SBI E-Bank Guarantee: ಇ-ಬ್ಯಾಂಕ್ ಖಾತರಿ ಸೌಲಭ್ಯ ಆರಂಭಿಸಿದ ಎಸ್‌ಬಿಐ; ಪಡೆಯಲು ಏನು ಮಾಡಬೇಕು?
ಇ-ಬ್ಯಾಂಕ್ ಗ್ಯಾರಂಟೀ ಬಿಡುಗಡೆ ಮಾಡಿದ ತಕ್ಷಣವೇ ಫಲಾನುಭವಿಗಳು ಎನ್ಇಎಸ್ಎಲ್ ಪೋರ್ಟಲ್ನಲ್ಲಿ ನೋಡಬಹುದಾಗಿದೆ. ಇದಕ್ಕಾಗಿ ಬ್ಯಾಂಕ್ನಿಂದ ಹೆಚ್ಚುವರಿ ದೃಢೀಕರಣ ಪಡೆಯುವುದು ಬೇಕಾಗಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ನ್ಯಾಷನಲ್ ಇ-ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ್ (NeSL) ಸಹಭಾಗಿತ್ವದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಇ-ಬ್ಯಾಂಕ್ ಖಾತರಿ ಅಥವಾ ಇ-ಬ್ಯಾಂಕ್ ಗ್ಯಾರಂಟೀ (e-BG) ಯೋಜನೆ ಆರಂಭಿಸಿದೆ. ಇ-ಸ್ಟಾಂಪಿಂಗ್ ಮತ್ತು ಇ-ಸಿಗ್ನೇಚರ್ಗೆ ಪರ್ಯಾಯವಾಗಿ ಇ-ಬಿಜಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಈ ವ್ಯವಸ್ಥೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಪ್ರಸ್ತುತ ಬ್ಯಾಂಕ್ ಸ್ಟಾಂಪಿಂಗ್ ಮತ್ತು ಸಿಗ್ನೇಚರ್ ಮೂಲಕ ಗ್ಯಾರಂಟೀ ನೀಡುತ್ತಿದೆ. ಇ-ಸ್ಟ್ಯಾಂಪ್ ಮತ್ತು ಇ-ಸಿಗ್ನೇಚರ್ ಲಕ್ಷಣಗಳನ್ನು ಒಳಗೊಂಡಿರುವ ಎನ್ಇಎಸ್ಎಲ್ನ ಡಿಜಿಟಲ್ ಡಾಕ್ಯುಮೆಂಟ್ ಎಕ್ಸ್ಕ್ಯೂಷನ್ (ಡಿಡಿಇ) ತಂತ್ರಜ್ಞಾನ ಇ-ಬ್ಯಾಂಕ್ ಗ್ಯಾರಂಟೀ ಸೌಲಭ್ಯವನ್ನು ಸರಳವಾಗಿಸಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಬ್ಯಾಂಕ್ ಗ್ರಾಹಕರಿಗೆ ಏನು ಪ್ರಯೋಜನ?
ಬ್ಯಾಂಕ್ ಗ್ರಾಹಕರು ಮತ್ತು ಇತರ ಫಲಾನುಭವಿಗಳು ಈಗಾಗಲೇ ಎನ್ಇಎಸ್ಎಲ್ ಫ್ಲಾಟ್ಫಾರ್ಮ್ ಸೇವೆ ಪಡೆಯುವವರಾಗಿದ್ದರೆ ಹೆಚ್ಚಿನ ದೃಢೀಕರಣ ಇಲ್ಲದೆ ಇ-ಬ್ಯಾಂಕ್ ಗ್ಯಾರಂಟೀ ಸೌಲಭ್ಯ ಪಡೆಯಲಿದ್ದಾರೆ. ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಸೇವೆ ಒದಗಿಸಲು ಬೇಕಾಗುವ ಹೆಚ್ಚುವರಿ ಸಮಯವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಬಿಐ ಹೇಳಿದೆ. ಡಿಜಿಟಲ್ ಸೇವೆಗಳನ್ನು ನೀಡುವಲ್ಲಿ ಎಸ್‌ಬಿಐ ಸದಾ ಮುಂಚೂಣಿಯಲ್ಲಿದೆ. ಎನ್ಇಎಸ್ಎಲ್ ಜತೆ ಸೇರಿ ಗ್ರಾಹಕರಿಗೆ ಇ-ಬ್ಯಾಂಕ್ ಗ್ಯಾರಂಟೀ ಸೌಲಭ್ಯ ನೀಡಲು ಸಂತಸವಾಗುತ್ತಿದೆ ಎಂದು ಎಸ್‌ಬಿಐ ಅಶ್ಯಕ್ಷ ದಿನೇಶ್ ಕುಮಾರ್ ಖರಾ ತಿಳಿಸಿದ್ದಾರೆ. ಎಸ್ಬಿಐನ ಸುಸ್ಥಿರ ಮತ್ತು ಗ್ರಾಹಕಸ್ನೇಹಿ ಬ್ಯಾಂಕಿಂಗ್ ಸೇವೆಗಳಿಗೆ ಇ-ಬ್ಯಾಂಕ್ ಗ್ಯಾರಂಟೀ ಸೌಲಭ್ಯ ಪೂರಕವಾಗಲಿದೆ ಎಂದು ಅವರು ಹೇಳಿದ್ದಾರೆ.
ಇ-ಬ್ಯಾಂಕ್ ಗ್ಯಾರಂಟೀ ಎಂದರೇನು?
ಎನ್ಇಎಸ್ಎಲ್ ಹೇಳುವಂತೆ, ಗ್ರಾಹಕರ ದೈಹಿಕ ಹಾಜರಾತಿ ಇಲ್ಲದೆ ಆನ್ಲೈನ್ ಮೂಲಕವೇ ಬ್ಯಾಂಕ್ ಗ್ಯಾರಂಟೀ ಒದಗಿಸುವುದನ್ನು ಇ-ಬ್ಯಾಂಕ್ ಗ್ಯಾರಂಟೀ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಬ್ಯಾಂಕ್ ಗ್ಯಾರಂಟೀ ನಿಡುವ ಪ್ರಕ್ರಿಯೆ 3-4 ದಿನಗಳ ಬದಲಾಗಿ ಕೆಲವೇ ನಿಮಿಷಗಳಲ್ಲಿ ಮುಗಿದುಹೋಗಲಿದೆ. ಇ-ಬ್ಯಾಂಕ್ ಗ್ಯಾರಂಟೀ ಪ್ರಕ್ರಿಯೆ ಕೆಲವೊಂದು ಡಿಜಿಟಲ್ ಹಂತಗಳ ಮೂಲಕ ನಡೆಯುತ್ತದೆ. ಅವುಗಳು ಹೀಗಿವೆ; ಬ್ಯಾಂಕ್ ಗ್ಯಾರಂಟೀ ಅರ್ಜಿ, ಪ್ರಿವೀವ್ ಮತ್ತು ಕನ್ಫರ್ಮೇಶನ್, ಕಾಗದರಹಿತ ಇ-ಸ್ಟ್ಯಾಂಪಿಂಗ್, ಇ-ಸೈನಿಂಗ್, ಎನ್ಇಎಸ್ಎಲ್ ಪೋರ್ಟಲ್ನಲ್ಲಿ ಅಂತಿಮ ಹಂತದ ಬ್ಯಾಂಕ್ ಗ್ಯಾರಂಟೀ ಒದಗಿಸುವುದು, ಅಧಿಸೂಚನೆ ಹೊರಡಿಸುವುದು ಮತ್ತು ಗ್ರಾಹಕರಿಗೆ ಅಂತಿಮ ಬ್ಯಾಂಕ್ ಗ್ಯಾರಂಟೀ ಒದಗಿಸುವುದು.
ಇ-ಬ್ಯಾಂಕ್ ಗ್ಯಾರಂಟೀ ಬಿಡುಗಡೆ ಮಾಡಿದ ತಕ್ಷಣವೇ ಫಲಾನುಭವಿಗಳು ಎನ್ಇಎಸ್ಎಲ್ ಪೋರ್ಟಲ್ನಲ್ಲಿ ನೋಡಬಹುದಾಗಿದೆ. ಇದಕ್ಕಾಗಿ ಬ್ಯಾಂಕ್ನಿಂದ ಹೆಚ್ಚುವರಿ ದೃಢೀಕರಣ ಪಡೆಯುವುದು ಬೇಕಾಗಿಲ್ಲ.