ಸಪ್ಲೈ ಚೈನ್ ಅನ್ನು ಬೆಳೆಸಲು ಈ ರಾಜ್ಯಗಳು ಏನು ಮಾಡಬೇಕು? ಯಾರಾದರೂ ಹೂಡಿಕೆ ಮಾಡಬೇಕೆಂದರೆ ಅವರಿಗೆ ಭೂಮಿ, ವಿದ್ಯುತ್, ನೀರು ಇತ್ಯಾದಿ ಬೇಕಾಗುತ್ತದೆ. ಇವೆಲ್ಲವೂ ರಾಜ್ಯಗಳ ವಿಚಾರ. ಹೀಗಾಗಿ, ರಾಜ್ಯಗಳಲ್ಲಿ ಇರುವ ಇಂಥ ಸಮಸ್ಯೆಗಳನ್ನು ಪತ್ತೆ ಮಾಡಿ ಅವನ್ನು ಬಗೆಹರಿಸಬೇಕೆಂದು ಪ್ರಧಾನಿ ಹೇಳಿದ್ದಾರೆ ಎಂದು ನೀತಿ ಆಯೋಗ್​ನ ಸದಸ್ಯರಾದ ಅರವಿಂದ್ ವಿರ್ಮಾನಿ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ