Twitter Bird: ಪೀಠೋಪಕರಣ ಸೇರಿದಂತೆ ಟ್ವಿಟರ್ ಪ್ರಧಾನ ಕಚೇರಿ ವಸ್ತುಗಳ ಹರಾಜು; ಹಕ್ಕಿ ಪ್ರತಿಮೆಗೆ 1 ಲಕ್ಷ ಡಾಲರ್
ಟ್ವಿಟರ್ನ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಪ್ರಧಾನ ಕಚೇರಿಯ ಪೀಠೋಪಕರಣ, ಅಲಂಕಾರಿಕ ಉಪಕರಣಗಳು, ಅಡುಗೆ ಕೊಠಡಿಗೆ ಸಂಬಂಧಿಸಿದ ಉಪಕರಣಗಳು ಮತ್ತಿತರ ವಸ್ತುಗಳನ್ನು ಮಸ್ಕ್ ಹರಾಜಿಗಿಟ್ಟಿದ್ದಾರೆ. ಟ್ವಿಟರ್ ಹಕ್ಕಿಯ ಪ್ರತಿಮೆಯನ್ನೂ ಹರಾಜಿಗಿಟ್ಟಿದ್ದು, 1 ಲಕ್ಷ ಡಾಲರ್ ಬೆಲೆ ನಿಗದಿಪಡಿಸಿದ್ದಾರೆ
ವಾಷಿಂಗ್ಟನ್: ನಷ್ಟದಲ್ಲಿರುವ ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಮಾಲೀಕ ಎಲಾನ್ ಮಸ್ಕ್ (Elon Musk) ಈಗ ಕಂಪನಿಯ ಪ್ರಧಾನ ಕಚೇರಿಯಲ್ಲಿರುವ ವಸ್ತುಗಳನ್ನು ಹರಾಜು ಹಾಕಲು ಮುಂದಾಗಿದ್ದಾರೆ. 27 ಗಂಟೆ ಅವಧಿಯ ಆನ್ಲೈನ್ ಹರಾಜು ಪ್ರಕ್ರಿಯೆಯನ್ನು ಅವರು ಆರಂಭಿಸಿದ್ದು, ಟ್ವಿಟರ್ನ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಪ್ರಧಾನ ಕಚೇರಿಯ ಪೀಠೋಪಕರಣ, ಅಲಂಕಾರಿಕ ಉಪಕರಣಗಳು, ಅಡುಗೆ ಕೊಠಡಿಗೆ ಸಂಬಂಧಿಸಿದ ಉಪಕರಣಗಳು ಮತ್ತಿತರ ವಸ್ತುಗಳನ್ನು ಹರಾಜಿಗಿಟ್ಟಿದ್ದಾರೆ. ಟ್ವಿಟರ್ ಹಕ್ಕಿಯ ಪ್ರತಿಮೆಯನ್ನೂ ಹರಾಜಿಗಿಟ್ಟಿದ್ದು, 1 ಲಕ್ಷ ಡಾಲರ್ ಬೆಲೆ ನಿಗದಿಪಡಿಸಿದ್ದಾರೆ ಎಂದು ‘ಎಎಫ್ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ. ಒಟ್ಟು 631 ಉಪಕರಣಗಳನ್ನು ಹರಾಜು ಹಾಕಲಾಗುತ್ತಿದ್ದು, ಎಸ್ಪ್ರೆಸ್ಸೊ ಯಂತ್ರಗಳು, ಮೇಜುಗಳು, ಟಿವಿಗಳು, ಬೈಸಿಕಲ್, ಚಾರ್ಜಿಂಗ್ ಸ್ಟೇಷನ್ಗಳು, ಪಿಜ್ಜಾ ಓವನ್ ಕೂಡ ಸೇರಿವೆ.
ಈ ಹರಾಜು ಪ್ರಕ್ರಿಯೆಯಿಂದ ಹಣಕಾಸು ಸ್ಥಿತಿಗೆ ಬಂಧಿಸಿದಂತೆ ಏನೂ ಬದಲಾವಣೆಯಾಗದು ಎಂದು ಹೆರಿಟೇಜ್ ಗ್ಲೋಬಲ್ ಪಾರ್ಟ್ನರ್ಸ್ ಪ್ರತಿನಿಧಿಯೊಬ್ಬರು ಇತ್ತೀಚೆಗೆ ‘ಫಾರ್ಚೂನ್’ ನಿಯತಕಾಲಿಕೆಗೆ ತಿಳಿಸಿದ್ದರು. ಟ್ವಿಟರ್ ಪ್ರಧಾನ ಕಚೇರಿ ವಸ್ತುಗಳ ಹರಾಜು ವಿಚಾರವಾಗಿ ಆಕ್ಷನ್ ಹೌಸ್ಗಳು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಕಂಪನಿಯ ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿರುವ ಮಸ್ಕ್‌ಗೆ ಇದು ಉತ್ತಮ ನಿರ್ಧಾರ ಎನಿಸಬಹುದು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಮತ್ತೊಂದು ಕಚೇರಿಯ ವಿಳಾಸಕ್ಕೆ ಬಾಡಿಗೆ ಪಾವತಿಸಲು ವಿಫಲವಾಗಿರುವ ಬಗ್ಗೆ ಅವರು ಮೊಕದ್ದಮೆಯನ್ನೂ ಎದುರಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Twitter: ಆದಾಯಕ್ಕಾಗಿ ಯೂಸರ್ ನೇಮ್ ಮಾರಾಟಕ್ಕೆ ಮುಂದಾದ ಟ್ವಿಟರ್; ಹೆಚ್ಚಾಗುತ್ತಿದೆ ಹ್ಯಾಕ್ ಆಗುವ ಆತಂಕ
ಸಿಂಗಾಪುರ ಸೇರಿದಂತೆ ಏಷ್ಯಾ ಪೆಸಿಫಿಕ್ ಪ್ರದೇಶದ ವಿವಿಧೆಡೆ ಇರುವ ಕಚೇರಿಗಳನ್ನೂ ಉಳಿಸಿಕೊಳ್ಳುವುದು ಮಸ್ಕ್ ಅವರಿಗೆ ಸಾಧ್ಯವಾಗಿಲ್ಲ. ಈ ಪ್ರದೇಶಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡಲಾಗಿದೆ ಎಂದು ಇತ್ತೀಚೆಗೆ ‘ಬ್ಲೂಮ್ಬರ್ಗ್’ ವರದಿ ಮಾಡಿತ್ತು.
ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಸ್ಕ್ ಅವರು ಕಂಪನಿ ಅರ್ಧದಷ್ಟು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದರು. ಆಮೇಲೆ ಬ್ಲೂಟಿಕ್ಗೆ ಶುಲ್ಕ ವಿಧಿಸಲು ಆರಂಭಿಸಿ ವಾಪಸ್ ಪಡೆದಿದ್ದರು. ಮತ್ತೆ ನಿರ್ಧಾರವನ್ನು ಜಾರಿಗೊಳಿಸಿದ್ದರು. ಟ್ವಿಟರ್ ಸಿಇಒ ಹುದ್ದೆಯಲ್ಲಿ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಟ್ವಿಟರ್ನಲ್ಲಿ ಪೋಲ್ ನಡೆಸಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಹುದ್ದೆ ತ್ಯಜಿಸುವ ಬಗ್ಗೆ ಸುಳಿವು ನೀಡಿದ್ದರು. ಹೀಗೆ, ಟ್ವಿಟರ್ ಖರೀದಿಸಿದ ಬಳಿಕ ಮಸ್ಕ್ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಆದಾಯ ವೃದ್ಧಿಸಿಕೊಳ್ಳಲೆಂದು ‘ಯೂಸರ್ ನೇಂ’ಗಳನ್ನು ಹರಾಜಿಗೆ ಇರಿಸಲು ಟ್ವಿಟರ್ ಮುಂದಾಗಿತ್ತು ಎಂಬ ಸಂಗತಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.