UPI ATM: ಭಾರತದಲ್ಲಿ ವಿಶ್ವದ ಮೊದಲ ಯುಪಿಐ ಎಟಿಎಂ; ಕಳ್ಳಕಾಕರ ಭಯ ದೂರ ಮಾಡುವ ವಿನೂತನ ಟೆಕ್ನಾಲಜಿ
Hitachi Payment Services: ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಸಹಯೋಗದಲ್ಲಿ ಹಿಟಾಚಿ ಪೇಮೆಂಟ್ ಸರ್ವಿಸಸ್ ಭಾರತದಲ್ಲಿ ಮೊದಲ ಯುಪಿಐ ಎಟಿಎಂ ಅನ್ನು ಸ್ಥಾಪಿಸಿದೆ. ಎಟಿಎಂ ಕಾರ್ಡ್ ಬಳಸದೆಯೇ, ಯಾವುದೇ ಯುಪಿಐ ಆ್ಯಪ್ ಮೂಲಕ ಎಟಿಎಂ ಸೆಂಟರ್ನಲ್ಲಿ ನಗದು ಹಣ ವಿತ್ಡ್ರಾ ಮಾಡಬಹುದಾಗಿದೆ. ಈಗಾಗಲೇ ಎಸ್ಬಿಐ ಮೊದಲಾದ ಬ್ಯಾಂಕುಗಳ ಕೆಲ ಎಟಿಎಂಗಳಲ್ಲಿ ಯುಪಿಐ ಫೆಸಿಲಿಟಿ ಇದೆಯಾದರೂ ಅದಕ್ಕೆ ಅ ಬ್ಯಾಂಕ್ನ ಆ್ಯಪ್ ಬೇಕಾಗುತ್ತದೆ. ಆದರೆ, ಹಿಟಾಚಿಯ ಯುಪಿಐ ಎಟಿಎಂನಲ್ಲಿ ಯಾವುದೇ ಆ್ಯಪ್ ಬಳಸಬಹುದು.
ಭಾರತದಲ್ಲಿ ಯುಪಿಐ ಪಾವತಿಯ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಬಹುತೇಕ ಭಾರತೀಯರು ಹಣದ ವಹಿವಾಟಿಗೆ ಯುಪಿಐ ಸಾಧನವನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಹಣಕಾಸು ತಂತ್ರಜ್ಞಾನ (ಪಿನ್ಟೆಕ್) ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿರುವುದರ ಫಲವಾಗಿ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ನಿರಂತರವಾಗಿ ಸುಧಾರಣೆಗಳಾಗುತ್ತಿವೆ. ವಿಶ್ವದ ಫಿನ್ಟೆಕ್ (FinTech) ವಲಯದಲ್ಲಿ ಭಾರತ ಮುಂಚೂಣಿ ಆಟಗಾರನಾಗಿ ಮಿಂಚುತ್ತಿದೆ. ಇದೀಗ ಭಾರತದಲ್ಲಿ ಯುಪಿಐ ಎಟಿಎಂ ಆರಂಭವಾಗಿದೆ. ಎಟಿಎಂ ಕಾರ್ಡ್ ಬಳಸದೆಯೇ, ಯುಪಿಐ ಆ್ಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ವಿತ್ಡ್ರಾ ಮಾಡಬಹುದು.
ಇಂಥ ಯುಪಿಐ ಎಟಿಎಂ ಭಾರತದಲ್ಲಿ ಇದೇ ಪ್ರಥಮ ಪ್ರಯೋಗವಲ್ಲ. ಎಸ್ಬಿಐ, ಎಚ್ಡಿಎಫ್ಸಿ ಮೊದಲಾದ ಬ್ಯಾಂಕುಗಳ ಎಟಿಎಂಗಳಲ್ಲಿ ಯುಪಿಐ ಮೂಲಕ ಹಣ ವಿತ್ಡ್ರಾ ಮಾಡುವ ಸೌಲಭ್ಯಗಳುಂಟು. ಆದರೆ, ಅದನ್ನು ಬಳಸಬೇಕಾದರೆ ಆಯಾ ಬ್ಯಾಂಕ್ನ ಆ್ಯಪ್ಗಳೇ ಬೇಕಾಗುತ್ತದೆ. ಆದರೆ, ಯಾವುದೇ ಯುಪಿಐ ಪೇಮೆಂಟ್ ಪ್ಲಾಟ್ಫಾರ್ಮ್ ಬಳಸಿ ಕ್ಯಾಷ್ ಪಡೆಯಬಲ್ಲ ಸೌಲಭ್ಯ ಇದೇ ಮೊದಲ ಬಾರಿಗೆ ಆರಂಭವಾಗಿದೆ.
ಇದನ್ನೂ ಓದಿ: ಜಾಂಬಿಯಾ ದೇಶದ ತಾಮ್ರ ಗಣಿಗಾರಿಕೆ ಅಧಿಕಾರ ಮತ್ತೆ ಭಾರತದ ವೇದಾಂತ ಸಂಸ್ಥೆಯ ತೆಕ್ಕೆಗೆ; 4 ವರ್ಷಗಳ ಕಾನೂನು ಸಮರ ಸುಖಾಂತ್ಯ
ಯುಪಿಐ ಎಟಿಎಂ ಹಿಂದಿನ ಶಕ್ತಿ ಹಿಟಾಚಿ ಪೇಮೆಂಟ್ ಸರ್ವಿಸಸ್
ಭಾರತದ ಪ್ರಮುಖ ವೈಟ್ ಲೇಬಲ್ ಎಟಿಎಂ ಆಪರೇಟರ್ಗಳಲ್ಲಿ ಒಂದಾದ ಹಿಟಾಚಿ ಪೇಮೆಂಟ್ ಸರ್ವಿಸ್ ಈ ಯುಪಿಐ ಎಟಿಎಂ ಹಿಂದಿರುವ ಶಕ್ತಿ. ಯುಪಿಐ ಅನ್ನು ಅಭಿವೃದ್ದಿಪಡಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಸಹಯೋಗದೊಂದಿಗೆ ಹಿಟಾಚಿ ಪೇಮೆಂಟ್ ಸರ್ವಿಸಸ್ ಯುಪಿಐ ಎಟಿಎಂ ಅನ್ನು ಅಭಿವೃದ್ಧಿಪಡಿಸಿದೆ.
ಎಟಿಎಂ ಸೆಂಟರ್ಗಳಲ್ಲಿ ಕಾರ್ಡ್ ಸ್ಕಿಮ್ಮಿಂಗ್ ಇತ್ಯಾದಿ ಅಪರಾಧಗಳಾಗುವ ಅಪಾಯ ಇದ್ದೇ ಇದೆ. ಯುಪಿಐ ಎಟಿಎಂನಿಂದ ಇದು ತಪ್ಪುತ್ತದೆ. ಎಟಿಎಂನ ಪರದೆಯಲ್ಲಿ ಕಾಣುವ ಕ್ಯುಆರ್ ಕೋಡ್ ಅನ್ನು ಯುಪಿಐ ಆ್ಯಪ್ನಿಂದ ಸ್ಕ್ಯಾನ್ ಮಾಡಿ ಹಣವನ್ನು ಸುಲಭವಾಗಿ ವಿತ್ಡ್ರಾ ಮಾಡಬಹುದು.
ಇದನ್ನೂ ಓದಿ: ಏರ್ ಇಂಡಿಯಾ ಪ್ರಯಾಣಿಕರೇ ನಿಮ್ಮ ಗಮನಕ್ಕೆ, ಜಿ20 ಶೃಂಗಸಭೆ ಸಮಯದಲ್ಲಿ ದೆಹಲಿಗೆ ಟಿಕೆಟ್ ಬುಕ್ ಮಾಡಿದ್ದೀರಾ? ಈ ಸುದ್ದಿ ಓದಿ
ಭಾರತದಲ್ಲಿ ಎಟಿಎಂ ಸೆಂಟರ್ಗಳನ್ನು ಇವತ್ತಿನ ದಿನದ ಬೇಡಿಕೆಗೆ ಅನುಗುಣವಾಗಿ ಅಪ್ಗ್ರೇಡ್ ಮಾಡಲು ಯುಪಿಐ ಎಟಿಎಂ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಇಂಡಿಯಾ1 ಪೇಮೆಂಟ್ಸ್ ಲಿ ಬಳಿಕ ಭಾರತದ ಅತಿದೊಡ್ಡ ವೈಟ್ ಲೇಬಲ್ ಎಟಿಎಂ ಆಪರೇಟರ್ ಎನಿಸಿದ ಹಿಟಾಚಿ ಪೇಮೆಂಟ್ ಸರ್ವಿಸಸ್ ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಎಟಿಎಂ ಸೆಂಟರ್ಗಳನ್ನು ನಿರ್ವಹಿಸುತ್ತದೆ. ವೈಟ್ ಲೇಬಲ್ ಎಟಿಎಂ ಎಂದರೆ ನಾನ್ ಬ್ಯಾಂಕಿಂಗ್ ಸಂಸ್ಥೆಗಳಿಗೆ ನೀಡಲಾಗುವ ಎಟಿಎಂ ಸೇವೆ. ಈ ಎಟಿಎಂ ಸರ್ವಿಸ್ ಮಾತ್ರವಲ್ಲ, ಪೇಮೆಂಟ್ ಗೇಟ್ವೇ ಸಲ್ಯೂಶನ್ಸ್, ಪಿಒಎಸ್ ಸಲ್ಯೂಶನ್ಸ್, ಟೋಲ್ ಸಲ್ಯೂಶನ್ಸ್ ಇತ್ಯಾದಿ ವಿವಿಧ ಫಿನ್ಟೆಕ್ ಸೇವೆಗಳನ್ನು ಹಿಟಾಚಿ ಒದಗಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ