ಉದ್ಯೋಗಿಗಳ ಪಿಎಫ್ ಖಾತೆಗೆ ಹಣ ಹಾಕದ ಸಂಸ್ಥೆಗಳ ಮೇಲೆ ಕ್ರಮ; ಇಪಿಎಫ್ಒದಿಂದ ಸ್ಪೆಷಲ್ ಡ್ರೈವ್
EPFO Special Drive: ಬಹಳಷ್ಟು ಸಂಸ್ಥೆಗಳು ಉದ್ಯೋಗಿಗಳ ಪಿಎಫ್ ಖಾತೆಗಳಿಗೆ ನಿಯಮಿತವಾಗಿ ಹಣ ತುಂಬಿಸುತ್ತಿಲ್ಲ. ಸಾಕಷ್ಟು ಬಾಕಿ ಉಳಿದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಪಿಎಫ್ಒದಿಂದ ವಿಶೇಷ ಅಭಿಯಾನ ನಡೆಯುತ್ತಿದೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆಯುವ ಈ ಸ್ಪೆಷಲ್ ಡ್ರೈವ್ನಲ್ಲಿ ಪಿಎಫ್ ಹಣ ಬಾಕಿ ಉಳಿಸಿಕೊಂಡ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬಹುದು.
ನವದೆಹಲಿ, ನವೆಂಬರ್ 13: ಉದ್ಯೋಗಿಗಳ ಇಪಿಎಫ್ ಖಾತೆಗಳಿಗೆ ಹಣ ಹಾಕದ ಸಂಸ್ಥೆಗಳ (employers) ಮೇಲೆ ಕ್ರಮ ಕೈಗೊಳ್ಳಲು ಇಪಿಎಫ್ಒ ಮುಂದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ಒ ಮುಂದಿನ ತಿಂಗಳಿಂದ ಸ್ಪೆಷಲ್ ಡ್ರೈವ್ (EPFO special drive) ನಡೆಸಲಿದೆ. ಡಿಸೆಂಬರ್ನಿಂದ ಶುರುವಾಗಿ 2024ರ ಫೆಬ್ರವರಿವರೆಗೂ ನಡೆಯುವ ಈ ಡ್ರೈವ್ನಲ್ಲಿ ಸಂಸ್ಥೆಗಳಿಂದ ಪಿಎಫ್ ಬಾಕಿ ಹಣವನ್ನು ವಸೂಲಿ ಮಾಡಲಾಗುತ್ತದೆ. ನವೆಂಬರ್ 10ರಂದು ಚೆನ್ನೈ ವಿಭಾಗದ ಪಿಐಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಸಂಗತಿಯನ್ನು ತಿಳಿಸಲಾಗಿದೆ.
‘ಇಪಿಎಫ್ಒಗೆ ಸಬ್ಸ್ಕ್ರೈಬ್ ಆಗಿರುವ ಎಲ್ಲಾ ಸಂಸ್ಥೆಗಳು ಇಪಿಎಫ್ಗೆ ನೀಡಬೇಕಿರುವ ಬಾಕಿ ಹಣವನ್ನು ಸಲ್ಲಿಸಬೇಕು ಎಂದು ಈ ಮೂಲಕ ಸಲಹೆ ನೀಡಲಾಗುತ್ತಿದೆ,’ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಇಪಿಎಫ್ ಹಣ ತುಂಬಿಸದಿದ್ದರೆ ಸಂಸ್ಥೆಯ ಚಿರಾಸ್ತಿ, ಚರಾಸ್ತಿ, ಬ್ಯಾಂಕ್ ಖಾತೆ ಇತ್ಯಾದಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸಂಸ್ಥೆಯ ಮುಖ್ಯಸ್ಥರನ್ನು ಬಂಧಿಸಲಾಗುತ್ತದೆ ಎಂದೂ ಈ ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: PF Updates: ಪಿಎಫ್ ಖಾತೆಗಳಿಗೆ ಬಡ್ಡಿ ಹಣ ವರ್ಗಾವಣೆ ಶುರು; ನಿಮ್ಮ ಖಾತೆಗೆ ಬಂದಿದೆಯಾ ಬಡ್ಡಿ?
ಬಹಳಷ್ಟು ಸಂಸ್ಥೆಗಳು ಉದ್ಯೋಗಿಗಳ ಪಿಎಫ್ ಖಾತೆಗಳಿಗೆ ನಿಯಮಿತವಾಗಿ ಹಣ ತುಂಬಿಸುತ್ತಿಲ್ಲ. ಸಾಕಷ್ಟು ಬಾಕಿ ಉಳಿದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಪಿಎಫ್ಒದಿಂದ ವಿಶೇಷ ಅಭಿಯಾನ ನಡೆಯುತ್ತಿದೆ. ಇಪಿಎಫ್ಒದ ವಿವಿಧ ಪ್ರಾದೇಶಿಕ ವಿಭಾಗಗಳು ವಾರಕ್ಕೊಮ್ಮೆ ಈ ಅಭಿಯಾನದ ಪ್ರಗತಿ ಬಗ್ಗೆ ವರದಿ ನೀಡಬೇಕೆಂದೂ ಸೂಚಿಸಲಾಗಿದೆ.
ಭಾರತದಲ್ಲಿ ಇಪಿಎಫ್ಒಗೆ 6 ಕೋಟಿ ಸಬ್ಸ್ಕ್ರೈಬರ್ಗಳಿದ್ದಾರೆ. ಒಟ್ಟಾರೆ 12 ಲಕ್ಷಕೋಟಿ ರೂ ನಿಧಿ ಅದರಲ್ಲಿದೆ. ಮೂರು ಇಪಿಎಫ್ ಸ್ಕೀಮ್ಗಳ ಮೂಲಕ ಪ್ರಾವಿಡೆಂಟ್ ಫಂಡ್, ಪೆನ್ಷನ್ ಮತ್ತು ಇನ್ಷೂರೆನ್ಸ್ ಸೇವೆಗಳನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: ಐದು ವರ್ಷದೊಳಗೆ ಪಿಎಫ್ ಹಣ ಹಿಂಪಡೆದರೆ ತೆರಿಗೆ ಕಡಿತ; ಈ ಇಪಿಎಫ್ ನಿಯಮಗಳು ತಿಳಿದಿರಲಿ
ಸರ್ಕಾರ ಎಲ್ಲಾ ಪಿಎಫ್ ಖಾತೆಗಳಲ್ಲಿರುವ ಹಣಕ್ಕೂ ವರ್ಷಕ್ಕೊಮ್ಮೆ ಬಡ್ಡಿ ಹಣ ಸೇರಿಸುತ್ತದೆ. ಈ ವರ್ಷ ಶೇ. 8.15ರಷ್ಟು ಬಡ್ಡಿ ನಿಗದಿಯಾಗಿದೆ. ಶೀಘ್ರದಲ್ಲೇ ಬಡ್ಡಿಹಣವನ್ನು ಪಿಎಫ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ