ನವದೆಹಲಿ: ಅದಾನಿ ಗ್ರೂಪ್ ವಿವಾದದ ವಿಚಾರದಲ್ಲಿ ಸಮಿತಿಯೊಂದರ ರಚನೆಗೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವ ಪ್ರಸ್ತಾವವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳು ಪಾತಾಳಕ್ಕೆ ಕುಸಿದು ಹೋಗಿ ಪರದಾಡುತ್ತಿರುವ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ಮತ್ತು ನಿಯಮಗಳನ್ನು ಬಲಪಡಿಸಲು ತಜ್ಞರಿರುವ ಸಮಿತಿಯೊಂದನ್ನು ರಚಿಸುವ ಬಗ್ಗೆ ಕಳೆದ ವಾರ ಸರ್ವೋಚ್ಚ ನ್ಯಾಯಾಲಯವೇ ಸೂಚಿಸಿತ್ತು. ಅದರಂತೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ತನ್ನ ಸಲಹೆಯನ್ನು ಕೋರ್ಟ್ಗೆ ಸಲ್ಲಿಸಿತು. ಈ ವೇಳೆ ನ್ಯಾಯಾಲಯವು, ಅದಾನಿ ವಿಚಾರದಲ್ಲಿ ಎಲ್ಲವೂ ಪಾದರ್ಶಕವಾಗಿ ಇರಲಿ. ಮುಚ್ಚಿದ ಲಕೋಟೆ ನೀಡುವುದು ಬೇಡ ಎಂದು ಶುಕ್ರವಾರ ಕೇಂದ್ರಕ್ಕೆ ತಿಳಿಸಿದೆ.
ಅದಾನಿ–ಹಿಂಡನ್ಬರ್ಗ್ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯ ವೇಳೆ ಈ ಬೆಳವಣಿಗೆ ಆಗಿದೆ. ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠದಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅದಾನಿ ಕಂಪನಿಗಳ ಹೂಡಿಕೆದಾರರ ಹಿತ ಕಾಪಾಡುವ ಬಗೆ ಹೇಗೆಂದು ನಿರ್ಧರಿಸಲು ನಿವೃತ್ತ ಜಡ್ಜ್ ಹಾಗೂ ಇತರ ತಜ್ಞರು ಇರುವ ಸಮಿತಿ ರಚಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸುಪ್ರೀಂ ಕಳೆದ ವಾರ (ಫೆ. 10) ತಿಳಿಸಿತ್ತು. ಈ ಸಂಬಂಧ ಕೇಂದ್ರ ಇಂದು ಸೀಲ್ ಮಾಡಿದ ಕವರ್ನೊಳಗೆ ತನ್ನ ಸಲಹೆಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಲು ಯತ್ನಿಸಿತು. ಈ ವೇಳೆ ಕೇಂದ್ರದ ಸಲಹೆಯನ್ನು ಮುಚ್ಚಿದ ಲಕೋಟೆಯಲ್ಲಿ ಪಡೆಯಲು ಇಚ್ಛಿಸದ ಕೋರ್ಟ್, ತಾನೇ ಖುದ್ದಾಗಿ ತಜ್ಞರ ಸಮಿತಿ ರಚಿಸುವುದಾಗಿ ಹೇಳಿತು.
ಹೂಡಿಕೆದಾರರ ರಕ್ಷಣೆ ವಿಚಾರದಲ್ಲಿ ನಮಗೆ ಪೂರ್ಣ ಪಾರದರ್ಶಕತೆ ಬೇಕು. ನಾವು ಸಮಿತಿ ರಚಿಸುತ್ತೇವೆ. ಆಗ ಕೋರ್ಟ್ ಬಗ್ಗೆ ಜನರಿಗೆ ವಿಶ್ವಾಸ ಬರುತ್ತದೆ ಎಂದು ಸಿಜೆಐ ಚಂದ್ರಚೂಡ್ ಇಂದಿನ ವಿಚಾರಣೆ ವೇಳೆ ಹೇಳಿದ್ದಾರೆ. ಸಿಜೆಐ ಅಲ್ಲದೇ ನ್ಯಾಯಮೂರ್ತಿಗಳಾದ ಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲ ಅವರೂ ನ್ಯಾಯಪೀಠದಲ್ಲಿದ್ದಾರೆ.
ಅದಾನಿ ಗ್ರೂಪ್ನ ವಿವಾದ ಸಂಬಂಧ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಸರ್ವೋಚ್ಚ ನ್ಯಾಯಾಲಯದ ಮುಂದೆ ಸಲ್ಲಿಕೆ ಆಗಿವೆ. ಕಾಂಗ್ರೆಸ್ ನಾಯಕ ಜಯ ಠಾಕೂರ್, ಸಾಮಾಜಿಕ ಕಾರ್ಯಕರ್ತ ಮುಕೇಶ್ ಕುಮಾರ್ ಮತ್ತು ವಕೀಲರಾದ ಎಂಎಲ್ ಶರ್ಮಾ ಹಾಗು ವಿಶಾಲ್ ತಿವಾರಿ ಅವರು ಈ ಪಿಐಎಲ್ ಸಲ್ಲಿಸಿರುವುದು. ಇವರ ಪೈಕಿ ಎಂಎಲ್ ಶರ್ಮಾ ಅವರು ಹಿಂಡನ್ಬರ್ಗ್ ರೀಸರ್ಚ್ ಸಂಸ್ಥೆಯ ಮೇಲೆ ತನಿಖೆ ಆಗಬೇಕೆಂದು ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಏನಿದು ಅದಾನಿ ವಿವಾದ?
ಗೌತಮ್ ಅದಾನಿ ವಿಶ್ವದ ಮೂರನೇ ಅತೀ ಶ್ರೀಮಂತ ಎನಿಸಿಕೊಂಡವರು. ಹಲವಾರು ವರ್ಷಗಳಿಂದ ಉದ್ಯಮಿಯಾಗಿದ್ದರೂ ಕಳೆದ ಕೆಲ ವರ್ಷಗಳಿಂದ ಬಹಳ ಕ್ಷಿಪ್ರಗತಿಯಲ್ಲಿ ಅವರ ವ್ಯವಹಾರ ವಿಸ್ತರಣೆ ಆಗಿದೆ. ಕೆಲವೇ ಸಾವಿರ ಕೋಟಿಯಷ್ಟು ಸಂಪತ್ತು ಹೊಂದಿದ್ದ ಅವರು ಲಕ್ಷಲಕ್ಷ ಕೋಟಿಯಷ್ಟು ಸಂಪತ್ತಿನ ಒಡೆಯರಾಗಿ ಬೆಳೆದುಹೋಗಿದ್ದಾರೆ. ಅದಾನಿ ಗ್ರೂಪ್ ಸಂಸ್ಥೆ ಕೃತಕವಾಗಿ ತನ್ನ ಕಂಪನಿಗಳ ಷೇರು ಮೌಲ್ಯವನ್ನು ಉಬ್ಬಿಸುವುದು ಸೇರಿದಂತೆ ಹಲವು ಅಕ್ರಮಗಳನ್ನು ಎಸಗಿದೆ ಎಂದು ಹಿಂಡನ್ಬರ್ಗ್ ರಿಸರ್ಚ್ ಎಂಬ ಕಂಪನಿ ಕಳೆದ ತಿಂಗಳು ವರದಿ ಪ್ರಕಟಿಸಿತ್ತು.
ಇದು ಅದಾನಿ ಗ್ರೂಪ್ನ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದ ಜನರಿಗೆ ಅನಿರೀಕ್ಷಿತ ಆಘಾತವನ್ನಂತೂ ತಂದಿತು. ಪರಿಣಾಮ, ಅದಾನಿ ಕಂಪನಿಗಳ ಷೇರುಗಳನ್ನು ಆತುರಾತುರವಾಗಿ ಮಾರಾಟ ಮಾಡತೊಡಗಿದರು. ಷೇರು ಬೆಲೆ ಭಾರೀ ಕುಸಿಯಿತು. ಹೂಡಿಕೆದಾರರು ಲಕ್ಷಾಂತರ ಕೋಟಿ ರೂ ಕಳೆದುಕೊಂಡರು. ಅದಾನಿ ಸಂಪತ್ತೂ ಬಹಳ ಕರಗಿದೆ.
Published On - 3:58 pm, Fri, 17 February 23