
ನವದೆಹಲಿ, ಮೇ 21: ಸಾಲದ ಮೇಲೆ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಪಡೆದು ಅದರ ಇಎಂಐ ಕಟ್ಟಲು ವಿಫಲರಾದರೆ ಅಂಥವರ ಗ್ಯಾಜೆಟ್ ಅನ್ನು ನಿಷ್ಕ್ರಿಯಗೊಳಿಸುವ ಕಾನೂನಾತ್ಮಕ ಅಧಿಕಾರವನ್ನು ಸಾಲಗಾರರಿಗೆ ನೀಡಲು ಆರ್ಬಿಐ (RBI) ಯೋಜಿಸಿದೆ. ಸಾಲ ವಸೂಲಾತಿ ಸಂಬಂಧ ಆರ್ಬಿಐ ಬಿಡುಗಡೆ ಮಾಡಿರುವ ಪರಿಷ್ಕೃತ ಕರಡು ನಿರ್ದೇಶನಗಳಲ್ಲಿ ಇಂಥದ್ದೊಂದು ಪ್ರಸ್ತಾಪ ಇದೆ. ಬ್ಯಾಂಕುಗಳು, ಎನ್ಬಿಎಫ್ಸಿಗಳು ಮೊದಲಾದ ಸಾಲ ನೀಡುಗರ ಅಭಿಪ್ರಾಯ ಆಲಿಸಿದ ಬಳಿಕ ಆರ್ಬಿಐ ಈ ಪ್ರಸ್ತಾಪವನ್ನು ತನ್ನ ಕರಡು ನಿರ್ದೇಶಗಳಲ್ಲಿ ಸೇರಿಸಿದೆ.
2026ರ ಫೆಬ್ರುವರಿ 12ರಂದು ಆರ್ಬಿಐ ಕರಡು ತಿದ್ದುಪಡಿ ನಿರ್ದೇಶಗಳನ್ನು ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಹಣಕಾಸು ಸಂಸ್ಥೆಗಳು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ಗಳನ್ನು ನಿಷ್ಕ್ರಿಯಗೊಳಿಸುವಂತಹ ಕಾನೂನಾತ್ಮಕ ಅಧಿಕಾರ ಒದಗಿಸಬೇಕು ಎಂದು ಕೋರಿಕೊಂಡ ಹಿನ್ನೆಲೆಯಲ್ಲಿ ಪರಿಷ್ಕೃತ ಕರಡು ನಿರ್ದೇಶನಗಳನ್ನು ಮೇ 20ರಂದು ಬಿಡುಗಡೆ ಮಾಡಿದೆ. ಇಎಂಐ ಮೇಲೆ ಸ್ಮಾರ್ಟ್‌ಫೋನ್, ಲ್ಯಾಪ್ಟಾಪ್ಗಳನ್ನು ಖರೀದಿಸಿ ಸಾಲ ಮರುಪಾವತಿ ಮಾಡದೇ ಇರುವ ಜನರ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ ಅದಕ್ಕೆ ಕಡಿವಾಣ ಹಾಕಲು ಕಾನೂನು ಕಠಿಣಗೊಳಿಸುವ ಇರಾದೆ ಸರ್ಕಾರದ್ದಾಗಿದೆ. ಹೀಗಾಗಿ, ಈ ಕ್ರಮ.
ಇದನ್ನೂ ಓದಿ: ಬೆಂಗಳೂರಲ್ಲಿ ತರಕಾರಿ ಮಾರುವ ಹುಡುಗನ ತಲೆಯಲ್ಲಿ ಎಐ ಟೂಲ್; ಗಂಟೆಗೆ 350 ರೂ ಎಕ್ಸ್ಟ್ರಾ ಇನ್ಕಮ್; ಬೆರಗಾದ ನೆಟ್ಟಿಗರು
ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಹಾಗೂ ಇತರ ಗ್ಯಾಜೆಟ್‌ಗಳನ್ನು ಸಾಲವಾಗಿ ಪಡೆದಿರುವವರು, ಮರುಪಾವತಿ ಮಾಡದೇ ಇದ್ದರೆ ಅಥವಾ ಇಎಂಐ ಕಟ್ಟದೇ ಇದ್ದರೆ, ಸಾಲ ಕೊಟ್ಟ ಸಂಸ್ಥೆಗಳು ಆ ಸಾಧನಗಳನ್ನು ಭಾಗಶಃ ಲಾಕ್ ಮಾಡಲು ಕಾನೂನಿನಲ್ಲಿ ಅನುಮತಿಸಲಾಗುತ್ತದೆ ಎನ್ನುವ ಪ್ರಸ್ತಾಪ ಇದೆ.
ಅಂದರೆ, ಗ್ಯಾಜೆಟ್ಗಳಿಗೆ ಫೈನಾನ್ಸಿಂಗ್ ಮಾಡುವಾಗ ಅದಕ್ಕೆ ವಿಶೇಷ ಸಾಫ್ಟ್ವೇರ್ ಹಾಕಲಾಗಬಹುದು. ಆ ಸಾಫ್ಟ್ವೇರ್ ಬಳಸಿ ಸಾಲ ನೀಡುಗರು ಡಿವೈಸ್ ಅನ್ನು ನಿರ್ಬಂಧಿಸಬಹುದು. ಇಂಥ ಕೆಲಸ ಮಾಡಲು ಕಾನೂನಿನಲ್ಲಿ ಅವಕಾಶ ಕೊಡಬೇಕು ಎಂಬುದು ಹಣಕಾಸು ಸಂಸ್ಥೆಗಳು ಮಾಡುತ್ತಿರುವ ಮನವಿ. ಆರ್ಬಿಐ ಸದ್ಯ ಈ ಮನವಿಯನ್ನು ಪರಿಗಣಿಸಿ, ತನ್ನ ಕರಡು ನಿರ್ದೇಶನಗಳಲ್ಲಿ ಸೇರಿಸಿಕೊಂಡಿದೆ.
ಇದನ್ನೂ ಓದಿ: ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ
ಆದರೆ, ಒಬ್ಬ ವ್ಯಕ್ತಿಯ ಫೋನ್ ಅನ್ನು ನಿರ್ಬಂಧಿಸುವ ಅವಕಾಶ ನೀಡಿದರೆ ಅದು ಸಂಕೀರ್ಣ ಸಮಸ್ಯೆ ತರಬಹುದು ಎನ್ನುವ ಅಭಿಪ್ರಾಯಗಳಿವೆ. ಉದಾಹರಣೆಗೆ, ಸ್ಮಾರ್ಟ್‌ಫೋನ್ ಮೇಲೆ ಒಬ್ಬ ವ್ಯಕ್ತಿ ಬ್ಯಾಂಕಿಂಗ್, ಸಂವಹನ, ಒಟಿಪಿ ಇತ್ಯಾದಿ ಕಾರ್ಯಕ್ಕೆ ಅವಲಂಬಿತವಾಗಿರುತ್ತಾನೆ. ಏಕಾಏಕಿ ನಿರ್ಬಂಧ ಹಾಕಿದಾಗ ಅದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ