ಭಾರತದಲ್ಲಿ ಶಾಲೆ ಫೀಸ್, ಆಸ್ಪತ್ರೆ ಬಿಲ್ ದುಬಾರಿ ಯಾಕೆ? ಜೋಹೋ ಸಿಇಒ ಬಿಚ್ಚಿಟ್ಟಿದ್ದಾರೆ ಪ್ರಮುಖ ಕಾರಣ
Why Education, Healthcare, Housing costly in urban India: ಭಾರತದಲ್ಲಿ ಶಾಲೆಯ ಫೀಸ್, ಆಸ್ಪತ್ರೆ ಬಿಲ್, ಮನೆ ಬೆಲೆ ಯಾಕೆ ತೀರಾ ದುಬಾರಿಯಾಗುತ್ತಿದೆ? ಜೋಹೋ ಸಿಇಒ ಶ್ರೀಧರ್ ವೆಂಬು ಕಾರಣ ಬಿಚ್ಚಿಟಿದ್ದಾರೆ. ಅವರ ಪ್ರಕಾರ ರಿಯಲ್ ಎಸ್ಟೇಟ್ ಬೆಲೆ ಅಸ್ವಾಭಾವಿಕವಾಗಿ ಏರಿಕೆ ಆಗುತ್ತಿರುವುದು ಇದಕ್ಕೆ ಕಾರಣ. ರಾಜಕೀಯದಿಂದ ಭ್ರಷ್ಟ ಹಣ ರಿಯಲ್ ಎಸ್ಟೇಟ್ನಲ್ಲಿ ಹರಿದುಬರುತ್ತಿರುವುದರಿಂದ ಭೂಮಿ ಬೆಲೆ ಬಹಳ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅವರು.
ಬೆಂಗಳೂರು, ಆಗಸ್ಟ್ 19: ಭಾರತದಲ್ಲಿ ಜೀವನವೆಚ್ಚ ಬಹಳ ಹೆಚ್ಚಾಗುತ್ತಿದೆ. ಶಿಕ್ಷಣ ವೆಚ್ಚ ಹಣದುಬ್ಬರ ದರಕ್ಕಿಂತಲೂ ಹೆಚ್ಚಿನ ವೇಗವಾಗಿ ಹೆಚ್ಚುತ್ತಿದೆ. 20 ವರ್ಷದ ಹಿಂದೆ ಉತ್ತಮ ಶಾಲೆಯೊಂದರಲ್ಲಿ ವರ್ಷಕ್ಕೆ 30 ಸಾವಿರ ರೂ ಫೀಸ್ ಆಗುತ್ತಿತ್ತು. ಇವತ್ತು 4 ಲಕ್ಷ ರೂವಾದರೂ ಬೇಕು ಎನ್ನುವಂತಾಗಿದೆ. ನಗರ ಭಾಗದಲ್ಲಿ ಒಂದು ಸಾಮಾನ್ಯ ಶಾಲೆಯಲ್ಲಿ ವರ್ಷಕ್ಕೆ ಕನಿಷ್ಠ ಒಂದು ಲಕ್ಷ ರೂ ಶುಲ್ಕ ಇರುತ್ತದೆ. ಆಸ್ಪತ್ರೆಗಳ ವೆಚ್ಚವೂ ಕೂಡ ವರ್ಷದಿಂದ ವರ್ಷಕ್ಕೆ ತೀರಾ ಹೆಚ್ಚಾಗುತ್ತಿದೆ. ಜೋಹೋ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಪ್ರಕಾರ ಇದಕ್ಕೆ ಪ್ರಮುಖ ಕಾರಣಗಳಲ್ಲಿ ರಿಯಲ್ ಎಸ್ಟೇಟ್ ಒಂದು.
ಬೆಂಗಳೂರು ಮೂಲದ ಹೂಡಿಕೆದಾರ ಅವಿರಲ್ ಭಟ್ನಾಗರ್ ಅವರು ತಮ್ಮ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಹಾಕಿದ ಒಂದು ಪೋಸ್ಟ್ಗೆ ವೆಂಬು ಪ್ರತಿಕ್ರಿಯಿಸುತ್ತಾ, ಬೆಲೆ ಏರಿಕೆಗೆ ದುಬಾರಿ ರಿಯಲ್ ಎಸ್ಟೇಟ್ ಕಾರಣ ಎಂದಿದ್ದಾರೆ. ಹೈದರಾಬಾದ್ನಲ್ಲಿ ಎಲ್ಕೆಜಿಗೆ ಫೀಸ್ 3.7 ಲಕ್ಷ ರೂ ಆಗಿದೆ ಎಂದು ಅವಿರಳ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದರು. ಇದಕ್ಕೆ ಜೋಹೋ ಸಿಇಒ ಪ್ರತಿಕ್ರಿಯೆ:
‘ಶಿಕ್ಷಣ ಕೈಗೆಟುಕದಂತಾಗಿದೆ. ನಗರ ಭಾಗದ ರಿಯಲ್ ಎಸ್ಟೇಟ್, ಹಾಗೂ ಸಣ್ಣ ಪಟ್ಟಣಗಳಲ್ಲಿನ ರಿಯಲ್ ಎಸ್ಟೇಟ್ ತೀರಾ ದುಬಾರಿಯಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಭೂಮಿ ಬೆಲೆ ಹೆಚ್ಚಾಗುತ್ತಿರುವುದರಿಂದ, ಅದು ಶಿಕ್ಷಣ, ಹೆಲ್ತ್ಕೇರ್, ವಸತಿ, ರೀಟೇಲ್ ಮೊದಲಾದವುಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ಶ್ರೀಧರ್ ವೆಂಬು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಎಂಜಿನಿಯರ್ ಪದವೀಧರರಿಗೆ ಎರಡೂವರೆ ಲಕ್ಷ ರೂ ಸಂಬಳ ಸುಳ್ಳು; ಕನಿಷ್ಠ 4 ಲಕ್ಷ ರೂ ವೇತನ: ಕಾಗ್ನೈಜೆಂಟ್ ಸ್ಪಷ್ಟನೆ
ಭಷ್ಟರ ಹಣ ರಿಯಲ್ ಎಸ್ಟೇಟ್ಗೆ ಹರಿದುಬರುತ್ತಿದೆ…
‘ರಾಜಕೀಯದಿಂದ ಸಾಕಷ್ಟು ಭ್ರಷ್ಟ ಹಣ ರಿಯಲ್ ಎಸ್ಟೇಟ್ನಲ್ಲಿ ಸಂಗ್ರಹಣೆ ಆಗುತ್ತಿದೆ. ಇದರಿಂದ ಮಾರುಕಟ್ಟೆ ಬೇಡಿಕೆಗಿಂತ ತೀವ್ರವಾಗಿ ಬೆಲೆ ಉಬ್ಬರ ಆಗುತ್ತಿದೆ. ಒಂದು ರೀತಿಯಲ್ಲಿ ನಾವೆಲ್ಲರೂ ದುಬಾರಿ ಮನೆ, ಶಾಲೆ, ಆಸ್ಪತ್ರೆ ಸೇವೆ ಮೂಲಕ ರಾಜಕೀಯ ಭ್ರಷ್ಟಾಚಾರಕ್ಕೆ ಹಣ ಪಾವತಿಸುತ್ತಿದ್ದೇವೆ,’ ಎಂದು ಜೋಹೋ ಸಿಇಒ ಮಾರ್ಮಿಕವಾಗಿ ಹೇಳಿದ್ದಾರೆ.
Education has become increasingly unaffordable. A good part of it due to urban real estate (and even real estate around small towns) becoming extremely expensive; that affects education, health care and of course, housing and retail as well.
A lot of corruption money from… https://t.co/UWaCUtjQTo
— Sridhar Vembu (@svembu) August 16, 2024
ಅದೇ ಪೋಸ್ಟ್ನಲ್ಲಿ ಅವರು ತಮ್ಮ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ನೀಡಲು ಹೇಗೆ ಸಾಧ್ಯವಾಗುತ್ತಿದೆ ಎಂದು ಕಾರಣ ನೀಡಿದ್ದಾರೆ. ‘ಶಾಲಾ ಶಿಕ್ಷಣ ದುಬಾರಿಯಾಗದಂತೆ ಅದರಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಶಾಲೆಗಳು ಉಚಿತ. ಆದರೆ, ಭೂಮಿ ಬೆಲೆ ಕಡಿಮೆ ಇರುವ ದೂರದ ಗ್ರಾಮೀಣ ಭಾಗದಲ್ಲಿ ಇದು ಸಾಧ್ಯವಾಗಿದೆ,’ ಎಂದು ಉದ್ಯಮಿಯಾದ ಅವರು ವಿವರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ