ರೇಮಂಡ್ ಸಂಸ್ಥೆ ಛೇರ್ಮನ್ ಗೌತಮ್ ಸಿಂಘಾನಿಯಾ, ನವಾಜ್ ಮೋದಿ 32 ವರ್ಷದ ದಾಂಪತ್ಯ ಅಂತ್ಯ; ನಮ್ಮಿಬ್ಬರದ್ದೀಗ ಬೇರೆ ದಾರಿ ಎಂದ ಸಿಂಘಾನಿಯಾ

Raymond Chairman Gautam Singhania Divorce: ರೇಮಂಡ್ ಲಿ ಸಂಸ್ಥೆಯ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಗೌತಮ್ ಸಿಂಘಾನಿಯಾ ಮತ್ತು ನವಾಜ್ ಮೋದಿ ಅವರ 32 ವರ್ಷ ದಾಂಪತ್ಯ ಅಂತ್ಯ ಕಂಡಿದೆ. ನವಾಜ್ ಅವರಿಂದ ಬೇರ್ಪಡುತ್ತಿರುವುದಾಗಿ ಸ್ವತಃ ಗೌತಮ್ ಸಿಂಘಾನಿಯಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರೇಮಂಡ್ ಸಂಸ್ಥೆ ಛೇರ್ಮನ್ ಗೌತಮ್ ಸಿಂಘಾನಿಯಾ, ನವಾಜ್ ಮೋದಿ 32 ವರ್ಷದ ದಾಂಪತ್ಯ ಅಂತ್ಯ; ನಮ್ಮಿಬ್ಬರದ್ದೀಗ ಬೇರೆ ದಾರಿ ಎಂದ ಸಿಂಘಾನಿಯಾ
ಗೌತಮ್ ಸಿಂಘಾನಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2023 | 4:41 PM

ನವದೆಹಲಿ, ನವೆಂಬರ್ 13: ಖ್ಯಾತ ಕ್ಲಾಥಿಂಗ್ ಬ್ರ್ಯಾಂಡ್ ರೇಮಂಡ್ ಲಿ ಸಂಸ್ಥೆಯ ಛೇರ್ಮನ್ ಮತ್ತು ಎಂಡಿ ಗೌತಮ್ ಸಿಂಘಾನಿಯಾ (Gautam Singhania) ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ದೀಪಾವಳಿ ಹಬ್ಬದ ದಿನದಂದು (ನ. 13) ಅವರು ತಮ್ಮ ಪತ್ನಿ ನವಾಜ್ ಮೋದಿ ಅವರಿಂದ ಬೇರ್ಪಟ್ಟಿರುವ ವಿಚಾರವನ್ನು ಪ್ರಕಟಿಸಿದ್ದಾರೆ. ‘ನವಾಜ್ ಮತ್ತು ನಾನು ಇಬ್ಬರೂ ಈಗಿನಿಂದ ಬೇರೆ ಬೇರೆ ಹಾದಿಗಳಲ್ಲಿ ಸಾಗುತ್ತೇವೆ,’ ಎಂದು ಸಿಂಘಾನಿಯಾ ತಿಳಿಸಿದ್ದಾರೆ. ಇದರೊಂದಿಗೆ, ಅವರ ಮೂರು ದಶಕಗಳ ದಾಂಪತ್ಯ ಮುರಿದುಬಿದ್ದಂತಾಗಿದೆ. 34 ವರ್ಷದ ಹಿಂದೆ, 1999ರಲ್ಲಿ ಅವರಿಬ್ಬರ ವಿವಾಹವಾಗಿತ್ತು. 32 ವರ್ಷ ಕಾಲ ಅವರ ದಾಂಪತ್ಯ ಸಾಗಿತ್ತು.

‘ಹಿಂದಿನ ದೀಪಾವಳಿಯಂತೆ ಈ ಬಾರಿ ಇರುವುದಿಲ್ಲ. 32 ವರ್ಷ ಕಾಲ ದಂಪತಿಯಾಗಿ ಒಟ್ಟಿಗೆ ಇದ್ದೆವು. ಪೋಷಕರಾಗ ಒಟ್ಟಿಗೆ ಬೆಳೆದೆವು. ಪರಿಸ್ಪರರಿಗೆ ಶಕ್ತಿಯಾಗಿ ನಿಂತಿದ್ದೆವು. ಬದ್ಧತೆ, ನಂಬಿಕೆಯಿಂದ ಮುಂದುವರಿದೆವು. ಇಬ್ಬರು ಅದ್ಭುತ ಕುಡಿಗಳು ನಮ್ಮ ಬದುಕಿನಲ್ಲಿ ಮೇಳೈಸಿದವು.

‘ಇಲ್ಲಿಂದ ನಾನು ಮತ್ತು ನವಾಜ್ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿ ಸಾಗುತ್ತೇವೆ ಎಂದು ನಂಬಿದ್ದೇನೆ. ಅವಳಿಂದ ದೂರ ಹೋಗುತ್ತಿದ್ದೇನೆ. ನಮ್ಮ ಎರಡು ಮುತ್ತುಗಳಾದ ನಿಹಾರಿಕಾ ಮತ್ತು ನೀಸಾ ಅವರಿಗೆ ಒಳಿತಾಗುವ ರೀತಿಯಲ್ಲಿ ಇಬ್ಬರೂ ಮುಂದುವರಿಯುತ್ತೇವೆ,’ ಎಂದು ಗೌತಮ್ ಸಿಂಘಾನಿಯಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೈಜೂಸ್​ನ ಒಂದು ಭಾಗದ ಸಾಲ ತೀರಿಸಿದ ಮಣಿಪಾಲ್ ಸಂಸ್ಥೆಯ ರಂಜನ್ ಪೈ; ಅದಕ್ಕೆ ಬದಲಾಗಿ ಆಕಾಶ್ ಬೋರ್ಡ್​ನಲ್ಲಿ ಸದಸ್ಯತ್ವ

ಗಾಳಿ ಸುದ್ದಿಗೆ ಬೇಸರ…

ಗೌತಮ್ ಸಿಂಘಾನಿಯಾ ತಮ್ಮ ಟ್ವೀಟ್​ನಲ್ಲಿ ಗಾಳಿ ಸುದ್ದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಡಕು ಬಯಸುವವರಿಂದ ತಮ್ಮ ಜೀವನದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವ ಘಟನೆಗಳು ಇತ್ತೀಚೆಗೆ ನಡೆದಿವೆ ಎಂದು ರೇಮಂಡ್ಸ್ ಸಂಸ್ಥೆಯ ಮುಖ್ಯಸ್ಥರು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಆದರೆ, ಅವರಿಬ್ಬರ ದಾಂಪತ್ಯ ಯಾವ ಕಾರಣಕ್ಕೆ ಅಂತ್ಯಗೊಂಡಿತು ಎಂಬುದು ಗೊತ್ತಾಗಿಲ್ಲ. ಗೌತಮ್ ಸಿಂಘಾನಿಯಾ ಅವರಿಗೆ ಈಗ 58 ವರ್ಷ. 1999ರಲ್ಲಿ ವಿವಾಹವಾದಾಗ ನವಾಜ್ ಮೋದಿ ಅವರಿಗೆ 29 ವರ್ಷ, ಸಿಂಘಾನಿಯಾಗೆ 34 ವರ್ಷ ವಯಸ್ಸಾಗಿತ್ತು. ಮದುವೆಗೆ ಮುನ್ನ 8 ವರ್ಷ ಅವರಿಬ್ಬರ ಪರಿಚಯವಿತ್ತು. ಸ್ನೇಹವು ಪ್ರೇಮವಾಗಿ ಇಬ್ಬರೂ ಮದುವೆಯಾಗಿದ್ದರು.

ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಪಡೆದ ರೇಮಂಡ್

ತಮ್ಮ ವಿಚ್ಛೇದನ ಸುದ್ದಿಯನ್ನು ತಿಳಿಸುವ ಮುನ್ನ ಗೌತಮ್ ಸಿಂಘಾನಿಯಾ ಅವರು ರೇಮಂಡ್ಸ್ ಸಂಸ್ಥೆಯ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚೀನಾ ತರಹ ಬೇಡ; ನಿಯಂತ್ರಣ ಬಿಟ್ಟರೆ ಹಣ ಹರಿದುಬರುತ್ತೆ: ಭಾರತಕ್ಕೆ ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಸಲಹೆ

ಮುಂಬೈ ಮೆಟ್ರೋಪೊಲಿಟನ್ ಪ್ರದೇಶದಲ್ಲಿ ತಮ್ಮ ಸಂಸ್ಥೆಗೆ 3 ಹೊಸ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಸಿಕ್ಕಿದ್ದು, ಅದರಿಂದ ಬರುವ ಆದಾಯ 5,000 ಕೋಟಿ ರೂ ಎಂದು ಸಿಂಘಾನಿಯಾ ಹೇಳಿಕೊಂಡಿದ್ದಾರೆ.

ಪ್ರಸಿದ್ಧ ಉಡುಪಿನ ಬ್ರ್ಯಾಂಡ್ ಆಗಿದ್ದ ರೇಮಂಡ್ಸ್ ಸಂಸ್ಥೆ ಈಗ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಉದ್ದಿಮೆಗಳನ್ನು ವ್ಯಾಪಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ