AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮನ್ನು ಕೆಲಸದಿಂದ ತೆಗೆದು ಕಡಿಮೆ ಸಂಬಳಕ್ಕೆ ಭಾರತೀಯರನ್ನು ಕರೆಸಲಾಗುತ್ತಿದೆ: ಟಿಸಿಎಸ್ ಮೇಲೆ ಉರಿದುಬೀಳುತ್ತಿರುವ ಅಮೆರಿಕನ್ನರು

TCS faces Local Americans Ire: ಅಮೆರಿಕದಲ್ಲಿರುವ ಟಿಸಿಎಸ್ ಕಚೇರಿಯಲ್ಲಿ ಸ್ಥಳೀಯ ಅಮೆರಿಕನ್ನರನ್ನು ಕೆಲಸದಿಂದ ತೆಗೆದು ಅವರ ಜಾಗಕ್ಕೆ ಕಡಿಮೆ ಅನುಭವಿ ಮತ್ತು ಚಿಕ್ಕ ವಯಸ್ಸಿನ ಭಾರತೀಯರನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಉದ್ಯೋಗಿಗಳು ದೂರಿದ್ದಾರೆ. ವಯಸ್ಸು ಮತ್ತು ಜನಾಂಗದ ಆಧಾರದ ಮೇಲೆ ಟಿಸಿಎಸ್ ಮ್ಯಾನೇಜ್ಮೆಂಟ್ ತಾರತಮ್ಯ ಮಾಡುತ್ತಿದೆ. ಹೆಚ್ಚು ಪರಿಣತಿ ಇದ್ದರೂ ವಯಸ್ಸು ಹೆಚ್ಚೆಂಬ ಕಾರಣಕ್ಕೆ ಪ್ರಾಜೆಕ್ಟ್​ಗಳಿಂದ ಕೈ ಬಿಡಲಾಗುತ್ತಿದೆ, ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಈಕ್ವಲ್ ಎಂಪ್ಲಾಯ್ಮೆಂಟ್ ಆಪೋರ್ಚುನಿಟಿ ಕಮಿಷನ್​ಗೆ ನೀಡಿದ ದೂರಿನಲ್ಲಿ ಆರೋಪ ಮಾಡಲಾಗಿದೆ.

ನಮ್ಮನ್ನು ಕೆಲಸದಿಂದ ತೆಗೆದು ಕಡಿಮೆ ಸಂಬಳಕ್ಕೆ ಭಾರತೀಯರನ್ನು ಕರೆಸಲಾಗುತ್ತಿದೆ: ಟಿಸಿಎಸ್ ಮೇಲೆ ಉರಿದುಬೀಳುತ್ತಿರುವ ಅಮೆರಿಕನ್ನರು
ಉದ್ಯೋಗಿಗಳ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 29, 2024 | 12:13 PM

Share

ನವದೆಹಲಿ, ಮಾರ್ಚ್ 29: ಭಾರತದ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯ ವಿರುದ್ಧ ಅಲ್ಲಿನ ಕೆಲ ಮಾಜಿ ಉದ್ಯೋಗಿಗಳು ದೂರು ನೀಡಿದ್ದಾರೆ. ಸಂಸ್ಥೆ ಜನಾಂಗ, ವಯಸ್ಸಿನ ಭೇದ (discrimination) ಮಾಡಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದೆ. ಕಡಿಮೆ ವೇತನಕ್ಕೆ ಸಿಗುವ ಭಾರತೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ ಎಂದು ಟಿಸಿಎಸ್​ನ 22 ಉದ್ಯೋಗಿಗಳು ಅಮೆರಿಕದ ಈಕ್ವಲ್ ಎಂಪ್ಲಾಯ್ಮೆಂಟ್ ಆಪೋರ್ಚುನಿಟಿ ಕಮಿಷನ್​ನಲ್ಲಿ (Equal Employment Opportunity Commission) ದೂರು ದಾಖಲಿಸಿದ್ದಾರೆ. ಈ ದೂರುದಾರರು 40ರಿಂದ 60 ವರ್ಷ ವಯಸ್ಸಿನ ಗುಂಪಿಗೆ ಸೇರಿದರಾಗಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದೆ.

ಜನಾಂಗ ಮತ್ತು ವಯಸ್ಸಿನ ಆಧಾರದ ಮೇಲೆ ಕೆಲಸದಿಂದ ತೆಗೆದುಹಾಕುವ ಮತ್ತು ಕೆಲಸಗಳನ್ನು ವರ್ಗಾಯಿಸಲಾಗುತ್ತಿದೆ. ಟೆಂಪ್ರವರಿ ವರ್ಕ್ ವೀಸಾ ಮೂಲಕ ಭಾರತೀಯರನ್ನು ಕರೆಸಿ ಕೆಲಸ ಮಾಡಿಸಲಾಗುತ್ತಿದೆ ಎಂಬುದು ಇವರ ಆಕ್ಷೇಪ. ಟಿಸಿಎಸ್​ನಲ್ಲಿ ತಾರತಮ್ಯತೆಗೆ ಗುರಿಯಾಗಿರುವ ಹೆಚ್ಚಿನ ಉದ್ಯೋಗಿಗಳು ಸೀನಿಯರ್ ಹುದ್ದೆಯಲ್ಲಿರುವವರು. ಇವರಲ್ಲಿ ಹೆಚ್ಚಿನವರು ಎಂಬಿಎ ಮತ್ತಿತರ ಉನ್ನತ ಪದವಿಗಳನ್ನು ಮಾಡಿದ್ದು ಉನ್ನತ ಕೌಶಲ್ಯವಿರುವವರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಭಾರತದ ಆರ್ಥಿಕತೆ 2047ರವರೆಗೆ ಸತತ ಎಂಟು ಪ್ರತಿಶತ ವೇಗದಲ್ಲಿ ಬೆಳೆಯಲು ಸಾಧ್ಯ: ಕೆವಿ ಸುಬ್ರಮಣಿಯನ್

ಟಿಸಿಎಸ್ ಭಾರತದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿ ಎನಿಸಿದೆ. ಜಾಗತಿಕವಾಗಿ 6 ಲಕ್ಷ ಉದ್ಯೋಗಿಗಳಿದ್ದಾರೆ. ಅಮೆರಿಕದ ಅಗ್ರಮಾನ್ಯ ಕಂಪನಿಗಳು ಟಿಸಿಎಸ್​ನ ಕ್ಲೈಂಟ್​ಗಳಾಗಿವೆ. ಇದರ ಹೆಚ್ಚಿನ ಆದಾಯ ಅಮೆರಿಕದಿಂದಲೇ ಸಿಗುತ್ತದೆ. ಆದರೂ ಟಿಸಿಎಸ್​ನ ಬಹುಪಾಲು ಉದ್ಯೋಗಿಗಳು ಭಾರತೀಯರೇ ಆಗಿದ್ದಾರೆ. ಅಮೆರಿಕನ್ನರ ಸಂಖ್ಯೆ ಬಹಳ ಕಡಿಮೆ ಎಂದು ಮಾಜಿ ಉದ್ಯೋಗಿಗಳು ತಗಾದೆ ಎತ್ತಿದ್ದಾರೆ.

ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ ಕಳೆದ ವರ್ಷ ಪ್ರಾಜೆಕ್ಟ್​ಗಳಿಂದ ತಮ್ಮನ್ನು ತೆಗೆಯಲಾಗಿದೆ. ಹೊಸ ಅಸೈನ್ಮೆಂಟ್ ಪಡೆಯಲು ಮಾಡಿದ ಪ್ರಯತ್ನಕ್ಕೂ ತಡೆ ಮಾಡಲಾಗಿದೆ. ಕ್ಲೈಂಟ್​ಗಳು ಕೇಳಿಕೊಂಡರೂ ಕೇಳುತ್ತಿಲ್ಲ. ಕೊನೆಯಲ್ಲಿ ಏಕಾಏಕಿ ಕೆಲಸದಿಂದ ತೆಗೆಯಲಾಗಿದೆ. ನಮ್ಮ ಜಾಗದಲ್ಲಿ ನಮಗಿಂತ ಕಡಿಮೆ ಅನುಭವದ, ಕಿರಿಯ ವಯಸ್ಸಿನ ಭಾರತೀಯರನ್ನು ಕರೆಸಿ ಕೆಲಸ ಕೊಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಟೋಲ್ ಬೂತ್ ರಗಳೆ ಇಲ್ಲ; ಶೀಘ್ರದಲ್ಲೇ ಬರಲಿದೆ ಸೆಟಿಲೈಟ್ ಸಿಸ್ಟಂ: ನಿತಿನ್ ಗಡ್ಕರಿ

ಟಿಸಿಎಸ್​ನ ಗ್ಲೋಬಲ್ ಹೆಚ್​ಆರ್ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಅವರು ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಅಮೆರಿಕದಲ್ಲಿರುವ ಟಿಸಿಎಸ್ ಕಚೇರಿಗಳಲ್ಲಿ ಅಮೆರಿಕನ್ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಿ ಭಾರತೀಯರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳಲು ಯೋಜಿಸಿದ್ದೇವೆ ಎಂದಿದ್ದರು. ಆ ಅಂಶವನ್ನು ಟಿಸಿಎಸ್​ನ ಮಾಜಿ ಉದ್ಯೋಗಿಗಳು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಮೆರಿಕದಲ್ಲಿ ವಿದೇಶಗಳಿಂದ ನುರಿತ ಕೆಲಸಗಾರರನ್ನು ಕರೆಸಲು ಎಚ್1ಬಿ ವೀಸಾ ವ್ಯವಸ್ಥೆ ಇದೆ. ಆದರೆ, ಕಡಿಮೆ ಪರಿಣಿತಿ ಇರುವವರನ್ನು ಕಡಿಮೆ ಸಂಬಳಕ್ಕೆ ವಿದೇಶಗಳಿಂದ ಕರೆಸಲಾಗುತ್ತಿದೆ ಎಂಬುದು ಸ್ಥಳೀಯ ಅಮೆರಿಕನ್ನರದ್ದು ಬಹುದಿನಗಳಿಂದ ಇರುವ ಆಕ್ಷೇಪ. ಸ್ಥಳೀಯ ಅಮೆರಿಕನ್ನರನ್ನು ಕೆಲಸಕ್ಕೆ ಸೇರಿಸಿಕೊಂಡರೆ ಹೆಚ್ಚು ಸಂಬಳ ಕೊಡಬೇಕಾಗುತ್ತದೆ ಎಂದು ಹೆಚ್ಚಿನ ಕಂಪನಿಗಳು ವಲಸಿಗರಿಗೆ ಮಣೆ ಹಾಕುತ್ತವೆ. ಇದು ಅಲ್ಲಿನವರನ್ನು ಆಕ್ರೋಶಕ್ಕೆ ಹಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ