
ನವದೆಹಲಿ, ಆಗಸ್ಟ್ 3: ಎಕ್ಸಿಸ್ ಮ್ಯುಚುವಲ್ ಫಂಡ್ ಸಂಸ್ಥೆಯ ಮಾಜಿ ಫಂಡ್ ಮ್ಯಾನೇಜರ್ ಹಾಗೂ ಚೀಫ್ ಟ್ರೇಡರ್ ವೀರೇಶ್ ಜೋಷಿ (Viresh Joshi) ಅವರನ್ನು ಜಾರಿ ನಿರ್ದೇಶನಾಲಯದವರು ಬಂಧಿಸಿದ್ದಾರೆ. ಮನಿ ಲಾಂಡರಿಂಗ್ ಕಾಯ್ದೆ ಅಡಿ ಅವರ ಬಂಧನವಾಗಿರುವುದು ತಿಳಿದುಬಂದಿದೆ. ಟ್ರೇಡಿಂಗ್ (trading) ಚಟುವಟಿಕೆಯಲ್ಲಿ ಫ್ರಂಟ್ ರನ್ನಿಂಗ್ (Front Running) ಮೂಲಕ ನೂರಾರು ಕೋಟಿ ರೂ ವಂಚನೆ ಎಸಗಿರುವ ಗಂಭೀರ ಆರೋಪ ವೀರೇಶ್ ಜೋಷಿ ಮೇಲಿದೆ.
ಪಿಎಂಎಲ್ಎ ವಿಶೇಷ ನ್ಯಾಯಾಲಯವು ವೀರೇಶ್ ಜೋಷಿ ಅವರನ್ನು ಆಗಸ್ಟ್ 8ರವರೆಗೆ ತಮ್ಮ ಕಸ್ಟಡಿಗೆ ಒಪ್ಪಿಸಿದೆ ಎಂದು ಜಾರಿ ನಿರ್ದೇಶನಾಲಯವು ಭಾನುವಾರ ಹೇಳಿಕೆ ನೀಡಿದೆ.
ಇದನ್ನೂ ಓದಿ: ಭಾರತದಲ್ಲಿ ಅನುಮೋದಿತ ಸೆಮಿಕಂಡಕ್ಟರ್ ಯೋಜನೆಗಳಿಂದ 2,400 ಕೋಟಿ ಚಿಪ್ ತಯಾರಿಕೆ ಸಾಧ್ಯ; ಬೇರೆ ದೇಶಗಳಿಗೆ ಹೋಲಿಸಿದರೆ?
ಬ್ರೋಕರ್ ಆದವರು ಅಥವಾ ಟ್ರೇಡರ್ ಆದವರು ವೃತ್ತಿಪರ ಮಾಹಿತಿಯನ್ನು ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುವುದಕ್ಕೆ ಫ್ರಂಟ್ ರನ್ನಿಂಗ್ ಎನ್ನುತ್ತಾರೆ.
ಉದಾಹರಣೆಗೆ, ಷೇರು ಉದ್ಯಮದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ವ್ಯಕ್ತಿಗೆ ತಮ್ಮ ಕೆಲ ಪ್ರಮುಖ ಕ್ಲೈಂಟ್ಗಳು ನಿರ್ದಿಷ್ಟ ದೊಡ್ಡ ಮೊತ್ತದ ಷೇರುಗಳ ವಹಿವಾಟು ನಡೆಸುವ ಸಾಧ್ಯತೆ ಬಗ್ಗೆ ಮೊದಲೇ ಮಾಹಿತಿ ಗೊತ್ತಿರುತ್ತದೆ. ಇದರಿಂದ ಷೇರು ಏರುವ ಅಥವಾ ಇಳಿಯುವ ಬಗ್ಗೆ ಅವರಿಗೆ ಅರಿವು ಇರುತ್ತದೆ. ಈ ಹಂತದಲ್ಲಿ ಆತ ವೈಯಕ್ತಿಕವಾಗಿ ಷೇರು ವಹಿವಾಟು ನಡೆಸಿ ಲಾಭ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಇದನ್ನೇ ಫ್ರಂಟ್ ರನ್ನಿಂಗ್ ಎನ್ನುತ್ತಾರೆ.
ವೀರೇಶ್ ಜೋಷಿ ಎಕ್ಸಿಸ್ ಮ್ಯುಚುವಲ್ ಫಂಡ್ ಸಂಸ್ಥೆಯಲ್ಲಿ ಫಂಡ್ ಮ್ಯಾನೇಜರ್ ಆಗಿದ್ದಾಗ 2018ರಿಂದ 2021ರವರೆಗೆ ಈ ರೀತಿ ಫ್ರಂಟ್ ರನ್ನಿಂಗ್ ಮಾಡಿದ್ದರು ಎನ್ನುವ ಆರೋಪ ಇದೆ. 2024ರ ಡಿಸೆಂಬರ್ ತಿಂಗಳಲ್ಲಿ ಮುಂಬೈ ಪೊಲೀಸ್ ಇವರ ಮೇಲೆ ಮನಿ ಲಾಂಡರಿಂಗ್ ಕೇಸ್ ದಾಖಲಿಸಿತ್ತು.
ಇದನ್ನೂ ಓದಿ: ಷೇರು vs ಚಿನ್ನ vs ರಿಯಲ್ ಎಸ್ಟೇಟ್; ಕಳೆದ 20 ವರ್ಷದಲ್ಲಿ ಯಾವುದರಿಂದ ಸಿಕ್ಕಿದೆ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್
ವೀರೇಶ್ ಜೋಷಿ ಅವರು 2 ಲಕ್ಷ ಕೋಟಿ ರೂ ಫಂಡ್ ನಿರ್ವಹಿಸುವ ಎಕ್ಸಿಸ್ ಮ್ಯುಚುವಲ್ ಫಂಡ್ನಲ್ಲಿ ಫಂಡ್ ಮ್ಯಾನೇಜರ್ ಆಗಿದ್ದರಿಂದ ಹೂಡಿಕೆ ಎಲ್ಲಿ ಮಾಡಲಾಗುತ್ತದೆ, ಅಥವಾ ಎಲ್ಲಿಂದ ಹೂಡಿಕೆ ಹಿಂಪಡೆಯಲಾಗುತ್ತದೆ ಎಂಬುದನ್ನು ನಿರ್ಧರಿಸುವ ಸ್ಥಾನದಲ್ಲಿ ಇದ್ದವರು. ಟ್ರೇಡಿಂಗ್ ಮಾಡುವ ಮುನ್ನ ಅವರು ಈ ಮಾಹಿತಿಯನ್ನು ಬ್ರೋಕರ್ಗಳಿಗೆ ನೀಡುತ್ತಿದ್ದರು. ಆ ಬ್ರೋಕರ್ಗಳು ಇವರು ಹೇಳಿದ ಷೇರುಗಳನ್ನು ಮುಂಚಿತವಾಗಿ ಮಾರುವುದೋ ಅಥವಾ ಕೊಳ್ಳುವುದೋ ಮಾಡುತ್ತಿದ್ದರು. ಬಳಿಕ ಮ್ಯುಚುವಲ್ ಫಂಡ್ ಸಂಸ್ಥೆಯು ಹೆಚ್ಚಿನ ಬೆಲೆಯಲ್ಲಿ ಆ ಷೇರುಗಳನ್ನು ಖರೀದಿಸುತ್ತಿತ್ತು. ಇದರಿಂದ ಬ್ರೋಕರ್ಗಳಿಗೆ ಭರ್ಜರಿ ಲಾಭ ಅಗುತ್ತಿತ್ತು. ಈ ರಹಸ್ಯ ಮಾಹಿತಿ ನೀಡಿದ್ದಕ್ಕೆ ಪ್ರತಿಯಾಗಿ ಬ್ರೋಕರ್ಗಳಿಂದ ವೀರೇಶ್ ಜೋಷಿಗೆ ಕಮಿಷನ್ ಅಥವಾ ಲಂಚದ ಹಣ ಸಿಗುತ್ತಿತ್ತು ಎನ್ನುವುದು ಆರೋಪ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:17 pm, Sun, 3 August 25