Air Fare: ದುಬಾರಿ ಆಗಲಿದೆ ವಿಮಾನ ಪ್ರಯಾಣ ದರ; ಕನಿಷ್ಠ ಶೇ 10ರಷ್ಟು ಬೆಲೆ ಹೆಚ್ಚು ತೆರಲು ಸಿದ್ಧರಾಗಿ
ದೇಶೀಯ ವಿಮಾನ ಯಾನ ದುಬಾರಿ ಆಗಲಿದ್ದು, ವಿಮಾನ ಯಾನ ಸಚಿವಾಲಯದಿಂದ ಕೆಳಸ್ತರ ಹಾಗೂ ಮೇಲ್ಸ್ತರದ ಪ್ರಯಾಣ ದರದ ಮಿತಿಯನ್ನು ಏರಿಸಲಾಗಿದೆ. ಶೇ 9.83ರಿಂದ ಶೇ 12.82ರ ತನಕ ಪ್ರಯಾಣ ದರ ದುಬಾರಿ ಆಗಲಿದೆ ಎಂಬ ಅಂಶವು ಅಧಿಕೃತ ಆದೇಶದ ಮೂಲಕ ಗೊತ್ತಾಗಿದೆ. ಎರಡು ತಿಂಗಳ ಕೊರೊನಾ ಲಾಕ್ಡೌನ್ ಆದ ನಂತರ ಮೇ 25, 2020ರಂದು ಮತ್ತೆ ಸೇವೆಗಳು ಆರಂಭವಾದ ಮೇಲೆ ವಿಮಾನದ ಹಾರಾಟ ಅವಧಿ ಆಧಾರದಲ್ಲಿ ಮೇಲ್ಸ್ತರ ಹಾಗೂ ಕೆಳಸ್ತರದ ಮಿತಿಯನ್ನು ವಿಧಿಸಲಾಗಿತ್ತು. ಕೆಳಸ್ತರದ ಮಿತಿಯನ್ನು ವಿಧಿಸಿದ್ದು […]
ದೇಶೀಯ ವಿಮಾನ ಯಾನ ದುಬಾರಿ ಆಗಲಿದ್ದು, ವಿಮಾನ ಯಾನ ಸಚಿವಾಲಯದಿಂದ ಕೆಳಸ್ತರ ಹಾಗೂ ಮೇಲ್ಸ್ತರದ ಪ್ರಯಾಣ ದರದ ಮಿತಿಯನ್ನು ಏರಿಸಲಾಗಿದೆ. ಶೇ 9.83ರಿಂದ ಶೇ 12.82ರ ತನಕ ಪ್ರಯಾಣ ದರ ದುಬಾರಿ ಆಗಲಿದೆ ಎಂಬ ಅಂಶವು ಅಧಿಕೃತ ಆದೇಶದ ಮೂಲಕ ಗೊತ್ತಾಗಿದೆ. ಎರಡು ತಿಂಗಳ ಕೊರೊನಾ ಲಾಕ್ಡೌನ್ ಆದ ನಂತರ ಮೇ 25, 2020ರಂದು ಮತ್ತೆ ಸೇವೆಗಳು ಆರಂಭವಾದ ಮೇಲೆ ವಿಮಾನದ ಹಾರಾಟ ಅವಧಿ ಆಧಾರದಲ್ಲಿ ಮೇಲ್ಸ್ತರ ಹಾಗೂ ಕೆಳಸ್ತರದ ಮಿತಿಯನ್ನು ವಿಧಿಸಲಾಗಿತ್ತು. ಕೆಳಸ್ತರದ ಮಿತಿಯನ್ನು ವಿಧಿಸಿದ್ದು ಸಂಕಷ್ಟದಲ್ಲಿರುವ ವಿಮಾನ ಯಾನ ಸಂಸ್ಥೆಗಳಿಗೆ ಕೊವಿಡ್ ಪ್ರಯಾಣ ನಿರ್ಬಂಧ ಸಮಯದಲ್ಲಿ ಆರ್ಥಿಕವಾಗಿ ಪರದಾಟ ಆಗಬಾರದು ಎಂಬ ಉದ್ದೇಶಕ್ಕೆ ಆಗಿತ್ತು. ಇನ್ನು ಮೇಲ್ಸ್ತರ ಮಿತಿಯನ್ನು ಹೇರಿದ್ದದ್ದು ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಆಗಬಾರದು, ವಿಮಾನ ಯಾನ ಸಂಸ್ಥೆಗಳು ಹೆಚ್ಚಿನ ಪ್ರಯಾಣ ದರದ ಬೇಡಿಕೆಯನ್ನು ಮುಂದಿಡಬಾರದು ಎಂಬುದಾಗಿತ್ತು.
ಆಗಸ್ಟ್ 12, 2021ರಂದು ಸಚಿವಾಲಯದಿಂದ ಆದೇಶ ಹೊರಡಿಸಿದ್ದು, 40 ನಿಮಿಷಗಳ ಒಳಗಿನ ಪ್ರಯಾಣಕ್ಕೆ ಕನಿಷ್ಠ ಮಿತಿಯನ್ನು 2600 ರೂ.ನಿಂದ 2,900 ರೂ.ಗೆ ಹೆಚ್ಚಿಸಲಾಗಿದೆ. ಈ ಮೂಲಕ ಶೇ 11.53ರಷ್ಟು ಏರಿಕೆಯಾಗಿದೆ. ಇನ್ನು ಮೇಲ್ಸ್ತರದ ಮಿತಿಯಾಗಿ 40 ನಿಮಿಷಗಳ ಪ್ರಯಾಣಕ್ಕೆ ಶೇ 12.82ರಷ್ಟು ಏರಿಕೆ ಮಾಡಿದ್ದು, ಈಗ 8,800 ರೂಪಾಯಿ ಆಗಿದೆ.ಅದೇ ರೀತಿ 40ರಿಂದ 60 ನಿಮಿಷ ಅವಧಿಯ ಪ್ರಯಾಣಕ್ಕೆ ಕೆಳಸ್ತರದ ಮಿತಿ 3,300 ರೂಪಾಯಿ ಆಗಿದೆ. ಇನ್ನು ಮೇಲ್ಸ್ತರಕ್ಕೆ ಶೇ 12.24ರಷ್ಟು ಹೆಚ್ಚಳ ಮಾಡಿರುವುದರಿಂದ 11,000 ರೂಪಾಯಿ ಆಗಿದೆ ಎಂದು ಮಾಹಿತಿ ನೀಡಲಾಗಿದೆ.
60ರಿಂದ 90 ನಿಮಿಷದ ಅವಧಿ ಕೆಳಸ್ತರದ ಮಿತಿ ಶೇ 12.5 ಹೆಚ್ಚಳ ಆಗಿದ್ದು, 4500 ರೂಪಾಯಿ ಮುಟ್ಟಿದೆ. ಇನ್ನು ಮೇಲ್ಸ್ತರದ ಮಿತಿ ಶೇ 12.82 ಏರಿಕೆ ಆಗಿ, 13,200 ರೂಪಾಯಿ ಆಗಿದೆ. ಈಗ ದೇಶೀ ವಿಮಾನ ಹಾರಾಟ 90-120, 120-150, 150-180 ಮತ್ತು 180-210 ನಿಮಿಷಗಳ ಪ್ರಯಾಣಕ್ಕೆ ಕೆಳಸ್ತರದ ಮಿತಿ ಕ್ರಮವಾಗಿ ರೂ. 5300, ರೂ. 6700, ರೂ. 8300, ರೂ. 9800 ನಿಗದಿ ಮಾಡಲಾಗಿದೆ ಎಂದು ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಇಲ್ಲಿಯ ತನಕ 90-120, 120-150, 150-180 ಮತ್ತು 180-210 ನಿಮಿಷಗಳ ಪ್ರಯಾಣಕ್ಕೆ ಕೆಳಸ್ತರದ ಮಿತಿ ಕ್ರಮವಾಗಿ ರೂ. 4700, ರೂ. 6100, ರೂ. 7400, ರೂ. 8700 ಇದೆ. ಗುರುವಾರದಂದು ನೀಡಿರುವ ಆದೇಶದ ಅನ್ವಯ, 90-120, 120-150, 150-180 ಮತ್ತು 180-210 ನಿಮಿಷಗಳ ಪ್ರಯಾಣಕ್ಕೆ ಮೇಲ್ಸ್ತರದ ಮಿತಿ ಕ್ರಮವಾಗಿ ಶೇ 12.3, ಶೇ 12.42, ಶೇ 12.74 ಹಾಗೂ ಶೇ 12.39ರಷ್ಟು ಕ್ರಮವಾಗಿ ಏರಿಕೆ ಆಗಿದೆ. ಅಂದಹಾಗೆ ಸರ್ಕಾರದಿಂದ ಹೊರಡಿಸಿದ ಆದೇಶದಲ್ಲಿ ಪ್ರಯಾಣಿಕರ ಭದ್ರತಾ ಶುಲ್ಕ, ಬಳಕೆದಾರರ ಅಭಿವೃದ್ಧಿ ಶುಲ್ಕ ಮತ್ತು ಜಿಎಸ್ಟಿ ಒಳಗೊಂಡಿಲ್ಲ. ಇವೆಲ್ಲವೂ ಸೇರಿಸಿಕೊಂಡರೆ ವಿಮಾನ ಪ್ರಯಾಣ ದರ ಮತ್ತೂ ಹೆಚ್ಚಾಗುತ್ತದೆ.
ಇದನ್ನೂ ಓದಿ: ಭಾರತದ ವಿಮಾನ ಪ್ರಯಾಣಿಕರಿಗೆ ನಿಷೇಧ ತೆಗೆದುಹಾಕಿದ ಯುಎಇ; ದುಬೈಗೆ ಪ್ರಯಾಣಿಸಲು ಮಾರ್ಗಸೂಚಿ ಇಲ್ಲಿದೆ
(Domestic Air Fare Hike By Central Government Air Travel Will Be Costlier By Minimum 10 Percent)