ಚೀನಾ ತರಹ ಬೇಡ; ನಿಯಂತ್ರಣ ಬಿಟ್ಟರೆ ಹಣ ಹರಿದುಬರುತ್ತೆ: ಭಾರತಕ್ಕೆ ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಸಲಹೆ

Mark Mobius Advice to India: ಭಾರತ ತನ್ನ ವಿದೇಶ ವಿನಿಮಯ ಮಾರುಕಟ್ಟೆಯನ್ನು ಇನ್ನಷ್ಟು ಮುಕ್ತಗೊಳಿಸಿದರೆ ವಿದೇಶೀ ಹೂಡಿಕೆಗಳನ್ನು ಹೆಚ್ಚು ಆಕರ್ಷಿಸಬಹುದು ಎಂದು ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಅಭಿಪ್ರಾಯಪಟ್ಟಿದ್ದಾರೆ. ಎನ್​ಆರ್​ಐಗಳು ಹಣವನ್ನು ಒಳಗೆ ತರಲು ಬಯಸುತ್ತಾರೆ. ಆದರೆ, ಸರ್ಕಾರ ನಿಯಂತ್ರಿಸುತ್ತದೆ. ಒಂದು ವೇಳೆ ಸರ್ಕಾರ ಈ ಮಾರುಕಟ್ಟೆಯನ್ನು ಮುಕ್ತವಾಗಿ ಬಿಟ್ಟರೆ ಸಾಕಷ್ಟು ಹಣದ ಹರಿವು ಬರುತ್ತದೆ ಎಂದು ನಾನು ಗ್ಯಾರಂಟಿ ಕೊಡುತ್ತೇನೆ. ಇದು ಕೇವಲ ಸಾಂಸ್ಥಿಕ ಹೂಡಿಕೆದಾರರಿಗೆ ಮಾತ್ರವಲ್ಲ, ವೈಯಕ್ತಿಕ ಹೂಡಿಕೆದಾರರಿಗೂ ಆಗುತ್ತದೆ ಎಂದಿದ್ದಾರೆ ಮೋಬಿಯಸ್.

ಚೀನಾ ತರಹ ಬೇಡ; ನಿಯಂತ್ರಣ ಬಿಟ್ಟರೆ ಹಣ ಹರಿದುಬರುತ್ತೆ: ಭಾರತಕ್ಕೆ ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಸಲಹೆ
ಮಾರ್ಕ್ ಮೋಬಿಯಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2023 | 2:49 PM

ಭಾರತ ತನ್ನ ವಿದೇಶ ವಿನಿಮಯ ಮಾರುಕಟ್ಟೆಯನ್ನು ಇನ್ನಷ್ಟು ಮುಕ್ತಗೊಳಿಸಿದರೆ ವಿದೇಶೀ ಹೂಡಿಕೆಗಳನ್ನು ಹೆಚ್ಚು ಆಕರ್ಷಿಸಬಹುದು ಎಂದು ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ (Mark Mobius) ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ಮುಕ್ತವಾಗಿ ಬಿಟ್ಟಿದ್ದಕ್ಕೆ ಅಮೆರಿಕಕ್ಕೆ ಹಣ ಹೇಗೆ ಹರಿದುಬರುತ್ತದೆ ನೋಡಿ ಎಂದು ಹೇಳಿರುವ ಅವರು, ಚೀನಾದ ರೀತಿ ಮಾರುಕಟ್ಟೆ ನಿಯಂತ್ರಿಸಬಾರದು ಎಂದು ಭಾರತಕ್ಕೆ ಕಿವಿ ಮಾತು ತಿಳಿಸಿದ್ದಾರೆ. ಮೋಬಿಯಸ್ ಕ್ಯಾಪಿಟಲ್ ಪಾರ್ಟ್ನರ್ಸ್ ಸಂಸ್ಥೆಯ ಸಂಸ್ಥಾಪಕರೂ ಆದ ಮಾರ್ಕ್ ಮೋಬಿಯಸ್, ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯ ಸಂದರ್ಶನವೊಂದರಲ್ಲಿ ಕೆಲ ಪ್ರಮುಖ ಮಾರುಕಟ್ಟೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಫಾರೀನ್ ಎಕ್ಸ್​ಚೇಂಜ್ ಮಾರುಕಟ್ಟೆಯನ್ನು ಮುಕ್ತಗೊಳಿಸಿ. ಉದಾಹರಣೆಗೆ, ಜನರು ಹಣ ತೆಗೆದುಕೊಂಡು ಬರಲು ಮತ್ತು ತೆಗೆದುಕೊಂಡು ಹೋಗಲು ಅವಕಾಶ ಕೊಡಿ. ಎಕ್ಸ್​ಚೇಂಜ್ ದರದ ನಿಯಂತ್ರಣವನ್ನು ಕಳೆದುಕೊಳ್ಳಲು ಆರ್​ಬಿಐ ಇಷ್ಟಪಡದೇ ಇರಬಹುದು. ಆದರೆ, ಭಾರತ ದೊಡ್ಡ ಆರ್ಥಿಕತೆಯಾದ್ದರಿಂದ ಈ ಹರಿವನ್ನು ತಡೆದುಕೊಳ್ಳಬಲ್ಲುದು. ಎಲ್ಲವನ್ನೂ ನಿಯಂತ್ರಿಸುವ ಚೀನಾ ರೀತಿ ಆಗಬಾರದು. ನೀವು ಬಾಗಿಲು ತೆರೆದರೆ ಹಣ ಹರಿದುಬರುತ್ತದೆ. ನೀವು ಬಾಗಿಲು ಬಂದ್ ಮಾಡಿದರೆ ಹಣ ಬರುವುದಿಲ್ಲ. ಇದು ಸೈಕಾಲಜಿ.

ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?

‘ಎನ್​ಆರ್​ಐಗಳು ಹಣವನ್ನು ಒಳಗೆ ತರಲು ಬಯಸುತ್ತಾರೆ. ಆದರೆ, ಸರ್ಕಾರ ನಿಯಂತ್ರಿಸುತ್ತದೆ. ಒಂದು ವೇಳೆ ಸರ್ಕಾರ ಈ ಮಾರುಕಟ್ಟೆಯನ್ನು ಮುಕ್ತವಾಗಿ ಬಿಟ್ಟರೆ ಸಾಕಷ್ಟು ಹಣದ ಹರಿವು ಬರುತ್ತದೆ ಎಂದು ನಾನು ಗ್ಯಾರಂಟಿ ಕೊಡುತ್ತೇನೆ. ಇದು ಕೇವಲ ಸಾಂಸ್ಥಿಕ ಹೂಡಿಕೆದಾರರಿಗೆ ಮಾತ್ರವಲ್ಲ, ವೈಯಕ್ತಿಕ ಹೂಡಿಕೆದಾರರಿಗೂ ಆಗುತ್ತದೆ.

‘ನನ್ನ ವೈಯಕ್ತಿಕ ಹೂಡಿಕೆಗಳು ಅಮೆರಿಕದಲ್ಲಿವೆ. ನನಗೆ ಭಾರತದಲ್ಲಿ ನೇರವಾಗಿ ಹೂಡಿಕೆ ಮಾಡಲು ಯಾಕೆ ಸಾಧ್ಯವಿಲ್ಲ? ಅಮೆರಿಕದ ಮಾರುಕಟ್ಟೆಯಲ್ಲಿ ನಾನು ಭಾರತೀಯ ಫಂಡ್ ಖರೀದಿಸಬೇಕು. ಭಾರತದಲ್ಲಿ ನೇರವಾಗಿ ಖರೀದಿಸಬೇಕೆಂದರೆ ವಿದೇಶ ವಿನಿಯಮ ನಿಯಂತ್ರಣ ಅಡ್ಡಿ ಆಗುತ್ತದೆ. ಇದು ಈಗ ಸಮಸ್ಯೆಯಾಗಿರುವುದು. ಅಮೆರಿಕ ಮುಕ್ತವಾಗಿರುವುದರಿಂದ ಎಲ್ಲಾ ಹಣವನ್ನೂ ಪಡೆಯುತ್ತದೆ. ಭಾರತದಲ್ಲಿ 120 ಕೋಟಿ ಜನರಿದ್ದಾರೆ. ಅವರಿಗ್ಯಾಕೆ ಪೂರ್ಣವಾಗಿ ಮಾರುಕಟ್ಟೆ ಮುಕ್ತಗೊಳಿಸಲು ಆಗುವುದಿಲ್ಲ. ಇದು ಮೋದಿ ಅವರಿಗೆ ಅರಿವಾಗಿರಬಹುದು. ಅದಕ್ಕೆ ಅವರು ಗುಜರಾತ್​ನಲ್ಲಿ ಈ ವ್ಯವಸ್ಥೆ (ಗಿಫ್ಟ್ ಸಿಟಿ) ತಂದಿದ್ದಾರೆ,’ ಎಂದು ಮಾರ್ಕ್ ಮೋಬಿಯಸ್ ಹೇಳಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಭಾರತದ ಹಣದುಬ್ಬರ ಶೇ. 4.80ಕ್ಕೆ ಇಳಿದಿರಬಹುದು: ರಾಯ್ಟರ್ಸ್ ಸಮೀಕ್ಷೆಯಲ್ಲಿ ಅನಿಸಿಕೆ

ಚೀನಾಗೆ ಹೋಲಿಸಿದರೆ ಭಾರತ ಹೇಗೆ?

ಚೀನಾ ಬಂಡವಾಳಶಾಯಿ ಆರ್ಥಿಕತೆ ಹೊಂದಿದ್ದರಿಂದ ಹೂಡಿಕೆಗೆ ಉತ್ತಮ ಸ್ಥಳವಾಗಿತ್ತು. ಈಗ ಬದಲಾಗುತ್ತಿದೆ. ಚೀನಾ ಕಮ್ಯೂನಿಸ್ಟ್ ನಿಯಂತ್ರಣಕ್ಕೆ ಜಾರುತ್ತಿದೆ. ಅದು ಈಗ ಮಾರುಕಟ್ಟೆಯಲ್ಲಿ ಭಯ ನೆಲಸುವಂತೆ ಮಾಡಿದೆ. ಆದರೆ, ಭಾರತದ್ದು ಮುಕ್ತ ಮಾರುಕಟ್ಟೆ ಮತ್ತು ಮುಕ್ತ ಆರ್ಥಿಕತೆ. ಇಂಥ ಸ್ಥಿತಿಯಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆ ಸಿಗುತ್ತದೆ ಎಂದು ಅಮೆರಿಕದ ಹೂಡಿಕೆದಾರರಾದ ಮೋಬಿಯಸ್ ತಿಳಿಸಿದ್ದಾರೆ.

(ಕೃಪೆ: ಇಂಡಿಯನ್ ಎಕ್ಸ್​ಪ್ರೆಸ್)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ