GST Collection: ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 1.57 ಲಕ್ಷ ಕೋಟಿ ರೂ; ಕರ್ನಾಟಕದಲ್ಲಿ ತೆರಿಗೆ ಕಲೆಕ್ಷನ್ ಎಷ್ಟು?
2023 May, GST Total Collection: ಕಳೆದ ಮೇ ತಿಂಗಳಲ್ಲಿ ಭಾರತದಲ್ಲಿ ಒಟ್ಟಾರೆ ಸಂಗ್ರಹವಾಗಿರುವ ಜಿಎಸ್ಟಿ ತೆರಿಗೆ ಮೊತ್ತ 1.57 ಲಕ್ಷ ಕೋಟಿ ರೂ ಆಗಿದೆ. ರಾಜ್ಯವಾರು ಲೆಕ್ಕ ನೋಡಿದಾಗ ಮಹಾರಾಷ್ಟ್ರದ ಬಳಿಕ ಕರ್ನಾಟಕದಲ್ಲೇ ಅತಿಹೆಚ್ಚು ತೆರಿಗೆ ಸಂಗ್ರಹವಾಗಿದೆ.
ನವದೆಹಲಿ: 2023ರ ಮೇ ತಿಂಗಳಲ್ಲಿ ಜಿಎಸ್ಟಿ ತೆರಿಗೆಯಿಂದ ಆದ ಸಂಗ್ರಹ (GST Collection) 1.57 ಲಕ್ಷ ಕೋಟಿ ರೂ ಎಂದು ಕೇಂದ್ರ ಹಣಕಾಸು ಸಚಿವಾಲಯ ಜೂನ್ 1ರಂದು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಜಿಎಸ್ಟಿ ಜಾರಿಯಾದಾಗಿನಿಂದ ಒಂದು ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಒಂದೂವರೆ ಲಕ್ಷ ಕೋಟಿ ರೂ ದಾಟಿದ್ದು ಇದು ಐದನೇ ಬಾರಿ. ಹಾಗೆಯೇ, ಸತತ 15 ತಿಂಗಳು ಜಿಎಸ್ಟಿ ಸಂಗ್ರಹ 1.4 ಲಕ್ಷ ಕೋಟಿಗಿಂತ ಹೆಚ್ಚಿದೆ. ಇನ್ನು, ಮೇ ತಿಂಗಳಲ್ಲಿ ಸಿಕ್ಕಿರುವ 1.57 ಲಕ್ಷ ಕೋಟಿ ರೂ ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ. 12ರಷ್ಟು ಹೆಚ್ಚಳವಾಗಿದೆ. ಆದರೆ, ಏಪ್ರಿಲ್ ತಿಂಗಳಲ್ಲಿ ಜಿಎಸ್ಟಿ 1.87 ಲಕ್ಷ ಕೋಟಿಯಷ್ಟು ಸಂಗ್ರಹವಾಗಿದ್ದು ದಾಖಲೆಯಾಗಿ ಇನ್ನೂ ಉಳಿದಿದೆ.
2023ರ ಮೇ ತಿಂಗಳ ಜಿಎಸ್ಟಿ ಕಲೆಕ್ಷನ್ಸ್ ವಿವರ
- ಮೇ ತಿಂಗಳಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ: 1,57,090 ಕೋಟಿ ರೂ
- ಸಿಜಿಎಸ್ಟಿ: 28,411 ಕೋಟಿ ರೂ
- ಎಸ್ಜಿಎಸ್ಟಿ: 35,828 ಕೋಟಿ ರೂ
- ಐಜಿಎಸ್ಟಿ: 81,363 ಕೋಟಿ ರೂ
- ಸೆಸ್: 11,489 ಕೋಟಿ ರೂ
ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೆ ಈ ಬಾರಿ ಡಬಲ್ ಧಮಾಕ; ಡಿಎ ಜೊತೆಗೆ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಹೆಚ್ಚಳ ಸಾಧ್ಯತೆ
ಇದರಲ್ಲಿ ಸಿಜಿಎಸ್ಟಿಯು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊತ್ತ. ಎಸ್ಜಿಎಸ್ಟಿಯು ರಾಜ್ಯದ ಪಾಲಾಗಿರುತ್ತದೆ. ಇನ್ನು ಐಜಿಎಸ್ಟಿ ಎಂಬುದು ಅಂತರರಾಜ್ಯ ವಹಿವಾಟು ವೇಳೆ ಸಂಗ್ರಹವಾಗುವ ತೆರಿಗೆಯಾಗಿರುತ್ತದೆ.
ಒಟ್ಟಾರೆ ಮೇ ತಿಂಗಳಲ್ಲಿ ಸಂಗ್ರಹವಾದ 1.57 ಲಕ್ಷ ಕೋಟಿ ರೂ ಜಿಎಸ್ಟಿ ಹಣದ ಪೈಕಿ ಕೇಂದ್ರ ಸರ್ಕಾರಕ್ಕೆ 63,780 ಕೋಟಿ ರೂ, ರಾಜ್ಯಗಳಿಗೆ 65,597 ಕೋಟಿ ರೂ ಸಂದಾಯವಾಗಿದೆ.
ಜಿಎಸ್ಟಿ ಕಲೆಕ್ಷನ್ನಲ್ಲಿ ಕರ್ನಾಟಕ ಎರಡನೇ ಸ್ಥಾನ
ಹಿಂದಿನ ತಿಂಗಳುಗಳಲ್ಲಿಯಂತೆ ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನ ಕಾಯ್ದುಕೊಂಡಿದೆ. 2023ರ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಜಿಎಸ್ಟಿ ಸಂಗ್ರಹವಾಗಿದ್ದು 10,317 ಕೋಟಿ ರೂ. 23,536 ಕೋಟಿ ರೂ ಜಿಎಸ್ಟಿ ಸಂಗ್ರಹ ಕಂಡಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇದು ಸರ್ಕಾರದ ಪಿಐಬಿ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ.
ಇದನ್ನೂ ಓದಿ: SpiceJet: ಕಳಾನಿಧಿ ಮಾರನ್ಗೆ 380 ಕೋಟಿ ರೂ ಕೊಡಲು ಸ್ಪೈಸ್ಜೆಟ್ಗೆ ದೆಹಲಿ ಕೋರ್ಟ್ ಆದೇಶ; ಏನಿದು ಪ್ರಕರಣ?
2023 ಮೇ ತಿಂಗಳಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾಗಿರುವ ಪ್ರಮುಖ ರಾಜ್ಯಗಳ ಪಟ್ಟಿ
- ಮಹಾರಾಷ್ಟ್ರ: 23,536 ಕೋಟಿ ರೂ
- ಕರ್ನಾಟಕ: 10,317 ಕೋಟಿ ರೂ
- ಗುಜರಾತ್: 9800 ಕೋಟಿ ರೂ
- ತಮಿಳುನಾಡು: 8,953 ಕೋಟಿ ರೂ
- ಉತ್ತರಪ್ರದೇಶ: 7,468 ಕೋಟಿ ರೂ
- ಹರ್ಯಾಣ: 7,250 ಕೋಟಿ ರೂ
- ಪಶ್ಚಿಮ ಬಂಗಾಳ: 5,162 ಕೋಟಿ ರೂ
- ದೆಹಲಿ: 5,147 ಕೋಟಿ ರೂ
- ತೆಲಂಗಾಣ: 4,507 ಕೋಟಿ ರೂ
- ಒಡಿಶಾ: 4,398 ಕೋಟಿ ರೂ
- ಆಂಧ್ರಪ್ರದೇಶ: 3,373 ಕೋಟಿ ರೂ