Forbes Richest List: ಫೋರ್ಬ್ಸ್ ಸಿರಿವಂತರ ಪಟ್ಟಿ, ಜೆಫ್ ಬೆಜೋಸ್ ಹಿಂದಿಕ್ಕಿ ಮತ್ತೆ ಮೂರನೇ ಸ್ಥಾನಕ್ಕೆ ಗೌತಮ್ ಅದಾನಿ
ಗೌತಮ್ ಅದಾನಿ ಅವರು ಕಳೆದ ಕೆಲವು ಬಾರಿಯಿಂದಲೂ ಫೋರ್ಬ್ಸ್ನ ವಿಶ್ವದ ಸಿರಿವಂತ ಉದ್ಯಮಿಗಳ ಪಟ್ಟಿಯಲ್ಲಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನವದೆಹಲಿ: ಭಾರತೀಯ ಷೇರುಗಳಲ್ಲಿ (Indian stocks) ಕಳೆದ ಎರಡು ವಾರಗಳಿಂದ ಉತ್ತಮ ಗಳಿಕೆಯಾಗಿರುವುದು ಹಾಗೂ ವಾಲ್ಸ್ಟ್ರೀಟ್ ಷೇರುಗಳನ್ನೂ ಮೀರಿಸಿದ್ದರಿಂದ ಉದ್ಯಮಿ ಗೌತಮ್ ಅದಾನಿ (Gautam Adani) ಅವರ ಸಂಪತ್ತಿನಲ್ಲಿ ಗಣನೀಯ ವೃದ್ಧಿಯಾಗಿದೆ. ಪರಿಣಾಮವಾಗಿ ಫೋರ್ಬ್ಸ್ ನಿಯತಕಾಲಿಕೆಯ ಸಿರಿವಂತ ಉದ್ಯಮಿಗಳ ಪಟ್ಟಿಯಲ್ಲಿ ಅಮೆಜಾನ್ (Amazon) ಸ್ಥಾಪಕ ಜೆಫ್ ಬೆಜೋಸ್ (Jeff Bezos) ಅವರನ್ನು ಮತ್ತೆ ಮೀರಿಸಿರುವ ಅದಾನಿ, ಮೂರನೇ ಸ್ಥಾನಕ್ಕೇರಿದ್ದಾರೆ.
ಗೌತಮ್ ಅದಾನಿ ಸಂಪತ್ತಿನಲ್ಲಿ ಸೋಮವಾರ 314 ದಶಲಕ್ಷ ಡಾಲರ್ ವೃದ್ಧಿಯಾಗಿದ್ದು, ಅವರ ಒಟ್ಟು ಸಂಪತ್ತು 131.9 ಶತಕೋಟಿ ಡಾಲರ್ ಆಗಿದೆ. ಇದರೊಂದಿಗೆ ಅವರು ಫೋರ್ಬ್ಸ್ನ ವಿಶ್ವದ ಸಿರಿವಂತ ಉದ್ಯಮಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಲೂಯಿ ವಿಟಾನ್ನ ಬರ್ನಾರ್ಡ್ ಅರ್ನಾಲ್ಟ್ 156.5 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಭಾರತದ ಷೇರುಪೇಟೆಯಲ್ಲಿ ಗಳಿಕೆಯ ಓಟ ಸೋಮವಾರವೂ ಮುಂದುವರಿದಿದ್ದು ಕಳೆದ ಎರಡು ವಾರಗಳ ಟ್ರೆಂಡ್ ಮುಂದುವರಿದಿದೆ. ಕೇಂದ್ರ ಬ್ಯಾಂಕ್ಗಳ ನಿರ್ಧಾರಗಳು ಮತ್ತು ತೈಲ ಬೆಲೆ ಇಳಿಕೆ ನಿರೀಕ್ಷೆಗಳು ಗೂಳಿ ಓಟ ಮುಂದುವರಿಯಲು ಕಾರಣ ಎನ್ನಲಾಗಿದೆ.
ಇದನ್ನೂ ಓದಿ: Amazon Sales: ಹಬ್ಬದ ವಹಿವಾಟಿಗೂ ಬೆಲೆ ಏರಿಕೆ ಬಿಸಿ: ಮಾರಾಟ ಕುಸಿತದ ಬಗ್ಗೆ ಅಮೆಜಾನ್ ಆತಂಕ
ಹಬ್ಬದ ಅವಧಿಯ ಮಾರಾಟದಲ್ಲಿ ಕುಸಿತವಾಗುವ ಆತಂಕದಿಂದ ಅಮೆಜಾನ್ ವಹಿವಾಟು ಕುಸಿತ ಕಂಡಿದೆ. ಕಂಪನಿಯ ಷೇರುಗಳ ಮಾರಾಟ ಹೆಚ್ಚಾಗಿದೆ. ಹೀಗಾಗಿ ಜೆಫ್ ಬೆಜೋಸ್ ಅವರ ಸಂಪತ್ತು ಕರಗಿದೆ. ಜೆಫ್ ಬೆಜೋಸ್ ಅವರ ಸಂಪತ್ತಿನ ಮೌಲ್ಯ 126.9 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ. ಹಣದುಬ್ಬರ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬಳಿ ವ್ಯಯಿಸಲು ಹೆಚ್ಚು ಹಣವಿಲ್ಲದಿರುವುದು ಹಬ್ಬದ ಅವಧಿಯ ಮಾರಾಟದ ಮೇಲೂ ತೀವ್ರ ಪರಿಣಾಮ ಬೀರಿದೆ ಎಂದು ಅಮೆಜಾನ್ ಡಾಟ್ ಕಾಂ ಇಂಕ್ ಇತ್ತೀಚೆಗೆ ಹೇಳಿತ್ತು.
ಗೌತಮ್ ಅದಾನಿ ಅವರು ಕಳೆದ ಕೆಲವು ಬಾರಿಯಿಂದಲೂ ಫೋರ್ಬ್ಸ್ನ ವಿಶ್ವದ ಸಿರಿವಂತ ಉದ್ಯಮಿಗಳ ಪಟ್ಟಿಯಲ್ಲಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದನೇ ಸ್ಥಾನದಲ್ಲಿ ಎಲಾನ್ ಮಸ್ಕ್
ಬರ್ನಾರ್ಡ್ ಅರ್ನಾಲ್ಟ್, ಗೌತಮ್ ಅದಾನಿ, ಜೆಫ್ ಬೆಜೋಸ್ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿ ಪೈಪೋಟಿ ನಡೆಸುತ್ತಿದ್ದರೆ ಎಲಾನ್ ಮಸ್ಕ್ ಅವರು 223.8 ಶತಕೋಟಿ ಸಂಪತ್ತಿನೊಂದಿಗೆ ಮೊದಲ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಈ ಮಧ್ಯೆ, ಗೌತಮ್ ಅದಾನಿ ಗ್ರೂಪ್ ಹಸಿರು ಇಂಧನ, ಡೇಟಾ ಕೇಂದ್ರಗಳು, ವಿಮಾ ನಿಲ್ದಾಣಗಳು ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 150 ಶತಕೋಟಿ ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ. ಅದಾನಿ ಗ್ರೂಪ್ನ ಮಾರುಕಟ್ಟೆ ಬಂಡವಾಳ ಕಳೆದ ಏಳು ವರ್ಷಗಳಲ್ಲಿ 16 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.