Layoffs: ಬೇಡಿಕೆ ಕುಸಿತ; 6,650 ಉದ್ಯೋಗಿಗಳ ವಜಾಗೊಳಿಸಲಿದೆ ಡೆಲ್
ಉದ್ಯೋಗ ಕಡಿತದ ಘೋಷಣೆಯೊಂದಿಗೆ ಡೆಲ್ ಕೂಡ ಗೂಗಲ್, ಅಮೆಜಾನ್, ಮೆಟಾ, ಟ್ವಿಟರ್ ಸಾಲಿಗೆ ಸೇರುವುದು ಖಚಿತವಾಗಿದೆ.
ನವದೆಹಲಿ: ಕಂಪ್ಯೂಟರ್ಗಳ ಬೇಡಿಕೆ ಕುಸಿತದ ಕಾರಣ 6,650 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲು (Layoffs) ಚಿಂತನೆ ನಡೆಸಿರುವುದಾಗಿ ಡೆಲ್ (Dell) ತಿಳಿಸಿದೆ. ಕಂಪನಿಯ ಒಟ್ಟು ಉದ್ಯೋಗಿಗಳ ಶೇ 5ರಷ್ಟು ಮಂದಿ ಮೇಲೆ ಉದ್ಯೋಗ ಕಡಿತ ಪರಿಣಾಮ ಬೀರಲಿದೆ ಎನ್ನಲಾಗಿದೆ. ಕಂಪನಿಯು ಕಠಿಣ ಮಾರುಕಟ್ಟೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭವಿಷ್ಯವೂ ಅನಿಶ್ಚಿತವಾಗಿದೆ. ಪರ್ಸನಲ್ ಕಂಪ್ಯೂಟರ್ ಉದ್ಯಮವು ಪ್ರಸ್ತುತ ಜಾಗತಿಕವಾಗಿ ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಲುವಾಗಿ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜೆಫ್ ಕ್ಲರ್ಕ್ ಹೇಳಿರುವುದಾಗಿ ‘ಬ್ಲೂಮ್ಬರ್ಗ್’ ತಾಣ ವರದಿ ಮಾಡಿದೆ. ನಾವು ಈ ಮೊದಲು ಆರ್ಥಿಕ ಕುಸಿತದ ಸಂದರ್ಭವನ್ನು ನಿಭಾಯಿಸಿದ್ದೇವೆ ಮತ್ತು ಯಶಸ್ವಿಯಾಗಿದ್ದೇವೆ. ಮಾರುಕಟ್ಟೆಯಲ್ಲಿ ಅಂಥ ಪರಿಸ್ಥಿತಿ ಮರುಕಳಿಸಿದಾಗ ನಾವು ಸನ್ನದ್ಧರಾಗಿರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಉದ್ಯೋಗ ಕಡಿತದ ಘೋಷಣೆಯೊಂದಿಗೆ ಡೆಲ್ ಕೂಡ ಗೂಗಲ್, ಅಮೆಜಾನ್, ಮೆಟಾ, ಟ್ವಿಟರ್ ಸಾಲಿಗೆ ಸೇರುವುದು ಖಚಿತವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುತ್ತಿರುವ ತಂತ್ರಜ್ಞಾನ ಉದ್ದಿಮೆಗಳು ಕೋವಿಡ್ ಸಾಂಕ್ರಾಮಿಕದ ನಂತರದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತಿದ್ದು, ಸ್ಪರ್ಧಾತ್ಮಕತೆ ಉಳಿಸಿಕೊಳ್ಳುವುದಕ್ಕಾಗಿ ವೆಚ್ಚ ಕಡಿತದ ಮೊರೆ ಹೋಗುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
ಪರ್ಸನಲ್ ಕಂಪ್ಯೂಟರ್ ಉದ್ಯಮದಲ್ಲಿ ಡೆಲ್ ಪ್ರತಿಸ್ಪರ್ಧಿ ಕಂಪನಿಯಾಗಿರುವ ಎಚ್ಪಿ ಕೂಡ ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಇತ್ತೀಚೆಗೆ ಘೋಷಿಸಿತ್ತು. ಗೂಗಲ್ ಮತ್ತು ಅಮೆಜಾನ್ 2023ರ ಆರಂಭದಲ್ಲೇ ಉದ್ಯೋಗಿಗಳ ವಜಾಗೊಳಿಸಿದ್ದವು.
ಇದನ್ನೂ ಓದಿ: Pinterest Layoff: ಪಿಂಟ್ರೆಸ್ಟ್ನಿಂದಲೂ ಉದ್ಯೋಗ ಕಡಿತ; 150 ಮಂದಿ ವಜಾ
ಜನವರಿ ತಿಂಗಳಲ್ಲಿ ಗೂಗಲ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. 18,000 ಉದ್ಯೋಗಿಗಳನ್ನು ವಜಾಗೊಳಿಸಲು ಅಮೆಜಾನ್ ಜನವರಿಯಲ್ಲಿ ನಿರ್ಧರಿಸಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಗಳು 1,50,000 ಉದ್ಯೋಗಿಗಳನ್ನು ವಜಾಗೊಳಿಸಿವೆ.
150 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಳೆದ ವಾರವಷ್ಟೇ ಪಿಂಟ್ರೆಸ್ಟ್ ಘೋಷಿಸಿತ್ತು. ಅದಕ್ಕೂ ಕೆಲವು ದಿನಗಳ ಮೊದಲು, ಜಾಗತಿಕ ವೈದ್ಯಕೀಯ ಸಾಧನ ಉತ್ಪಾದನಾ ಕಂಪನಿ ಫಿಲಿಪ್ಸ್ ಎರಡನೇ ಸುತ್ತಿನಲ್ಲಿ 6,000 ಮಂದಿಯನ್ನು ವಜಾಗೊಳಿಸುತ್ತಿರುವುದಾಗಿ ತಿಳಿಸಿತ್ತು. 2022ರಲ್ಲಿ ಫಿಲಿಪ್ಸ್ 4,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ