ಡಿಸೆಂಬರ್ನಲ್ಲಿ ಹಣದುಬ್ಬರ ಶೇ. 5.22; ನಾಲ್ಕು ತಿಂಗಳಲ್ಲೇ ಕನಿಷ್ಠ ಬೆಲೆ ಹೆಚ್ಚಳ
2024 December, retail inflation: ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ದರ ಡಿಸೆಂಬರ್ ತಿಂಗಳಲ್ಲಿ ಶೇ. 5.22ಕ್ಕೆ ಇಳಿಕೆ ಆಗಿದೆ. ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ನಿಂದ ಜನವರಿ 13ರಂದು ಪ್ರಕಟವಾದ ದತ್ತಾಂಶದ ಪ್ರಕಾರ ಆಹಾರವಸ್ತುಗಳ ಬೆಲೆ ಇಳಿಕೆಯ ಪರಿಣಾಮವಾಗಿ ಹಣದುಬ್ಬರ ಕಡಿಮೆ ಆಗಿದೆ. ಹಿಂದಿನ ವರ್ಷದ ಡಿಸೆಂಬರ್ನಲ್ಲಿ ಹಣದುಬ್ಬರ ಶೇ. 5.69ರಷ್ಟಿದ್ದರೆ, ಹಿಂದಿನ ತಿಂಗಳಲ್ಲಿ (ನವೆಂಬರ್) ಅದು ಶೇ. 5.48ರಷ್ಟಿತ್ತು.
ನವದೆಹಲಿ, ಜನವರಿ 14: ಭಾರತದ ರೀಟೇಲ್ ಹಣದುಬ್ಬರ ದರ ಡಿಸೆಂಬರ್ ತಿಂಗಳಲ್ಲಿ ಶೇ. 5.22ರಷ್ಟಿದೆ. ಹಿಂದಿನ ತಿಂಗಳು ಮತ್ತು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಹಣದುಬ್ಬರ ಇಳಿಕೆ ಆಗಿದೆ. 2023ರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.69ರಷ್ಟಿತ್ತು. 2024ರ ನವೆಂಬರ್ ತಿಂಗಳಲ್ಲಿ ಶೇ. 5.48ರಷ್ಟಿತ್ತು. ಸರ್ಕಾರ ನಿನ್ನೆ ಸೋಮವಾರ ಡಿಸೆಂಬರ್ ತಿಂಗಳ ಹಣದುಬ್ಬರ ದರದ ದತ್ತಾಂಶವನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ ಆಹಾರ ವಸ್ತು ವಿಭಾಗದಲ್ಲಿ ಬೆಲೆ ಏರಿಕೆ ಪ್ರಮಾಣ ಕಡಿಮೆ ಇದ್ದರಿಂದ ಹಣದುಬ್ಬರ ತುಸು ಇಳಿಕೆ ಆಗಿದೆ.
ಆಹಾರವಸ್ತುಗಳ ಗುಂಪಿನ ಹಣದುಬ್ಬರ 2024ರ ನವೆಂಬರ್ನಲ್ಲಿ ಮತ್ತು 2023ರ ಡಿಸೆಂಬರ್ನಲ್ಲಿ ಶೇ. 9ಕ್ಕಿಂತಲೂ ಹೆಚ್ಚಿತ್ತು. ಕಳೆದ ತಿಂಗಳು ಇದರ ಹಣದುಬ್ಬರ ಶೇ. 8.39ರಷ್ಟಿದೆ. ಇದು ಹಣದುಬ್ಬರ ಇಳಿಕೆಗೆ ಅನುವು ಮಾಡಿಕೊಟ್ಟಿದೆ. ಶೇ. 5.22ರ ದರವು ಆರ್ಬಿಐ ನಿಗದಿ ಮಾಡಿದ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ರ ಒಳಗೆ ಬರುತ್ತದೆ.
ಇದನ್ನೂ ಓದಿ: ಎಷ್ಟು ಅವಧಿ ವಹಿವಾಟು ನಡೆಯದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ? ಅಕೌಂಟ್ ರೀಆ್ಯಕ್ಟಿವೇಟ್ ಮಾಡುವ ಕ್ರಮ
ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಇಳಿಕೆ ಆಗುವುದು ನಿರೀಕ್ಷಿತವೇ ಆಗಿತ್ತು. ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಆಹಾರವಸ್ತುಗಳ ಬೆಲೆ ವಿಪರೀತ ಏರಿತ್ತು. ಅದಕ್ಕೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಆಹಾರ ಉತ್ಪಾದನೆ ಉತ್ತಮವಾಗಿ ಆಗುವ ನಿರೀಕ್ಷೆ ಇತ್ತು. ಆರ್ಬಿಐ ಕೂಡ ಆಹಾರ ಹಣದುಬ್ಬರ ಡಿಸೆಂಬರ್ನಲ್ಲಿ ಕಡಿಮೆ ಆಗಬಹುದು. ಅದರ ಪರಿಣಾಮವಾಗಿ ಹಣದುಬ್ಬರವೂ ಕಡಿಮೆ ಆಗಬಹುದು ಎಂದು ಕಳೆದ ತಿಂಗಳೇ ಹೇಳಿತ್ತು.
ಕಳೆದ ತಿಂಗಳು ನಡೆದ ಎಂಪಿಸಿ ಸಭೆಯಲ್ಲಿ ಆರ್ಬಿಐ ಪ್ರಸಕ್ತ ಹಣಕಾಸು ವರ್ಷಕ್ಕೆ ಹಣದುಬ್ಬರ ಸಾಧ್ಯತೆಯನ್ನು ಶೇ. 4.8ರಿಂದ ಶೇ. 4.5ಕ್ಕೆ ಇಳಿಸಿದೆ.
ಇದನ್ನೂ ಓದಿ: ಹೊಸ ವಿಳಾಸಕ್ಕೆ ಹೋಗ್ತಿದ್ದೀರಾ? ನಿಮ್ಮ ಎಲ್ಪಿಜಿ ಸಂಪರ್ಕವನ್ನು ವರ್ಗಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ
2024ರ ಜುಲೈನಿಂದ ಆಗಸ್ಟ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ದರ ಸರಾಸರಿಯಾಗಿ ಶೇ. 3.6ರಷ್ಟಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಅದು ಶೇ. 5.5ಕ್ಕೆ ಹೆಚ್ಚಾಯಿತು. ಅಕ್ಟೋಬರ್ ತಿಂಗಳಲ್ಲಿ ಆರ್ಬಿಐನ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ರ ಮಟ್ಟ ದಾಟಿ ಶೇ. 6.2 ಮುಟ್ಟಿತು. ನವೆಂಬರ್ ತಿಂಗಳಲ್ಲಿ ಶೇ. 5.48ಕ್ಕೆ ಇಳಿಯಿತು. ಈಗ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಮತ್ತಷ್ಟು ಇಳಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ