Fake GST Bill: ನಕಲಿ ಜಿಎಸ್​ಟಿ ಬಿಲ್ ಗುರುತಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ

How To Identify Fake Bill: ಸರಕು ಅಥವಾ ಸೇವೆ ಮಾರಿದಾಗ ಅದಕ್ಕೆ ಜಿಎಸ್​ಟಿ ಅನ್ವಯ ಆಗುತ್ತದೆ. ಆದರೆ, ಯಾವುದೇ ಮಾರಾಟವಾಗದೇ ಜಿಎಸ್​ಟಿ ಇನ್ವಾಯ್ಸ್ ಸೃಷ್ಟಿಸುವವರು ಇರುತ್ತಾರೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ದುರುಪಯೋಗಿಸಲು ಈ ರೀತಿ ನಕಲಿ ಟ್ಯಾಕ್ಸ್ ಇನ್ವಾಯ್ಸ್ ಸೃಷ್ಟಿಸಲಾಗುತ್ತದೆ. ಈ ನಕಲಿ ಜಿಎಸ್​ಟಿ ಇನ್ವಾಯ್ಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬ ಕೆಲ ಸರಳ ವಿಧಾನ ಇಲ್ಲಿದೆ...

Fake GST Bill: ನಕಲಿ ಜಿಎಸ್​ಟಿ ಬಿಲ್ ಗುರುತಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ
ತೆರಿಗೆ ಕಳ್ಳತನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2023 | 3:27 PM

ತೆರಿಗೆ ಕಳ್ಳತನ ಭಾರತದಲ್ಲಿರುವ ಬಹಳ ಸಾಮಾನ್ಯ ಸಮಸ್ಯೆ ಹಾಗೂ ಸರ್ಕಾರಕ್ಕೆ ಸದಾ ಇರುವ ತಲೆನೋವು. ಜಿಎಸ್​ಟಿ ಬಂದ ಬಳಿಕವೂ ತೆರಿಗೆ ಕಳ್ಳತನ (tax evasion) ನಡೆಯುವುದು ನಿಂತಿಲ್ಲ. ಬಹಳಷ್ಟು ವ್ಯಾಪಾರಿಗಳು ಬಿಲ್ ಜನರೇಟ್ ಮಾಡುವುದೇ ಇಲ್ಲ. ಗ್ರಾಹಕರು ಕೇಳದಿದ್ದರಂತೂ ಬಿಲ್ ಕೊಡುವ ಮಾತೇ ಇಲ್ಲ. ಹಾಗೆಯೇ, ನಕಲಿ ಬಿಲ್ ಸೃಷ್ಟಿಸಿ ಗ್ರಾಹಕರಿಗೆ ಕೊಡುವ ವ್ಯಾಪಾರಿಗಳೂ ಇದ್ದಾರೆ. ಇನ್ನು, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಅನುವಾಗುವ ರೀತಿಯಲ್ಲಿ ನಕಲಿ ಇನ್ವಾಯ್ಸ್ (fake GST invoice) ಸೃಷ್ಟಿಸುವ ವ್ಯಾಪಾರಿಗಳೂ ಬಹಳ ಇದ್ದಾರೆ. ಈ ಅಕ್ರಮಗಳಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ ಆದಾಯ ಕೈಪ್ಪುತ್ತಿದೆ ಎಂದು ಹೇಳಲಾಗುತ್ತಿದೆ.

ನಕಲಿ ಜಿಎಸ್​ಟಿ ಇನ್ವಾಯ್ಸ್ ಎಂದರೇನು?

ಸರಕು ಅಥವಾ ಸೇವೆಗೆ ವಿಧಿಸಲಾಗುವ ದರಕ್ಕೆ ಜಿಎಸ್​ಟಿ ತೆರಿಗೆ ಅನ್ವಯ ಆಗುತ್ತದೆ. ಅಂಗಡಿಯಲ್ಲಿ ನಾವು ವಸ್ತು ಖರೀದಿಸಿದಾಗ ಬಿಲ್ ಮೊತ್ತಕ್ಕೆ ನಿರ್ದಿಷ್ಟ ಭಾಗದಷ್ಟು ಜಿಎಸ್​ಟಿಯನ್ನು ಸೇರಿಸಲಾಗುತ್ತದೆ. ಈ ಜಿಎಸ್​ಟಿ ಹಣ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆದರೆ, ಯಾವುದೇ ಸರಕು ಅಥವಾ ಸೇವೆ ಒದಗಿಸದೇ ಹೋದರೂ ಜಿಎಸ್​ಟಿ ಇನ್ವಾಯ್ಸ್ ಸೃಷ್ಟಿಸುವವರು ಇರುತ್ತಾರೆ. ಇದನ್ನು ನಕಲಿ ಇನ್ವಾಯ್ಸ್ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಚರ್ಚಿಸಲು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಸಭೆ ಕರೆದ ಸರ್ಕಾರ

ನಕಲಿ ಜಿಎಸ್​ಟಿ ಇನ್ವಾಯ್ಸ್ ಗುರುತಿಸುವುದು ಹೇಗೆ?

ಸರಕು ಅಥವಾ ಸೇವೆಗಳನ್ನು ಒದಗಿಸುವ ಪ್ರತಿಯೊಂದು ನೊಂದಾಯಿತ ಸಂಸ್ಥೆಗೂ ಜಿಎಸ್​ಟಿಐಎನ್ ನೀಡಲಾಗುತ್ತದೆ. ಜಿಎಸ್​ಟಿನ್ ಎಂಬುದು ರಾಜ್ಯದ ಕೋಡ್ ನಂಬರ್, ಪ್ಯಾನ್ ನಂಬರ್ ಮತ್ತು ಯೂನಿಕ್ ರಿಜಿಸ್ಟ್ರೇಶನ್ ನಂಬರ್​ನ ಸಂಯೋಜನೆ ಆಗಿರುತ್ತದೆ. ಇದು 15 ಅಂಕಿಯ ಒಂದು ವಿಶೇಷ ಸಂಖ್ಯೆ.

ಜಿಎಸ್​ಟಿ ಪೋರ್ಟಲ್​ಗೆ ಹೋದರೆ ಅಲ್ಲಿ (www.gst.gov.in/) ಜಿಎಸ್​ಟಿನ್ ಸಂಖ್ಯೆಯನ್ನು ಪರಿಶೀಲಿಸಬಹುದು. ಪೋರ್ಟಲ್​ನಲ್ಲಿ ಸರ್ಚ್ ಟ್ಯಾಕ್ಸ್​ಪೇಯರ್ ಸೆಕ್ಷನ್​ಗೆ ಹೋಗಿ ಅಲ್ಲಿ ಅ ಸಂಖ್ಯೆ ಹಾಗಿ ಶೋಧಿಸಬಹುದು. ಈ ಸಂಖ್ಯೆ ನೈಜವಾಗಿದ್ದರೆ ಯಾರ ಹೆಸರಲ್ಲಿ ಅದು ನೊಂದಾಯಿತವಾಗಿದೆ ಮತ್ತು ಅವರ ವಿಳಾಸ ಯಾವುದು ಎಂಬುದು ಕಾಣುತ್ತದೆ.

ಇನ್ನು, ಜಿಎಸ್​ಟಿ ಬಿಲ್​ನಲ್ಲಿ ಇನ್ವಾಯ್ಸ್ ನಂಬರ್ ಮತ್ತು ದಿನಾಂಕ ಸರಿಯಾಗಿದೆಯಾ ಎಂಬುದನ್ನು ಗಮನಿಸಿ. ಹಾಗೆಯೇ, ಸರಕುಗಳ ಮಾರಾಟಕ್ಕೆ ಎಚ್​ಎಸ್​ಎನ್ ಕೋಡ್ ಇರುತ್ತದೆ. ಸರ್ವಿಸ್ ಮಾರಾಟಕ್ಕೆ ಸರ್ವಿಸಸ್ ಅಕೌಂಟಿಂಗ್ ಕೋಡ್ (ಎಸ್​ಎಸಿ) ಅನ್ನು ನೀಡಲಾಗುತ್ತದೆ. ಈ ಎರಡು ಕೋಡ್ ಸಂಖ್ಯೆಯನ್ನು ಜಿಎಸ್​ಟಿ ಪೋರ್ಟಲ್​ನಲ್ಲಿ ವೆರಿಫೈ ಮಾಡಬಹುದು.

ಇದನ್ನೂ ಓದಿ: S&P Global Ratings: ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.4ರಷ್ಟು ಹೆಚ್ಚಳ: ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಅಂದಾಜು

ಹಾಗೆಯೇ, ಮಾರಾಟಗಾರನ ತೆರಿಗೆ ಪಾವತಿ ಇತಿಹಾಸವನ್ನೂ ಜಿಎಸ್​ಟಿ ಪೋರ್ಟಲ್​ನಲ್ಲಿ ಪರಿಶೀಲಿಸಬಹುದು. ಒಂದು ನಿರ್ದಿಷ್ಟ ಬಿಲ್​ನಲ್ಲಿ ನಮೂದಾದಷ್ಟು ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆಯಾ ಇಲ್ಲವಾ ಎಂಬುದನ್ನು ಕಂಡುಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ