
ನವದೆಹಲಿ, ಸೆಪ್ಟೆಂಬರ್ 26: ಮುಂದಿನ ತಿಂಗಳು ಅಕ್ಟೋಬರ್ 1 ರಿಂದ ಕೆಲ ಮಹತ್ವದ ಬದಲಾವಣೆಗಳು ನಡೆಯಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಬಲ್ಲಂಥವು. ಉದಾಹರಣೆಗೆ, ಪ್ರತಿ ತಿಂಗಳ ಮೊದಲ ತಾರೀಖಿನಂದು ಎಲ್‌ಪಿಜಿ (LPG) ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇದರ ಬೆಲೆ ಏರಿಳಿತವು ಜನಜೀವನದ ಮೇಲೆ ಬಹಳ ಸಾಮಾನ್ಯ ಪರಿಣಾಮ ಬೀರುತ್ತದೆ. ರೈಲು ಟಿಕೆಟ್ಗಳಿಂದ ಹಿಡಿದು ಯುಪಿಐವರೆಗೆ ಇನ್ನೂ ಕೆಲ ನಿಯಮ ಬದಲಾವಣೆಗಳು ಅಕ್ಟೋಬರ್ನಲ್ಲಿವೆ. ಇವೆಲ್ಲವೂ ಕೂಡ ಜನಸಾಮಾನ್ಯರ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರುವಂಥವು.
ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಕಮಿಟಿ ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಆಗಸ್ಟ್ನಲ್ಲಿ ಎಂಪಿಸಿ ಸಭೆ ನಡೆದಿತ್ತು. ಈಗ ಸೆಪ್ಟೆಂಬರ್ 29ರಂದು ಆರಂಭಗೊಂಡು ಮೂರು ದಿನ ಸಭೆ ನಡೆಯಲಿದ್ದು, ಅಕ್ಟೋಬರ್ 1ರಂದು ಸಭೆಯ ನಿರ್ಧಾರಗಳನ್ನು ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸಲು ಗಡುವು ಅಕ್ಟೋಬರ್ 31ರವರೆಗೂ ವಿಸ್ತರಣೆ
ರೆಪೋ ದರ ಸೇರಿದಂತೆ ವಿವಿಧ ನೀತಿ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಫೆಬ್ರುವರಿಯಿಂದ ಸತತವಾಗಿ ರಿಪೋ ದರ ಇಳಿಕೆ ಆಗುತ್ತಿದ್ದ, ಇದು ಅಕ್ಟೋಬರ್ನಲ್ಲೂ ಮುಂದುವರಿಯುತ್ತದಾ ಎಂಬುದು ಒಂದನೇ ತಾರೀಖು ಗೊತ್ತಾಗುತ್ತದೆ. ಎಸ್ಬಿಐ ರಿಸರ್ಚ್ ತಂಡವು ಈ ಬಾರಿ 25 ಮೂಲಾಂಕಗಳಷ್ಟು ದರ ಕಡಿತ ಮಾಡಬಹುದು ಎಂದು ಅಂದಾಜು ಮಾಡಿದೆ. ಇನ್ನೂ ಕೆಲ ಆರ್ಥಿಕ ತಜ್ಞರು ಈ ಬಾರಿ ದರ ಕಡಿತ ಮಾಡುವ ಸಾಧ್ಯತೆ ಕಡಿಮೆ ಎನ್ನುವ ತರ್ಕವನ್ನೂ ಮಾಡಿದ್ದಾರೆ. ಅದೇನೇ ಆದರೂ ರಿಪೋ ದರ ಅಥವಾ ಬಡ್ಡಿದರ ಹೆಚ್ಚಳ ಸಾಧ್ಯತೆಯಂತೂ ಸದ್ಯಕ್ಕೆ ಇಲ್ಲ.
ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪೇಮೆಂಟ್ ವಿಧಾನವಾದ ಯುಪಿಐನಲ್ಲಿ ಒಂದು ಪ್ರಮುಖ ನಿಯಮ ಬದಲಾವಣೆ ಅಕ್ಟೋಬರ್ನಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದೆ. ಇದು ಯುಪಿಐ ಪಿ2ಪಿ ಸೇವೆಗೆ ಸಂಬಂಧಿಸಿದ್ದಾಗಿದ್ದು, ‘ಕಲೆಕ್ಟ್ ರಿಕ್ವೆಸ್ಟ್’ ಫೀಚರ್ ಅನ್ನು ನಿಲ್ಲಿಸಬಹುದು. ಒಬ್ಬ ಯುಪಿಐ ಬಳಕೆದಾರ ಮತ್ತೊಮ್ಮೆ ಬಳಕೆದಾರರಿಗೆ ಹಣಕ್ಕಾಗಿ ಮನವಿ ಸಲ್ಲಿಸುವ ಕ್ರಮವು ಕಲೆಕ್ಟ್ ರಿಕ್ವೆಸ್ಟ್. ಈ ವಿಧಾನದ ಮೂಲಕ ಕೆಲವರು ವಂಚನೆ ಎಸಗುತ್ತಿದ್ದರು. ಇದನ್ನು ತಪ್ಪಿಸಲು ಎನ್ಪಿಸಿಐ ಕಲೆಕ್ಟ್ ರಿಕ್ವೆಸ್ಟ್ ಫೀಚರ್ ಅನ್ನೇ ತೆಗೆದುಹಾಕುತ್ತಿದೆ.
ಅಕ್ಟೋಬರ್ 1 ರಿಂದ, ಆಧಾರ್ ದೃಢೀಕರಿಸಿದ ಪ್ರಯಾಣಿಕರಿಗೆ ರೈಲ್ವೆ ಆದ್ಯತೆ ನೀಡಲಿದೆ. ಅಂತಹ ಪ್ರಯಾಣಿಕರಿಗೆ ರೈಲ್ವೆ ಟಿಕೆಟ್ ಬುಕಿಂಗ್ ಪ್ರಾರಂಭವಾಗುವ 15 ನಿಮಿಷಗಳ ಮೊದಲು ಆದ್ಯತೆಯ ಪ್ರವೇಶವನ್ನು ನೀಡಲಾಗುವುದು. ಇದರರ್ಥ ಅವರು, ಟಿಕೆಟ್ ಬುಕಿಂಗ್ ಆರಂಭವಾಗಿ ಮೊದಲ 15 ನಿಮಿಷಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಬೇರೆಯವರು 15 ನಿಮಿಷಗಳ ನಂತರ ಬುಕಿಂಗ್ ಮಾಡಬಹುದು.
ಇದನ್ನೂ ಓದಿ: ಬ್ಯಾಂಕ್ನಲ್ಲಿವೆ RTGS, NEFT, IMPS, ECS ACH ಪೇಮೆಂಟ್ ಸಿಸ್ಟಂಗಳು; ಯಾವುದಕ್ಕೆ ಎಷ್ಟಿದೆ ಶುಲ್ಕ? ಇಲ್ಲಿದೆ ಮಾಹಿತಿ
ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಏಜೆನ್ಸಿಗಳು ಎಲ್‌ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಗ್ಯಾಸ್ ಏಜೆನ್ಸಿಗಳು ಪ್ರತಿ ತಿಂಗಳು ಗೃಹಬಳಕೆ ಮತ್ತು ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:39 am, Fri, 26 September 25