ಭಾರತದ ಈ ಇಬ್ಬರು ಶ್ರೀಮಂತರು ಒಂದೇ ದಿನದಲ್ಲಿ ಕಳೆದುಕೊಂಡಿದ್ದು ಕರ್ನಾಟಕ ಬಜೆಟ್ ಗಾತ್ರದ ಎರಡು ಪಟ್ಟಿನ ಮೊತ್ತ
ಭಾರತದ ಈ ಇಬ್ಬರು ಶ್ರೀಮಂತರ ಆಸ್ತಿಯಲ್ಲಿ 5 ಲಕ್ಷ ಕೋಟಿಗೂ ಹೆಚ್ಚು ಮೊತ್ತ ಏಪ್ರಿಲ್ 12ನೇ ತಾರೀಕಿನ ಸೋಮವಾರ ಒಂದೇ ದಿನ ಕೊಚ್ಚಿಹೋಯಿತು. ಯಾರು ಈ ಶ್ರೀಮಂತರು? ಅಷ್ಟು ದೊಡ್ಡ ನಷ್ಟವಾಗಿದ್ದು ಏಕೆ?
ಭಾರತದ ಇಬ್ಬರು ಅತ್ಯಂತ ಶ್ರೀಮಂತರು ಸೇರಿ ಸೋಮವಾರ (ಏಪ್ರಿಲ್ 12, 2021) ಒಂದೇ ದಿನ ಕಳೆದುಕೊಂಡ ಆಸ್ತಿಯ ಪ್ರಮಾಣದ ಬಗ್ಗೆ ಮಂಗಳವಾರ ಬೆಳಗ್ಗೆ ಭರ್ಜರಿ ಸುದ್ದಿಯೋ ಸುದ್ದಿ. ಏಕೆ ಗೊತ್ತಾ? ಇಬ್ಬರಿಂದಲೂ ಸೇರಿ 700 ಕೋಟಿ ಅಮೆರಿಕನ್ ಡಾಲರ್ ಆಸ್ತಿ ಷೇರುಪೇಟೆಯ ಕುಸಿತದಲ್ಲಿ ಕೊಚ್ಚಿಹೋಯಿತು. ಸೆನ್ಸೆಕ್ಸ್ 1700ಕ್ಕೂ ಹೆಚ್ಚು ಪಾಯಿಂಟ್ ಸೋಮವಾರ ನೆಲಕಚ್ಚಿತ್ತು. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 5.25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತವು ಒಂದೇ ದಿನದಲ್ಲಿ ಕಿಡಿ ತಾಕಿದ ಕರ್ಪೂರದಂತೆ ಉಡೀಸ್. 5.25 ಲಕ್ಷ ಕೋಟಿ ರೂಪಾಯಿ ಅಂದರೆ, ಈ ಹಣಕಾಸು (2021-22) ವರ್ಷದಲ್ಲಿ ಕರ್ನಾಟಕ ರಾಜ್ಯ ಮಂಡಿಸಿದ ಬಜೆಟ್ಗೆ ಹೋಲಿಸಿ, ಹೇಳುವುದಾದರೆ ಎರಡು ವರ್ಷಕ್ಕೆ ಆಗುವುದಕ್ಕಿಂತ ಹೆಚ್ಚಿನ ಮೊತ್ತ ಆಗುತ್ತದೆ.
ಆ ಇಬ್ಬರು ಶ್ರೀಮಂತರು ಅಂತ ಹೇಳಿದಿರಿ, ಯಾರು ಅವರಿಬ್ಬರು ಅಂತ ನಿಮ್ಮ ಮನಸ್ಸಿನಲ್ಲಿ ಖಂಡಿತಾ ಪ್ರಶ್ನೆ ಬರುತ್ತದೆ. ಒಬ್ಬರು, ಗೌತಮ್ ಅದಾನಿ, ಮತ್ತೊಬ್ಬರು ಮುಕೇಶ್ ಅಂಬಾನಿ. ಅದಾನಿ ಆಸ್ತಿಯಲ್ಲಿ 420 ಕೋಟಿ ಅಮೆರಿಕನ್ ಡಾಲರ್ ಕರಗಿಹೋಗಿದೆ. ಇದನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ತಿಳಿಸಬೇಕೆಂದರೆ, 3,15,000 ಕೋಟಿಗೂ ಹೆಚ್ಚು. ಸೋಮವಾರ ಷೇರುಪೇಟೆಯಲ್ಲಿ ಅದಾನಿ ಗುಂಪಿನ ಎಲ್ಲ ಷೇರುಗಳ ಬೆಲೆ ಇಳಿಕೆ ಕಂಡಿತು. ಅದರ ಫಲಿತ ಇದು. ಕಳೆದ ತಿಂಗಳಷ್ಟೇ ದಾಖಲೆ ಬರೆದಿದ್ದರು ಗೌತಮ್ ಅದಾನಿ. ಜೆಫ್ ಬೆಜೋಸ್, ಮಸ್ಕ್, ಬಫೆಟ್ ಇತರ ಎಲ್ಲರನ್ನೂ ಮೀರಿಸಿ ಈ ವರ್ಷದಲ್ಲಿ ಸಂಪತ್ತಿನ ಗಳಿಕೆ ಪ್ರಮಾಣದಲ್ಲಿ ದಾಖಲೆ ಮಾಡಿದ್ದರು.
ಏಪ್ರಿಲ್ 12ನೇ ತಾರೀಕಿನಂದು ಅದಾನಿ ಗುಂಪಿನ ಯಾವ ಷೇರು ಎಷ್ಟು ಇಳಿಕೆ ಆಯಿತು ಎಂಬ ವಿವರ ಹೀಗಿದೆ: ಅದಾನಿ ಟ್ರಾನ್ಸ್ಮಿಷನ್ ಲಿ. ಶೇ 5, ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್ ಶೇ 8.94, ಅದಾನಿ ಗ್ರೀನ್ ಎನರ್ಜಿ ಶೇ 5, ಅದಾನಿ ಟೋಟಲ್ ಗ್ಯಾಸ್ 9.36, ಅದಾನಿ ಪವರ್ ಶೇ 4.97, ಅದಾನಿ ಎಂಟರ್ಪ್ರೈಸಸ್ ಶೇ 11.1ರಷ್ಟು ನೆಲ ಕಚ್ಚಿತು.
ಮುಕೇಶ್ ಅಂಬಾನಿ ಆಸ್ತಿಯಲ್ಲಿ 270 ಕೋಟಿ ಅಮೆರಿಕನ್ ಡಾಲರ್ ಕಡಿಮೆ ಆಯಿತು. ಷೇರು ಮಾರ್ಕೆಟ್ನಲ್ಲಿ ಅತಿದೊಡ್ಡ ಕುಸಿತ ಕಂಡ ಕಂಪೆನಿಗಳಲ್ಲಿ ಒಂದು ರಿಲಯನ್ಸ್ ಇಂಡಸ್ಟ್ರೀಸ್. 270 ಕೋಟಿ ಅಮೆರಿಕನ್ ಡಾಲರ್ ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 2 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಅಂದಹಾಗೆ ಸೋಮವಾರ ರಿಲಯನ್ಸ್ ಸಮೂಹದ ಯಾವ ಷೇರು, ಎಷ್ಟು ಇಳಿಕೆ ಕಂಡಿತು ಎಂಬ ವಿವರ ಹೀಗಿದೆ: ರಿಲಯನ್ಸ್ ಇಂಡಸ್ಟ್ರೀಸ್ ಶೇ 3.35, ರಿಲಯನ್ಸ್ ಪವರ್ ಶೇ 9.3, ರಿಲಯನ್ಸ್ ಹೋಮ್ ಫೈನಾನ್ಸ್ ಶೇ 4.08, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಶೇ 10.25, ರಿಲಯನ್ಸ್ ಕಮ್ಯುನಿಕೇಷನ್ಸ್ ಶೇ 2.94, ರಿಲಯನ್ಸ್ ನೇವಲ್ ಅಂಡ್ ಎಂಜಿನಿಯರಿಂಗ್ ಶೇ 4.84, ರಿಲಯನ್ಸ್ ಕ್ಯಾಪಿಟಲ್ ಶೇ 4.57ರಷ್ಟು ನೆಲ ಕಚ್ಚಿತು.
ಕೊರೊನಾ ಎರಡನೇ ಅಲೆಯಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಸಕ್ರಿಯ ಪ್ರಕರಣಗಳ ಸಂಖ್ಯೆಯಿಂದ ಇಂಥದ್ದೊಂದು ಕುಸಿತ ಕಂಡುಬಂತು ಎಂದು ವಿಶ್ಲೇಷಕರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಇನ್ನು ಷೇರು ಮಾರುಕಟ್ಟೆ ಕುಸಿದರೆ ಇವರ ಶ್ರೀಮಂತಿಕೆ ಯಾಕೆ ಕಡಿಮೆ ಆಗಬೇಕು ಎಂಬ ಪ್ರಶ್ನೆ ಬರುವುದು ಸಹಜ.
ನಿಮಗೆ ಗೊತ್ತಿರಲಿ, ಇವರ ಆಸ್ತಿ ಎಂದು ಲೆಕ್ಕ ಹಾಕುವುದು ಬಹುತೇಕ ಕಂಪೆನಿಯಲ್ಲಿನ ಷೇರಿನ ರೂಪದಲ್ಲೇ ಇರುತ್ತದೆ. ಅದಾನಿ ಸಮೂಹದ ಕಂಪೆನಿಗಳಲ್ಲಿ ಗೌತಮ್ ಅದಾನಿಯ ಒಡೆತನದಲ್ಲಿ ಇಷ್ಟಿಷ್ಟು ಪರ್ಸೆಂಟ್ ಷೇರು ಇರುತ್ತದೆ. ಅದರ ಇಂದಿನ ಮೌಲ್ಯ, ಅದಾನಿ ವೇತನ ಮತ್ತಿತರ ಮೂಲದ ಆದಾಯಗಳನ್ನು ಲೆಕ್ಕ ಹಾಕಿ, ಶ್ರೀಮಂತಿಕೆಯ ತಕ್ಕಡಿಯಲ್ಲಿ ತೂಗಲಾಗುತ್ತದೆ. ಇದೇ ಮಾತು ಮುಕೇಶ್ ಅಂಬಾನಿಗೂ ಅನ್ವಯಿಸುತ್ತದೆ. ರಿಲಯನ್ಸ್ ಸಮೂಹದ ಕಂಪೆನಿಗಳಲ್ಲಿ ಹೊಂದಿರುವ ಷೇರು, ವೇತನ ಎಲ್ಲ ಲೆಕ್ಕ ಇಟ್ಟುಕೊಂಡು ಅಳೆಯಲಾಗುತ್ತದೆ. ಆದರೆ ಇದು ನಿಖರ ಸಂಖ್ಯೆಯಲ್ಲ.
ಇದನ್ನೂ ಓದಿ: Bloodbath in stock market | ಕೊರೊನಾ ಎರಡನೇ ಅಲೆ ಆತಂಕದಲ್ಲಿ ಷೇರುಪೇಟೆ ಹೂಡಿಕೆದಾರರ 6 ಲಕ್ಷ ಕೋಟಿ ರೂ. ಖಲಾಸ್
(India’s richest people Gautam Adani and Mukesh Ambani lost more than Rs 5 lakh crore in a single day on April 12, 2021, stock market crash.)