Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ

FM presents economic survey 2026 in Lok Sabha: ಪ್ರಸಕ್ತ ವರ್ಷದ ಆರ್ಥಿಕ ಸಮೀಕ್ಷಾ ವರದಿಯನ್ನು ನಿರ್ಮಲಾ ಸೀತಾರಾಮನ್ ಜನವರಿ 29, ಗುರುವಾರದಂದು ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಈ ವರದಿ ಪ್ರಕಾರ ದೇಶದ ಜಿಡಿಪಿ 2025-26ರಲ್ಲಿ ಶೇ. 7.4ರಷ್ಟು, 2026-27ರಲ್ಲಿ ಶೇ. 6.8-7.2ರಷ್ಟು ಬೆಳೆಯಬಹುದು ಎನ್ನಲಾಗಿದೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದ ತಂಡವು ಈ ಆರ್ಥಿಕ ಸಮೀಕ್ಷೆಯ ವರದಿ ತಯಾರಿಸಿದೆ.

Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ
ನಿರ್ಮಲಾ ಸೀತಾರಾಮನ್

Updated on: Jan 29, 2026 | 1:08 PM

ನವದೆಹಲಿ, ಜನವರಿ 29: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ವರ್ಷದ ಆರ್ಥಿಕ ಸಮೀಕ್ಷೆಯ ವರದಿಯನ್ನು ಲೋಕಸಭೆಯಲ್ಲಿ ಗುರುವಾರ ಮಂಡಿಸಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ (2026-27) ಭಾರತದ ಜಿಡಿಪಿ ಶೇ. 6.8-7.2 ಹೆಚ್ಚಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಪ್ರಬಲವಾಗಿರುವುದು ಹಾಗೂ ಸರ್ಕಾರದ ಸುಧಾರಣಾ ಕ್ರಮಗಳು ದೇಶದ ಆರ್ಥಿಕ ವೇಗಕ್ಕೆ ಪುಷ್ಟಿ ಕೊಡುವುದರಿಂದ ಜಿಡಿಪಿ ಉತ್ತಮ ಬೆಳವಣಿಗೆ ಪಡೆಬಹುದು ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿರುವರಾದರೂ, ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ನೇತೃತ್ವದಲ್ಲಿ ಈ ಸಮೀಕ್ಷೆ ವರದಿ ರೂಪಿಸಲಾಗಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಗುರಿ; ಬಜೆಟ್​ನಲ್ಲಿ ಈ ಉದ್ದಿಮೆಗಳಿಗೆ ಸಿಗಲಿದೆ ಪುಷ್ಟಿ

ಏನಿದು ಆರ್ಥಿಕ ಸಮೀಕ್ಷಾ ವರದಿ?

ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷಾ ವರದಿಯನ್ನು ರಚಿಸಿ ಬಿಡುಗಡೆ ಮಾಡಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತು ಬೆಳವಣಿಗೆ ಹೇಗಿತ್ತು, ಮುಂಬರುವ ವರ್ಷದಲ್ಲಿ ಹೇಗಿರಲಿದೆ ಎಂಬುದನ್ನು ಈ ವರದಿಯಲ್ಲಿ ಅವಲೋಕಿಸಲಾಗುತ್ತದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಈ ಸಮೀಕ್ಷೆ ನಡೆಸಿದ್ದಾರೆ.

ಜಿಡಿಪಿ, ಹಣದುಬ್ಬರದ ಟ್ರೆಂಡ್ ಹೇಗಿದೆ, ಹಣಕಾಸು ನೀತಿ ಹೇಗಿದ್ದರೆ ಅನುಕೂಲ, ರಫ್ತು, ಆಮದು, ಫಾರೆಕ್ಸ್ ಇತ್ಯಾದಿ ಬಾಹ್ಯ ಕ್ಷೇತ್ರಗಳು ಹೇಗಿವೆ; ಉದ್ಯೋಗ, ಆರೋಗ್ಯ, ಶಿಕ್ಷಣ ಮತ್ತಿತರ ಸಾಮಾಜಿಕ ಸೂಚಕಗಳು ಹೇಗಿವೆ, ಇವೇ ಮುಂತಾದ ಅಂಶಗಳನ್ನೂ ಆರ್ಥಿಕ ಸಮೀಕ್ಷೆಯಲ್ಲಿ ಅವಲೋಕಿಸಲಾಗುತ್ತದೆ.

ಇದನ್ನೂ ಓದಿ: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ಇವತ್ತು ಮಂಡನೆಯಾಗಿರುವ ಆರ್ಥಿಕ ಸಮೀಕ್ಷೆ ಪ್ರಕಾರ ಪ್ರಸಕ್ತ ವರ್ಷದಲ್ಲಿ (2025-26) ಜಿಡಿಪಿ ಶೇ. 7.4ರಷ್ಟು ಹೆಚ್ಚಬಹುದು ಎನ್ನಲಾಗಿದೆ. ಈ ಹಿಂದಿನ ವರ್ಷದ ಸಮೀಕ್ಷೆಯಲ್ಲಿ ಮಾಡಲಾದ ಅಂದಾಜಿಗಿಂತ ಇದು ಹೆಚ್ಚಿದೆ. ದೇಶದ ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ಇತರ ಏಜೆನ್ಸಿಗಳ ಅನಿಸಿಕೆಗಿಂತ ಎಕನಾಮಿಕ್ ಸರ್ವೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ.

ಬಜೆಟ್​ಗೆ ಕೆಲ ದಿನಗಳ ಮೊದಲು ಆರ್ಥಿಕ ಸಮೀಕ್ಷಾ ವರದಿಯನ್ನು ಸಂಸತ್​ನಲ್ಲಿ ಪ್ರಸ್ತುತಪಡಿಸಲಾಗುತ್ತದೆ. 2026ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಾರೆ. ಬಜೆಟ್ ಅಧಿವೇಶನ ಈಗಾಗಲೇ ನಿನ್ನೆಯೇ ಆರಂಭಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Thu, 29 January 26