ನವದೆಹಲಿ, ಮಾರ್ಚ್ 15: ತೆರಿಗೆ ರಿಯಾಯಿತಿ ಇರುವಂತಹ ಹೊಸ ಎಲೆಕ್ಟ್ರಿಕ್ ವಾಹನ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಹೊರಟಿದೆ. ಟೆಸ್ಲಾ ಇತ್ಯಾದಿ ಎಲೆಕ್ಟ್ರಿಕ್ ವಾಹನ ಸಂಸ್ಥೆಗಳಿಂದ ಹೂಡಿಕೆಗಳನ್ನು (investment) ಆಕರ್ಷಿಸಲು ಸರ್ಕಾರ ಈ ಸ್ಕೀಮ್ ಹಾಕಿದೆ. ಭಾರತದಲ್ಲಿ ಹೂಡಿಕೆ ಮಾಡಲು ಒಪ್ಪಿದರೆ ಕೆಲ ಇವಿ ವಾಹನಗಳಿಗೆ ಆಮದು ಸುಂಕವನ್ನು ಕಡಿಮೆ ಮಾಡುವುದು ಈ ಸ್ಕೀಮ್ನ ಪ್ರಮುಖ ಅಂಶ. ವಿದೇಶೀ ಹೂಡಿಕೆ ಮತ್ತು ತಂತ್ರಜ್ಞಾನವನ್ನು ಆಕರ್ಷಿಸಿದಂತಾಗುತ್ತದೆ. ಜೊತೆಗೆ ದೇಶೀಯವಾಗಿ ಉತ್ಪಾದನೆ ಹೆಚ್ಚಾಗಿ, ಆಮದು ಪ್ರಮಾಣ ಕಡಿಮೆ ಆಗುವ ನಿರೀಕ್ಷೆ ಇದೆ.
ಈ ಸ್ಕೀಮ್ ಪ್ರಕಾರ ಎಲೆಕ್ಟ್ರಿಕ್ ವಾಹನ ತಯಾರಿಸುವ ಕಂಪನಿಗಳು ಮುಂದಿನ ಮೂರು ವರ್ಷದೊಳಗೆ ಭಾರತದಲ್ಲಿ ಕನಿಷ್ಠ 500 ಮಿಲಿಯನ್ ಡಾಲರ್ (ಸುಮಾರು 4,150 ಕೋಟಿ ರೂ) ನಷ್ಟು ಹೂಡಿಕೆ ಮಾಡಿ, ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಬದ್ಧರಾಗಬೇಕು. ಇಂಥ ಕಂಪನಿಗಳ ಆಯ್ದ ಎಲೆಕ್ಟ್ರಿಕ್ ವಾಹನಗಳ ಮೇಲೆ ಆಮದು ಸುಂಕವನ್ನು ಕಡಿಮೆ ಮಾಡಲಾಗುತ್ತದೆ. ಇದು ಸ್ಕೀಮ್ನ ಉದ್ದೇಶವಾಗಿದೆ.
ಇದನ್ನೂ ಓದಿ: ಪೇಟಿಎಂ ಬಚಾವ್; ಥರ್ಡ್ ಪಾರ್ಟಿ ಆ್ಯಪ್ ಆಗಿ ಮುಂದುವರಿಯಲು ಅವಕಾಶ; ಷೇರು ಬೆಲೆಯೂ ಏರಿಕೆಯ ಹಾದಿಯಲ್ಲಿ
35,000 ಡಾಲರ್ (ಸುಮಾರು 30 ಲಕ್ಷ ರೂ) ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ವಿಧಿಸಲಾಗುವ ಆಮದು ಸುಂಕವನ್ನು ಶೇ. 15ಕ್ಕೆ ಇಳಿಸಲಾಗುತ್ತದೆ. ಇದು ಐದು ವರ್ಷದವರೆಗೆ ಹಾಕಲಾಗುವ ಸುಂಕವಾಗಿರುತ್ತದೆ. ಆದರೆ, ಷರತ್ತೆಂದರೆ, ಮೂರು ವರ್ಷದೊಳಗೆ ಕಂಪನಿಯು ಭಾರತದಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪಿಸಬೇಕು.
800 ಮಿಲಿಯನ್ ಡಾಲರ್ಗಿಂತ ಹೆಚ್ಚು ಹೂಡಿಕೆ ಮಾಡಿದರೆ ವರ್ಷಕ್ಕೆ 8,000 ಇವಿಗಳವರೆಗೂ ತೆರಿಗೆ ಸ್ಕೀಮ್ ಅನ್ವಯ ಆಗುತ್ತದೆ. ಈ ಕಂಪನಿಗಳು ಮೂರು ವರ್ಷದಲ್ಲಿ ಘಟಕಗಳನ್ನು ಸ್ಥಾಪಿಸಿ ಉತ್ಪಾದನೆ ಆರಂಭಿಸಬೇಕು. ತಮ್ಮ ಉದ್ದೇಶಿತ ಹೂಡಿಕೆಗಳಿಗೆ ಕಂಪನಿಗಳು ಬ್ಯಾಂಕ್ ಗ್ಯಾರಂಟಿ ಕೊಡಬೇಕು ಎಂಬ ಷರತ್ತೂ ಇದೆ.
ಇದನ್ನೂ ಓದಿ: ವೈದ್ಯರಿಗೆ ಗಿಫ್ಟ್, ಉಚಿತ ಟೂರ್ ಪ್ಯಾಕೇಜ್ ಇತ್ಯಾದಿ ಕೊಡುವಂತಿಲ್ಲ; ಫಾರ್ಮಾ ಕಂಪನಿಗಳಿಗೆ ಸರ್ಕಾರ ಲಕ್ಷ್ಮಣರೇಖೆ
ಈ ಮೇಲಿನ ಸ್ಕೀಮ್ನ ಅಂಶವನ್ನು ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಪ್ರಸ್ತಾಪಿಸಿತ್ತು. ತಮ್ಮ ವಾಹನಗಳಿಗೆ ತೆರಿಗೆ ರಿಯಾಯಿತಿ ಕೊಡುವುದಾದರೆ ಹೂಡಿಕೆ ಮಾಡಲು ಸಿದ್ಧ ಎಂದು ಟೆಸ್ಲಾ ಹೇಳಿತ್ತು. ಟೆಸ್ಲಾ ಕಂಪನಿಗೋಸ್ಕರ ನೀತಿ ಬದಲಿಸಲು ಸಾಧ್ಯ ಇಲ್ಲ ಎಂದಿದ್ದ ಸರ್ಕಾರ ಕೊನೆಗೆ ತೆರಿಗೆ ರಿಯಾಯಿತಿ ಯೋಜನೆ ಜಾರಿಗೆ ಮುಂದಾಗಿದೆ. ಟೆಸ್ಲಾ ಮಾತ್ರವಲ್ಲ, ವಿಶ್ವದ ಇತರ ಪ್ರಮುಖ ಇವಿ ತಯಾರಕ ಕಂಪನಿಗಳಿಗೆ ಉತ್ತೇಜನ ಕೊಡುವುದು ಉದ್ದೇಶವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ